ಸಂಗೀತ ಲೋಕದ ಅಂತರ್‌ಜಿಲ್ಲಾ ಪ್ರತಿಭೆ ಯುವ ಗಿಟಾರ್ ವಾದಕಿ ಸಂಗೀತ ಪುತ್ತೂರು

0

✍🏻ಸಿಶೇ ಕಜೆಮಾರ್

ಪುತ್ತೂರು: ಸುಮಾರು 19ನೇ ಶತಮಾನದಿಂದಲೇ ಅತ್ಯಂತ ಜನಪ್ರಿಯತೆ ಕಂಡ ಗೀಟಾರ್ ಬಹುತೇಕ ಎಲ್ಲಾ ಸಂಗೀತ ಶೈಲಿಗಳಲ್ಲಿಯೂ ಇದರ ಬಳಕೆಯಾಗಿದೆ. ಗಿಟಾರ್ ನುಡಿಸಲು ಕಲಿಯುವುದು ಮತ್ತು ನುಡಿಸುವುದು ಅಷ್ಟು ಸುಲಭದ ಮಾತಲ್ಲ ಏಕೆಂದರೆ ಕೈ ಬೆರಳುಗಳಿಂದಲೇ ನುಡಿಸುವ ಸಂಗೀತ ವಾದ್ಯ ಇದಾಗಿರುವುದರಿಂದ ಇದಕ್ಕೆ ಕೈ ಸ್ನಾಯುಗಳ ಬಲ ಮತ್ತು ಸಾಮರ್ಥ್ಯ ಮುಖ್ಯ. ಹೆಚ್ಚಾಗಿ ಪುರುಷರೇ ಗೀಟಾರ್ ವಾದನವನ್ನು ಅಭ್ಯಾಸ ಮಾಡುತ್ತಿದ್ದು ಮಹಿಳೆಯರು ಕಲಿಯುವುದು ಸ್ವಲ್ಪ ಮಟ್ಟಿಗೆ ಕಡಿಮೆ ಎಂದೇ ಹೇಳಬಹುದು ಆದರೆ ಇಲ್ಲೊಬ್ಬರು ಗ್ರಾಮೀಣ ಪ್ರತಿಭೆ ತನ್ನ ಎಳೆಯ ವಯಸ್ಸಿನಲ್ಲೇ ಗಿಟಾರ್ ಕಲಿತು ಹಲವಾರು ಸಂಗೀತ ಕಛೇರಿಗಳಲ್ಲಿ ಗಿಟಾರ್ ನುಡಿಸುವ ಮೂಲಕ ಅಂತರ್ ಜಿಲ್ಲಾ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ ಅವರೇ ಸಂಗೀತ ಪುತ್ತೂರು. ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಗಾಳಿಹಿತ್ಲು ನಿವಾಸಿಯಾಗಿರುವ ಸಂಗೀತರವರಿಗೆ ತನ್ನ ತಂದೆಯೇ ಗುರು. ಈಗಾಗಲೇ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ರವರ ಸಂಗೀತ ಕಛೇರಿಯಲ್ಲಿ ಗಿಟಾರ್ ನುಡಿಸಿದ ಅತ್ಯಂತ ಕಿರಿಯ ವಯಸ್ಸಿನ ಏಕೈಕ ಯುವ ಗಿಟಾರ್ ವಾದಕಿ ಎಂದೇ ಕರೆಸಿಕೊಂಡ ಇವರ ಕಿರು ಪರಿಚಯ ಇಲ್ಲಿದೆ.


ಸವಿತಾ ಮ್ಯೂಸಿಕ್ಸ್ ಬಾಬಣ್ಣ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ. ಒಂದು ಕಾಲದಲ್ಲಿ ಪುತ್ತೂರು ಸುತ್ತಮುತ್ತ ತುಳು ನಾಟಕ ಇದ್ದರೆ ಅಲ್ಲಿ ಬಾಬಣ್ಣರವರ ಮ್ಯೂಸಿಕ್ಸ್ ಸೆಟ್ ಇದ್ದೇ ಇರುತ್ತಿತ್ತು. ಪ್ರವೃತ್ತಿಯಲ್ಲಿ ಮ್ಯೂಸಿಕ್ ಕಲಾವಿದರಾಗಿ ಗುರುತಿಸಿಕೊಂಡಿದ್ದ ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಗಾಳಿಹಿತ್ಲು ಬಾಬಣ್ಣರವರು ಓರ್ವ ಅದ್ಭುತ ಸಂಗೀತ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರ ಪುತ್ರಿಯೇ ಸಂಗೀತ ಪುತ್ತೂರು, ತನ್ನ ಕಿರಿಯ ವಯಸ್ಸಿನಲ್ಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರು ತನ್ನ ತಂದೆಯಿಂದಲೇ ಸಂಗೀತ ಅಭ್ಯಾಸ ಮಾಡಿಕೊಂಡು ಇದೀಗ ಗಿಟಾರ್ ವಾದನದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೇ ಏಕೈಕ ಯುವ ಗಿಟಾರ್ ವಾದಕಿಯಾಗಿ ಸುದ್ದಿಯಲ್ಲಿದ್ದಾರೆ. ಬಾಬಣ್ಣ ಮತ್ತು ವೇದಾವತಿಯವರ ಪುತ್ರಿಯಾಗಿರುವ ಸಂಗೀತಾರವರು ಅಜ್ಜಿಕಲ್ಲು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರೌಢ ಹಾಗೇ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪೂರೈಸಿದ್ದಾರೆ. ಗಿಟಾರ್ ವಾದನದಲ್ಲಿ ಓರ್ವ ಯುವ ಮಹಿಳಾ ಗಿಟಾರ್ ವಾದಕಿಯಾಗಿ ಅವಿಭಜಿತ ಜಿಲ್ಲೆ ಸೇರಿದಂತೆ ಕೇರಳ, ಕಾಸರಗೋಡು ಜಿಲ್ಲೆಯಲ್ಲೂ ತನ್ನ ಪ್ರತಿಭೆ ತೋರಿಸುತ್ತಿರುವ ಪುತ್ತೂರಿನ ಗ್ರಾಮೀಣ ಪ್ರತಿಭೆಗೆ ಇನ್ನಷ್ಟು ಅವಕಾಶಗಳು ದೊರೆಯಲಿ ಗಿಟಾರ್ ವಾದನದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಗಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.



ಸಂಗೀತ ನಿರ್ದೇಶಕ ಗುರುಕಿರಣ್ ತಂಡದಲ್ಲಿಯೂ ಮಿಂಚಿದ್ದಾರೆ
ಈಗಾಗಲೇ ಮಂಗಳೂರು, ಉಡುಪಿ, ಕಾರ್ಕಳ, ಕಾಸರಗೋಡು, ಕೇರಳ, ಬೆಂಗಳೂರು ಸೇರಿದಂತೆ ವಿವಿಡೆ ಕಾರ್ಯಕ್ರಮ ನೀಡಿರುವ ಸಂಗೀತ ಪುತ್ತೂರುರವರು ಸಿನಿ ಲೋಕದ ಸಂಗೀತ ಮಾಂತ್ರಿಕ, ಕಲಾವಿದ ಗುರುಕಿರಣ್ ತಂಡದಲ್ಲಿಯೂ ಗಿಟಾರ್ ವಾದನ ಮಾಡುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here