




ಮುಖ್ಯರಸ್ತೆ ಕೊಂಬೆಟ್ಟು ಬಳಿ ರೂ.50 ಲಕ್ಷದಲ್ಲಿ ರಸ್ತೆ, ಚರಂಡಿ ಅಭಿವೃದ್ದಿಗೆ ಶಿಲಾನ್ಯಾಸ



ಪುತ್ತೂರು: ಪುತ್ತೂರು ನಗರಯೋಜನಾ ಪ್ರಾಧಿಕಾರದ 2ನೇ ಪ್ರಮುಖ ಜನೋಪಯೋಗಿ ಯೋಜನೆಯಾಗಿ ರೂ.50 ಲಕ್ಷ ವೆಚ್ಚದಲ್ಲಿ ರಸ್ತೆ ಅಗಲೀಕರಣ, ಚರಂಡಿ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮವು ಡಿ.13 ರಂದು ಕೊಂಬೆಟ್ಟು ಜಂಕ್ಷನ್ನಲ್ಲಿರುವ ವಿಜಯಸುಪಾರಿ ಸಂಸ್ಥೆಯ ಎದುರು ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಅವರು ಶಿಲಾನ್ಯಾಸ ನೆರವೇರಿಸಿದರು.





30 ವರ್ಷದಲ್ಲಿ ಅಗದ ಕೆಲಸ ಪುತ್ತೂರಿನಲ್ಲಿ ಈಗ ಆಗಲಿದೆ:
ಶಿಲಾನ್ಯಾಸ ನೆರವೇರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಹಿಂದೆ ಇದೆಯೋ ಇಲ್ಲವೋ ಗೊತ್ತಾಗುತ್ತಿರಲಿಲ್ಲ. ಆದರೆ ಈಗಿನ ತಂಡ ಉತ್ತಮ ಕೆಲಸ ಮಾಡುತ್ತಿದೆ. ಪುತ್ತೂರಿನಲ್ಲಿ ಯಾವೆಲ್ಲ ಸರ್ಕಲ್ ಇದೆಯೋ ಅದೆನ್ನಲ್ಲ ಅಗಲೀಕರಣ ಮಾಡಲಾಗುವುದು. ಮೊತ್ತಮೊದಲಿಗೆ ಮಯೂರದ ಬಳಿ ತುಂಬಾ ಅಡಚನೆಯ ಸಮಸ್ಯೆ ಇತ್ತು. ಈ ಭಾಗದಲ್ಲಿ ಅನೇಕ ವಾಹನ ಗುಂಡಿಗೆ ಬಿದ್ದ ಉದಾಹರಣೆ ಇದೆ. ವರ್ತಕರ ಬೇಡಿಕೆಯಂತೆ ಕೊಳಚೆ ನೀರಿನ ದುರ್ವಾಸನೆ ನಿರ್ಮೂಲನೆಗೆ ಪ್ರತ್ಯೇಕ ಚರಂಡಿ ಆಗಬೇಕಾಗಿದೆ. ಹಾಗಾಗಿ ರೂ. 50ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಮುಂದೆ ಅರುಣಾ ಮಂದಿರ ಬಳಿಯೂ ರಸ್ತೆ ಅಗಲೀಕರಣ ನಡೆಯಲಿದೆ. ಹಂತ ಹಂತವಾಗಿ ಅಭಿವೃದ್ಧಿಯ ಕಾಮಗಾರಿ ನಡೆಯಲಿದೆ. ನಗರಾಭಿವೃದ್ಧಿ ಯೋಜನೆಯಲ್ಲಿ ರೂ. 10 ಕೋಟಿಯ ಬೇರೆ ಬೇರೆ ಯೋಜನೆ ಈಗಾಗಲೇ ಇದೆ. ಅದರಲ್ಲಿ ದೇವಸ್ಥಾನ, ರಾಷ್ಟ್ರಧ್ವಜ, ಕ್ಲಾಕ್ ಟವರ್ ಕಾಮಗಾರಿ ನಡೆಯಲಿದೆ. ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಜಿಮ್, ಲೈಟ್ ಹಾಕುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಜನರ ಮನಸ್ಸು ಗೆಲ್ಲುವ ಸಲುವಾಗಿ ಕೆಲಸ ಮಾಡಬೇಕಾಗಿದೆ. ಪುತ್ತೂರಿನ ಅಭಿವೃದ್ದಿಗೆ ಉದ್ಯೊಗ, ಟೂರಿಸಂ ಆಗಬೇಕು. ಇಷ್ಟರ ತನಕ ಅನುದಾನ ತರುತ್ತಿದ್ದೆ. ಇನ್ನು ತಂದ ಅನುದಾನದಲ್ಲಿ ಜನರಿಗೆ ಕಣ್ಣಿಗೆ ಕಾಣುವ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. 30 ವರ್ಷದಲ್ಲಿ ಆಗದ ಕೆಲಸ ಪುತ್ತೂರಿನಲ್ಲಿ ಈಗ ಆಗಲಿಕ್ಕಿದೆ ಎಂದು ಹೇಳಿದರು.
ಪುತ್ತೂರು ನಗರಾಭಿವೃದ್ದಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಗರಾಭಿವೃದ್ದಿ ಯೋಜನಾ ಪ್ರಾಧಿಕಾರದ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಪಿ ಶೆಟ್ಟಿ, ಅನ್ವರ್ ಖಾಸಿಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ, ಅಕ್ರಮ ಸಮಿತಿ ರಾಮಣ್ಣ ಪಿಲಿಂಜ, ಮುರಳಿಧರ ರೈ ಮಠಂತಬೆಟ್ಟು, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.








