





ಇನ್ನೂರಿಪ್ಪತ್ತು ಮಕ್ಕಳ ಮೂವತ್ತನಾಲ್ಕು ಸ್ಟಾಲ್ಗಳಿಗೆ ಸಾವಿರಾರು ಮಂದಿ ಖರೀದಿದಾರರು!


ಪುತ್ತೂರು: ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಪ್ರಾಯೋಗಿಕ ಕಲಿಕೆ ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳಿಂದ ವೈಜ್ಞಾನಿಕ ಅನ್ವೇಷಣೆಗಳು, ವಿನೂತನ ಸಾಧ್ಯತೆಗಳ ಅನಾವರಣಗಳೂ ಕಾಣಸಿಗುತ್ತವೆ. ಆದರೆ ಕಲೆ, ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕ ಅನುಭವ ಪಡೆಯುವ ಸಾಧ್ಯತೆಗಳು ಕಡಿಮೆ.





ಆದರೆ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆ ತನ್ನ ವಿದ್ಯಾರ್ಥಿಗಳಲ್ಲಿ ವಾಣಿಜ್ಯ ವ್ಯವಹಾರ ಜ್ಞಾನ ತುಂಬುವ ಹಿನ್ನೆಲೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಂಡಿತ್ತು. ಅದುವೇ ಬಝಾರ್ ಫೆಸ್ಟಿವಲ್. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವ ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅರ್ಧ ದಿನ ವ್ಯಾಪಾರ ವಹಿವಾಟು ನಡೆಸುವಂತೆ ಕರೆ ನೀಡಿತ್ತು. ಪರಿಣಾಮವಾಗಿ ಶಾಲೆಯ ಎದುರಿನ ವಿಶಾಲವಾದ ಶ್ರೀ ಶಂಕರ ಸಭಾಭವನದಲ್ಲಿ ಭರ್ತಿ ಮೂವತ್ತನಾಲ್ಕು ಭಿನ್ನ ಭಿನ್ನ ವ್ಯಾಪಾರ ಕೇಂದ್ರಗಳು ತಲೆ ಎತ್ತಿ ನಿಂತಿದ್ದವು.

ಮನೆಯಲ್ಲೇ ತಯಾರಿಸಿದ ಹೋಳಿಗೆ, ಅತಿರಸ, ಜಾಮೂನು, ತಂಬಿಟ್ಟುಂಡೆ, ಗೋಧಿ ಉಂಟೆ, ಡ್ರೈಫ್ರುಟ್ಸ್, ಮಿಕ್ಸರ್ಗಳ ಸ್ಟಾಲ್ಗಳು ಒಂದೆಡೆಯಾದರೆ ಬಿಸಿ ಬಿಸಿ ಬಜ್ಜಿ, ಮಸಾಲಪುರಿ, ಪಾನಿಪುರಿ, ಚರುಂಬುರಿಯೇ ಮೊದಲಾದ ಸ್ಟಾಲ್ಗಳು ಮತ್ತೊಂದೆಡೆ ನೆರೆದವರನ್ನು ಕೈಬೀಸಿ ಕರೆಯುತ್ತಿದ್ದವು. ಇನ್ನು ಮಜ್ಜಿಗೆ, ವಿವಿಧ ಬಗೆಯ ಜ್ಯೂಸ್, ರೆಡಿಮೇಡ್ ತಂಪುಪಾನೀಯಗಳೇ ಮೊದಲಾದ ಪಾನೀಯಗಳು ಆಗಮಿಸಿದವರ ಬಾಯಾರಿಕೆಯನ್ನು ತಣಿಸುತ್ತಿದ್ದವು. ಜತೆಗೆ ಮಹಿಳೆಯರ ಕಿವಿ, ಮೂಗಿನ ಆಭರಣಗಳು, ಪುಸ್ತಕಗಳು, ಕೀ ಪಂಚ್ಗಳು ಬಿಡುವಿಲ್ಲದೆ ಬಿಕರಿಯಾದವು. ಅಲಂಕಾರಿಕ ಕೈ ಕುಸುರಿಗಳು, ಟೇಬಲ್ ಡೆಕರೇಟಿವ್ ವಸ್ತುಗಳೇ ಮೊದಲಾದವುಗಳು ಜನಮನ ಸೆಳೆದವು. ಹರಿವೆ, ಬಸಳೆ, ಪಡುವಲಕಾಯಿಯಂತಹ ಹಸುರು ತರಕಾರಿಗಳು ಕ್ಷಣಾರ್ಧದಲ್ಲಿ ಮಾರಾಟವಾಗಿ ವಿದ್ಯಾರ್ಥಿ ಉದ್ಯಮಿಗಳ ಮೊಗದಲ್ಲಿ ವಿಜಯದ ನಗು ತರಿಸಿತು. ಪುನರ್ಪುಳಿ, ಹುಣಸೆಹಣ್ಣು, ಎಳೆನೀರಿನ ಜ್ಯೂಸ್ಗಳು, ಐಸ್ ಕ್ರೀಂಗಳು ನೆರೆದವರ ದಾಹಕ್ಕೆ ತಂಪನ್ನಿತ್ತವು. ತನ್ಮಧ್ಯೆ ನಿಗದಿತ ಸಂಖ್ಯೆಗೆ ಹಣ ಹೂಡಿ ಲೂಡೋ ಕಾಯಿನ್ನಲ್ಲಿ ಅದೇ ಸಂಖ್ಯೆ ಬಂದರೆ ಹಣ ದುಪ್ಪಟ್ಟು ಪಡೆಯುವ ಆಟ ಹಲವರ ಅದೃಷ್ಟ ಪರೀಕ್ಷೆ ನಡೆಸಿತು.
ಅಚ್ಚರಿಯ ಸಂಗತಿಯೆಂದರೆ ಕೆಲವು ವ್ಯಾಪಾರ ಕೇಂದ್ರಗಳ ಆದಾಯ ಐದಾರು ಸಾವಿರವನ್ನೂ ಮೀರಿಸಿತ್ತು! ಅಂದಹಾಗೆ ಲಾಭ ನಷ್ಟ ಏನೇ ಇದ್ದರೂ ಅದು ಸ್ಟಾಲ್ ಇಟ್ಟ ವಿದ್ಯಾರ್ಥಿ ಉದ್ಯಮಿಗಳಿಗೇ! ಸ್ಟಾಲ್ನಲ್ಲಿ ಉಳಿಕೆಯಾದ ವಸ್ತುಗಳ ಹೊಣೆಯೂ ಅವರದ್ದೇ. ಒಂದೆರಡು ಸ್ಟಾಲ್ಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸ್ಟಾಲ್ಗಳು ಭರ್ಜರಿ ಆದಾಯಗಳಿಸಿದವು. ಲಾಭ ಗಳಿಸಿದವರಿಗೆ ಯಾವ ವ್ಯವಹಾರ ಲಾಭ ತರುತ್ತದೆ ಎಂಬ ಜ್ಞಾನ ನೀಡಿದರೆ, ನಷ್ಟ ಅನುಭವಿಸಿದವರಿಗೆ ತಾವೇಕೆ ಸೋತೆವು ಎಂಬ ಆತ್ಮ ವಿಮರ್ಶೆ ಮಾಡಿಕೊಳ್ಳುವ ಅವಕಾಶ ದೊರಕಿತು.
’ಮಕ್ಕಳಲ್ಲಿ ಉದ್ಯಮ ಶೀಲತೆಯ ಕಲ್ಪನೆ ಬೆಳೆಯಬೇಕು. ಸ್ವಂತ ವ್ಯವಹಾರ. ಸ್ಟಾಟ್ ಅಪ್ ಮಾಡುವ ಮನಸ್ಥಿತಿ ಎಳೆಯ ಹಂತದಿಂದಲೇ ಬೆಳೆಯಬೇಕು. ವಿದೇಶದ ಯಾವುದೋ ಕಂಪೆನಿಗೆ ಹೋಗಿ ಶರಣಾಗುವ ಬದಲು ತಾನೇ ಸ್ವಯಂ ಉದ್ಯಮ ನಿರ್ಮಿಸಿ ಹತ್ತಾರು ಜನರಿಗೆ ಉದ್ಯೋಗದಾತ ಎನಿಸುವ ಕಲ್ಪನೆ ಮಕ್ಕಳಲ್ಲಿ ಬಂದರೆ ಮುಂದೆ ಅದು ನೂತನ ಉದ್ಯಮಗಳಿಗೆ ತಳಹದಿಯಾಗಬಹುದು. ನಮ್ಮ ದೇಶವನ್ನು ಪ್ರೀತಿಸುವ ಟಾಟಾರಂತಹ ದೇಶಪ್ರೇಮಿ ಉದ್ಯಮಿಗಳನ್ನು, ಸಂಸ್ಥೆಗಳನ್ನು ಹುಟ್ಟುಹಾಕುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು ಎಂಬುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರ ಮಾತು.
ತೆರೆಮರೆಯ ಸಿದ್ಧತೆ:
ಈ ಕಾರ್ಯಕ್ರಮ ಆಯೋಜನೆಯಲ್ಲಿ ಆಡಳಿತ ಮಂಡಳಿಯ ಜತೆಗೆ ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ಹೆತ್ತವರ ಉತ್ಸಾಹವೂ ಪ್ರಮುಖ ಪಾತ್ರ ವಹಿಸಿತ್ತು. ಆರನೆಯ ತರಗತಿಯಿಂದ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಸ್ಟಾಲ್ ನಡೆಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಕನಿಷ್ಟ ಮೂರರಿಂದ ಗರಿಷ್ಟ ಐದು ಜನ ವಿದ್ಯಾರ್ಥಿಗಳನ್ನೊಳಗೊಂಡ ಸ್ಟಾಲ್ ರೂಪಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಅದರನ್ವಯ ವಿದ್ಯಾರ್ಥಿಗಳೇ ತಮ್ಮ ತಮ್ಮ ತಂಡವನ್ನು ರೂಪಿಸಿಕೊಂಡು, ತಮ್ಮದೇ ಯೋಜನೆಯ ಸ್ಟಾಲ್ ನಡೆಸುವುದಕ್ಕೆ ಸಿದ್ಧರಾಗಿ ನಿಂತಿದ್ದರು. ಕೆಲವರು ತಾವೇ ಮನೆಯಲ್ಲಿ ಸಿದ್ಧಪಡಿಸಿದ ವಸ್ತುಗಳ ಸ್ಟಾಲ್ ಅನ್ನು ಸಿದ್ಧಗೊಳಿಸಿದರೆ ಮತ್ತೆ ಕೆಲವರು ವಸ್ತುಗಳನ್ನು ಬೇರೆಡೆಯಿಂದ ತಂದು ವ್ಯಾಪಾರಕ್ಕೆ ಅಣಿಯಾಗಿದ್ದರು. ಹೀಗೆ ಒಟ್ಟು 220 ಮಂದಿ ವಿದ್ಯಾರ್ಥಿಗಳು ಸೇರಿಕೊಂಡು 34 ಸ್ಟಾಲ್ ಅನ್ನು ರೂಪಿಸಿ ವ್ಯಾಪಾರಕ್ಕೆ ಅಣಿಯಾಗಿದ್ದರು. ಆಯಾ ಸ್ಟಾಲ್ಗಳ ಮೇಲ್ವಿಚಾರಣೆಗೆ ಶಿಕ್ಷಕ ವೃಂದದವರೂ ಇದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಈ ಸ್ಟಾಲ್ ವೀಕ್ಷಣೆ ಹಾಗೂ ಖರೀದಿಗಾಗಿ ಅಂಬಿಕಾ ವಿದ್ಯಾಲಯ ಅಲ್ಲದೆ ಅಂಬಿಕಾ ಪದವಿಪೂರ್ವ, ಪದವಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ವೃಂದ, ಹೆತ್ತವರು ಮಾತ್ರವಲ್ಲದೆ ಸಮಾಜದ ಮಂದಿ ಭಾಗಿಯಾದದ್ದು ವಿಶೇಷವೆನಿಸಿತು. ಅಂತಿಮವಾಗಿ, ವ್ಯವಹಾರವೆಲ್ಲಾ ಮುಗಿದು, ದಿನದ ಕೊನೆಯಲ್ಲಿ ಲೆಕ್ಕಕ್ಕೆ ಕುಳಿತಾಗ ಒಂದು ಲಕ್ಷಕ್ಕೂ ಮೀರಿದ ವ್ಯಾಪಾರ ನಡೆದದ್ದು ಕಂಡು ಬಂತು!

’ಈ ’ಬಝಾರ್ ಫೆಸ್ಟ್’ ಮಾಡುವಲ್ಲಿ ಹೆತ್ತವರ ಸಹಕಾರ ದೊಡ್ಡದು. ಮಕ್ಕಳಿಗೆ ಹಣಕಾಸಿನ ವ್ಯವಸ್ಥೆಯನ್ನು ಮಾಡುವ ಮೂಲಕ ಯೋಜನೆಯನ್ನು ಬೆಂಬಲಿಸಿದ್ದಾರೆ. ಹಾಗಾಗಿಯೇ ಕಾರ್ಯಕ್ರಮ ಅತ್ಯಂತ ತೃಪ್ತಿದಾಯಕವಾಗಿ ನಡೆದಿದೆ. ಅಂತೆಯೇ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ಬಳಗದ ಸಹಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ. ವ್ಯಾಪಾರ ಹೇಗಿರುತ್ತದೆ, ಲಾಭ ನಷ್ಟ ಹೇಗಾಗುತ್ತದೆ, ವಿವಿಧ ಬಗೆಯ ಮಾಲಿಕತ್ವಗಳ ಕಲ್ಪನೆ ಈ ಕಾರ್ಯಕ್ರಮದಿಂದ ಮಕ್ಕಳಿಗೆ ಅರಿವಾಗಿದೆ’ ಎನ್ನುವುದು ಪ್ರಾಂಶುಪಾಲೆ ಮಾಲತಿ ಡಿ ಅವರ ಮಾತುಗಳು.
ಬಝಾರ್ ಫೆಸ್ಟ್ ನಮಗೆ ಒಳ್ಳೆಯ ಅನುಭವ ನೀಡಿದೆ. ಹಣದ ವ್ಯವಹಾರ ಹೇಗೆ ನಡೆಯುತ್ತದೆ, ಉತ್ತಮ ವ್ಯಾಪಾರ ಹೇಗೆ ಮಾಡಬಹುದು ಎಂಬುದಷ್ಟೇ ಅಲ್ಲದೆ ನಮ್ಮ ವ್ಯವಹಾರಕ್ಕೆ ಪ್ರಚಾರ ಹೇಗೆ ಮಾಡಬೇಕು ಎಂಬ ಕಲ್ಪನೆಯನ್ನೂ ಈ ಫೆಸ್ಟ್ ನಮ್ಮಲ್ಲಿ ತುಂಬಿದೆ
– ಸುಧನ್ವ ಕೆ. ಏಳನೇ ತರಗತಿ ವಿದ್ಯಾರ್ಥಿ
ಬಝಾರ್ ಫೆಸ್ಟ್ ವ್ಯಾಪಾರೋದ್ಯಮದ ಸಾಧ್ಯಾಸಾಧ್ಯತೆಗಳನ್ನು ನಮಗೆ ಕಲಿಸಿಕೊಟ್ಟಿದೆ. ಜತೆಗೆ ಪರಸ್ಪರ ಸಹಕಾರದೊಂದಿಗೆ ಹೇಗೆ ವ್ಯಾಪಾರ ನಡೆಸಬಹುದು ಎಂಬ ಅನುಭವವನ್ನೂ ನೀಡಿದೆ. ಇದೊಂದು ಅತ್ಯುತ್ತಮ ಅವಕಾಶ.
– ಮನಸ್ವಿ, ಎಂಟನೆ ತರಗತಿ ವಿದ್ಯಾರ್ಥಿನಿ








