ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಯಾಂಪ್ಕೋ ಗೆ ಅಭಿನಂದನಾ ಸಮಾರಂಭ

0

ಪುತ್ತೂರು: ಒಂದು ಸಣ್ಣ ವಿಷಯವನ್ನು ಆರಿಸಿಕೊಂಡು ಅದರ ಬಗ್ಗೆ ಅಗಾಧವಾದ ಸಂಶೋಧನೆಯನ್ನು ಮಾಡುವುದಕ್ಕೆ ಸಾಧ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ಕೃಷಿಕರ ಏಳಿಗೆಗೆ ತನ್ಮೂಲಕ ಸಮಾಜದ ಒಳಿತಿಗೆ ಅಗತ್ಯವಾದ ಸಂಶೊಧನೆಯಲ್ಲಿ ನಿರತರಾಗಬೇಕು ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಾವರ್ಕರ್ ಸಭಾಭವನದಲ್ಲಿ ಕಾಲೇಜಿನ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ
ಸನ್ಮಾನವನ್ನು ಸ್ವೀಕರಿಸಿ ಮಾತಾಡಿದರು.

ಸಂಘದ ಸ್ವಯಂಸೇವಕರಿಗೆ ಸನ್ಮಾನ ಹಿತವಾಗುವುದಿಲ್ಲ ಆದರೆ ಸುಮಾರು 50 ವರ್ಷಗಳಿಂದ ನನ್ನನ್ನು ತಿದ್ದಿ ತೀಡಿ ಮಾರ್ಗದರ್ಶನವನ್ನು ನೀಡಿದ ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರಿಂದ ಗೌರವವನ್ನು ಸ್ವೀಕರಿಸುವುದು ಆಶಿರ್ವಾದ ಎಂದು ಭಾವಿಸುತ್ತೇನೆ. ಈ ಸನ್ಮಾನವು ನಮ್ಮ ಜವಾಬ್ಧಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದರು. ಕ್ಯಾಂಪ್ಕೋ ಹಾಗೂ ವಿವೇಕಾನಂದ ಸಂಸ್ಥೆಗಳ ಮಧ್ಯೆ 2018ರ ಅಡಿಕೆ ಯಂತ್ರಮೇಳದಿಂದ ಪ್ರಾರಂಭವಾದ ಬಾಂಧವ್ಯವು ಹೀಗೆಯೇ ಮುಂದುವರಿಯಲಿದೆ ಎಂದು ನುಡಿದರು.


ಸನ್ಮಾನವನ್ನು ಸ್ವೀಕರಿಸಿದ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಮಹೇಶ್ ಚೌಟ ಮಾತನಾಡಿ, ಪ್ರತಿಷ್ಟಿತ ಸಹಕಾರಿ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ಧಾರಿ ಸಿಕ್ಕಿದ್ದು ಅದನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದರು. ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಿನವರು ಕೃಷಿ ಕುಟುಂಬದಿಂದ ಬಂದವರಾಗಿದ್ದು, ಕೃಷಿ ಕ್ಷೇತ್ರದ ಒಳಿತಿಗೆ ಕೆಲಸ ಮಾಡಬೇಕು ಎಂದರು.

ಸನ್ಮಾನವನ್ನು ಸ್ವೀಕರಿಸಿದ ಇನ್ನೋರ್ವ ನಿರ್ದೇಶಕ ಮುರಳೀಕೃಷ್ಣ.ಕೆ.ಎನ್ ಮಾತನಾಡಿ ಇದು ಮನೆಯ ಮಗನಿಗೆ ಸಲ್ಲಿಸಿದ ಸನ್ಮಾನ ಎಂದರು. ಎಂಟು ವರ್ಷಗಳ ಕಾಲ ವಿವೇಕಾನಂದ ಸಂಸ್ಥೆಯಲ್ಲಿ ಕಲಿತ ನನಗೆ ಆ ಸಂದರ್ಭದಲ್ಲಿ ದೊರೆತ ಮೌಲ್ಯಯುತ ಶಿಕ್ಷಣದಿಂದಾಗಿ ನಾನು ಸಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶ ಸಿಗುವಂತಾಯಿತು ಎಂದರು.

ಸಹಕಾರಿ ರತ್ನ ವಾರಣಾಸಿ ಸುಬ್ರಾಯ ಭಟ್ ಅವರ ಕನಸಿನ ಕೂಸಾಗಿರುವ ಕ್ಯಾಂಪ್ಕೋ ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಏರಿಸುವ ಸರ್ವ ಪ್ರಯತ್ನವನ್ನು ಮಾಡುವುದಾಗಿ ಹೇಳಿದರು. ನಮ್ಮದೇ ಸಂಸ್ಥೆ ಕ್ಯಾಂಪ್ಕೋದ ಉತ್ಪನ್ನಗಳನ್ನು ಬಳಸಿ ಹೆಚ್ಚು ಪ್ರಚಾರ ನೀಡುವುದರ ಮೂಲಕ ರೈತರ ಏಳಿಗೆಗೆ ಎಲ್ಲರೂ ಸಹಕರಿಸಬೇಕು ಎಂದರು.


ಮತ್ತೋರ್ವ ನಿರ್ದೇಶಕ ಗಣೇಶ್ ಅವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಮಾತನಾಡಿ ಶತಮಾನಗಳಷ್ಟು
ಇತಿಹಾಸವಿರುವ ವಿವೇಕಾನಂದ ಸಂಸ್ಥೆಯು ವಿದ್ಯಾರ್ಜನೆಯ ಜತೆಯಲ್ಲಿ ಸಾಮಾಜಿಕ ಜವಾಬ್ಧಾರಿಗಳನ್ನು ನಿಭಾಯಿಸುವ ಬಗ್ಗೆಯೂ ಮಾರ್ಗದರ್ಶನವನ್ನು ನೀಡುತ್ತದೆ ಎಂದರು. ಪ್ರಾರಂಭದ ದಿನಗಳಲ್ಲಿ ಸಂಸ್ಥೆಯು ನಡೆದುಬಂದ ದಾರಿಯನ್ನು ನೆನಪಿಸುತ್ತಾ ಅದಕ್ಕಾಗಿ ಶ್ರಮಿಸಿದ ಮಾಹಾನುಭಾವರ ಸೇವೆಯನ್ನು ಸ್ಮರಿಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಬದ್ಧತೆ, ಪ್ರಾಮಾಣಿಕತೆ ಇರಬೇಕು ಮತ್ತು ಅದಕ್ಕೆ ಸಾಕಷ್ಟು ಸಮಯವನ್ನು ಮೀಸಲಿಡಬೇಕು ಎಂದರು. ಸರಳತೆಯೇ ಜೀವನವಾಗಬೇಕು, ಕಠಿಣವಾದ ಸಂದರ್ಭದಲ್ಲಿಯೂ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸವಿರಬೇಕು. ನನಗಾಗಿ ಅಲ್ಲ ಸಮಾಜಕ್ಕೋಸ್ಕರ ಎನ್ನುವ ಮನಸ್ಥಿತಿ ಇರಬೇಕು ಹೀಗಾದರೆ ಮಾತ್ರ ನಾವು ಉನ್ನತ ಸ್ಥಾನವನ್ನು ತಲಪಬಲ್ಲೆವು ಎಂದರು. ಅನೇಕ ಸಲ ನಾವು
ಮೇಲಕ್ಕೇರಿದಾಗ ಕೆಳಗಿನದನ್ನು ಮರೆಯುತ್ತೇವೆ ಅದನ್ನು ನೆನಪಿಸುವ ಕಾರ್ಯವನ್ನು ಇಂದು ಇಲ್ಲಿ ಮಾಡಲಾಗಿದೆ ಎಂದರು.


ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ. ಪ್ರಾಂಶುಪಾಲ ಮಹೇಶ್‌ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್.ಬಿ, ನಿರ್ದೇಶಕರುಗಳಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ವಿದ್ಯಾ.ಆರ್.ಗೌರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದೇವಿಕಾ ಕುರಿಯಾಜೆ ಪ್ರಾರ್ಥಿಸಿದರು, ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಸ್ವಾಗತಿಸಿ, ಅಧ್ಯಕ್ಷ ವಿಶ್ವಾಸ್ ಶೆಣೈ ವಂದಿಸಿದರು.ವೈಷ್ಣವಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here