





ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಸುದಾನ ಚರ್ಚ್ ಸಹಧರ್ಮಪಾಲಕ ರೆ.ಏಸಾವ್ ಎಸ್ ಕುಮಾರ್ ಅವರು ಚಾಚಾ ನೆಹರು ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿದರು.



ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಿಶೋರ ವಿಭಾಗ ‘ಬನ್ನಿ’ ಯನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ದೀಪೋಜ್ವಲನವನ್ನು ಮಾಡಿ, ಉದ್ಘಾಟಿಸಿ ” ಮಕ್ಕಳು ಸಮಾಜಮುಖಿಯಾಗಿ ಬೆಳೆಯಲು ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಉತ್ತಮ ವೇದಿಕೆ. ಪೂರ್ವಪ್ರಾಥಮಿಕ ತರಗತಿಯಿಂದಲೇ ಇದನ್ನು ಆರಂಭಿಸಿದರೆ ವಿದ್ಯಾರ್ಥಿಗಳು ಶಿಸ್ತು ಸಂಯಮವನ್ನು ರೂಢಿಸಿಕೊಳ್ಳುತ್ತಾರೆ ” ಎಂದರು. ‘ಬನ್ನಿ’ ಕಿಶೋರ ಸಂಘದ ಧ್ಯೇಯೋದ್ದೇಶದ ಬಗ್ಗೆ ಸಹ ಶಿಕ್ಷಕಿ ಸುಜಾತ ಮಹೇಶ್ ಅವರು ವಿವರಿಸಿದರು.





ಸುದಾನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಮುಖ್ಯ ಶಿಕ್ಷಕಿ ಶೋಭಾನಾಗರಾಜ್, ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್ ವೇದಿಕೆಯಲ್ಲಿ ಉಪಸ್ಥಿತರಿದದ್ದು, ಶುಭಹಾರೈಸಿದರು.

ವಿದ್ಯಾರ್ಥಿ ಮನೀಶ್ ಯು ಶೆಟ್ಟಿ(10) ದಿನದ ಮಹತ್ವವನ್ನು ವಿವರಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನವು ನಡೆಯಿತು. ವಿದ್ಯಾರ್ಥಿಗಳಿಗಾಗಿ ಹಲವು ಚಟುವಟಿಕೆಗಳನ್ನೂ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿ ಧೃತಿ ವಿ ಶೆಟ್ಟಿ (9) ಸ್ವಾಗತಿಸಿ , ವಿದ್ಯಾರ್ಥಿಗಳಾದ ಸಮೃದ್ಧಿ (10) ಮತ್ತು ಶ್ರಾವ್ಯ (10) ಕಾರ್ಯಕ್ರಮವನ್ನು ನಿರೂಪಿಸಿದರು. ಸುದಾನ ಶಾಲೆಯ ಪ್ರತಿಭಾ ಕಲಾ ಸಂಘವು ಕಾರ್ಯಕ್ರಮ ಆಯೋಜನೆ ಮಾಡಿತ್ತು.










