ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಸ್ಪರ್ಧೆ : ರಮೇಶ್ ಉಳಯರ “ಯೋಗ ಶಾಪ” ನಾಟಕ ರಾಜ್ಯಮಟ್ಟಕ್ಕೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ೨೦೨೫-೨೬ರ ನಾಟಕ ಸ್ಪರ್ಧೆಯಲ್ಲಿ ಪುತ್ತೂರು ತಾಲೂಕಿನ ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಉಳಯರವರು ಬರೆದು ನಿರ್ದೇಶಿಸಿದ “ಯೋಗ ಶಾಪ” ನಾಟಕ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.


ಮಹಾಭಾರತದ ಮೂಲಪುರುಷ ಶಂತನುವಿನ ಸಾವಿನ ಸಮಯದ ತುಮುಲ ಹಾಗೂ ಆತನ ಪೂರ್ವಜನ್ಮದ ಕಥೆಯನ್ನಾಧರಿಸಿ ಪ್ರಸ್ತುತ ಜೀವನದ ಸನ್ನಿವೇಶಕ್ಕೆ ಸಮೀಕರಿಸಿ ಬರೆದ ಈ ನಾಟಕ ಮನುಷ್ಯ ಜೀವನದಲ್ಲಿ ಶೃಂಗಾರದಿಂದಾಗುವ ಅನಾಹುತಗಳ ವಾಸ್ತವತೆಯನ್ನು ತೆರೆದಿರುತ್ತದೆ. ದೇಹ ಸೌಂದರ್ಯಗಳಿಗೆ ಮನಸೋತ ಗಂಗೆ ಮತ್ತು ಮಹಾಭಿಷ ಬ್ರಹ್ಮ ಶಾಪಕ್ಕೆ ಗುರಿಯಾಗುತ್ತಾರೆ ಭೂಲೋಕದಲ್ಲಿ ಹೋಗಿ ಅತೃಪ್ತ ಗಂಡ ಹೆಂಡತಿಯಾಗಿ ಜನಿಸಿ ಎನ್ನುವ ಶಾಪ ತನ್ನ ಸ್ವಪ್ರಯತ್ನದಿಂದ ಸ್ವರ್ಗವನ್ನೇರಿದ ಮಹಾಭೀಷನನ್ನು ಮತ್ತೆ ಮನುಷ್ಯನಾಗುವಂತೆ ಮಾಡುತ್ತದೆ ಮತ್ತು ಶಂತನುವಾಗಿ ಭೂಲೋಕದಲ್ಲಿ ಹುಟ್ಟುತ್ತಾನೆ. ವಸಿಷ್ಠರ ಶಾಪದಿಂದ ಗಂಗೆ ಹೊಟ್ಟೆಯಲ್ಲಿ ಹುಟ್ಟಿ ನೀರು ಪಾಲಾಗುವ ಅಷ್ಟವಸ್ತುಗಳು. ಅವರೊಬ್ಬ ಉಳಿದು ಭೀಷ್ಮನಾಗುವ ದೇವವೃತ. ಶಾಪ ನಿಮಿತ್ತವಾಗಿ ಭೂಲೋಕದಲ್ಲಿ ಮೀನಿನ ಹೊಟ್ಟೆಯಲ್ಲಿ ಹುಟ್ಟುವ ಮತ್ಸ್ಯಗಂಧಿ, ಕಾಲಜ್ಞಾನಿ ಪರಾಶರನಿಂದ ಯೋಜನಗಂಧಿಯಾಗಿ ಪರಾಶರನಿಂದಲೇ ಮೋಹಗೊಂಡು ಬಸುರಿಯಾಗಿ ವೇದವ್ಯಾಸನ ಹುಟ್ಟಿಗೆ ಕಾರಣವಾಗಿ ಕನ್ಯತ್ವನ್ನು ಕಳೆದುಕೊಳ್ಳುವ ಯೋಜನೆಗಂಧಿಯ ದುರಂತ. ಮತ್ತೆ ಗಂಗೆಯನ್ನು ಮದುವೆಯಾಗುವ ಶಂತನು. ಶಂತನನ್ನು ಬಿಟ್ಟು ಹೋಗುವ ಗಂಗೆ. ಶಂತನುವಿನ ಮರು ಮಡದಿಯಾಗುವ ಯೋಜನೆಗಂಧಿ. ಹಸ್ತಿನಾವತಿಯ ರಾಜಪಟ್ಟವನ್ನು ತ್ಯಜಿಸಿ ಮದುವೆಯಾಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ದೇವವ್ರತ. ಮಕ್ಕಳಾಗದ ಚಿತ್ರಾಂಗದೆ, ವಿಚಿತ್ರವೀರ್ಯ. ಈ ಎಲ್ಲ ಗೊಂದಲಗಳಿಂದ ರೋಸಿಹೋದ ಸತ್ಯವತಿ ಹಸ್ತಿನಾವತಿಯ ಭಾವ ಸಂಬಂಧವನ್ನು ಮುರಿದು ಶಂತನವಿನ ಸಾವನ್ನು ಅಪೇಕ್ಷಿಸುತ್ತಾಳೆ. ಹಸ್ತಿನಾವತಿಯನ್ನು ರಕ್ಷಿಸುವಂತೆ ವ್ಯಾಸನಿಗೆ ಮೊರೆಹೋಗುತ್ತಾಳೆ. ವ್ಯಾಸ ಮುಂದೆ ನಡೆಯುವ ಸಂಪೂರ್ಣ ಮಹಾಭಾರತದ ಚಿತ್ರಣವನ್ನು ಯೋಜನೆಗಂದಿಯ ಕಣ್ಣ ಮುಂದಿಡುತ್ತಾನೆ. ಶಂತನುವಿನ ಅಂತಪುರವನ್ನು ಪ್ರವೇಶಿಸಿದ ಮೃತ್ಯು, ಶಂತನು ವಿನ ಜೀವನವನ್ನು ಮುಗಿಸಿಬಿಡುತ್ತದೆ. ಒಂದು ಕಡೆ ಶಂತನುವಿನ ಅಂತಪುರ, ಇನ್ನೊಂದಡೆ ಬ್ರಹ್ಮಲೋಕ, ಮತ್ತೊಂದೆಡೆ ಯೋಜನೆಗಂಧಿಯ ದೋಣಿಯ ಬದುಕಿನ ದೃಶ್ಯ ವಿನ್ಯಾಸದಲ್ಲಿ ನಡೆಯುವ ಈ ನಾಟಕ ಶಂತನವಿನ ಸಾವಿನಲ್ಲಿ ಕೊನೆಗೊಳ್ಳುತ್ತದೆ. ನಾಟಕದ ಕೊನೆಯಲ್ಲಿ ಎಲ್ಲ ಮರ ಗಿಡಗಳಿಂದ ಧ್ವನಿಯೊಂದು ಮೂಡುತ್ತದೆ. ಅದು ಕಾರಣ ಶೃಂಗಾರವೇ ಬದುಕಿನ ಸರಿಗಮಕೆ ಎಂಬುದು. ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯಿಂದ ಮೂಡಿ ಬಂದ ಈ ನಾಟಕಕ್ಕೆ ಬಂಟ್ವಾಳ ತಾಲೂಕಿನ ಶೇಡಿಗುಳಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಮನಾಯ್ಕ್ ಕೊಜಪ್ಪೆ ಸಂಗೀತ ಸಂಯೋಜನೆ ಮಾಡಿದರು. ಸುಳ್ಯ ತಾಲೂಕಿನ ಐಯನಕಟ್ಟೆ ಸರಕಾರಿ ಶಾಲೆಯ ಶಿಕ್ಷಕ ಪುರುಷೋತ್ತಮ್ ಬೆಟ್ಟಂಪಾಡಿ ಡೋಲಕ್ ವಾದನದಲ್ಲಿ ಸಹಕರಿಸಿದರು.


ಪುತ್ತೂರು ತಾಲೂಕಿನ ೩೪- ನೆಕ್ಕಿಲಾಡಿ ಸರಕಾರಿ ಶಾಲೆಯ ಶಿಕ್ಷಕಿ ತೇಜಸ್ವಿ ಎಂ. ಅಂಬೆಕಲ್ಲು ಇವರ ಸಂಯೋಜನೆಯಲ್ಲಿ ನಿರ್ಮಾಣಗೊಂಡ ಈ ನಾಟಕದಲ್ಲಿ ಮುದಿ ಶಂತನುವಿನ ಪಾತ್ರದಲ್ಲಿ ಮೂಡಬಿದರೆ ತಾಲೂಕಿನ ಮಿಜಾರ್ ಕರ್ನಾಟಕ ಪಬ್ಲಿಕ್ ಶಾಲೆಯ ಅನಿತಾ ಶೆಟ್ಟಿ, ಗಂಗೆಯ ಪಾತ್ರದಲ್ಲಿ ಮಂಗಳೂರು ಉತ್ತರ ತಾಲೂಕಿನ ಕಾಟಿಪಳ್ಳ ೩ ಸರ್ಕಾರಿ ಶಾಲೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ಇಂದಿರಾ, ಯೋಜನೆಗಂದಿಯ ಪಾತ್ರದಲ್ಲಿ ಪುತ್ತೂರು ತಾಲೂಕಿನ ೩೪ನೆಕ್ಕಿಲಾಡಿ ಸರಕಾರಿ ಶಾಲೆಯ ಶಿಕ್ಷಕಿ ತೇಜಸ್ವಿ ಮಧುಸೂದನ್ ಅಂಬೆಕಲ್ಲು, ಯುವ ಶಂತನುವಿನ ಪಾತ್ರದಲ್ಲಿ ಮೂಡಬಿದಿರೆ ತಾಲೂಕಿನ ಅಳಿಯೂರು ಸರ್ಕಾರಿ ಶಾಲೆಯ ಶಿಕ್ಷಕ ಪ್ರಶಾಂತ್ ಆಚಾರ್ಯ, ಪರಾಶರನ ಪಾತ್ರದಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನ ಕರ್ನಾಟಕ ಪಬ್ಲಿಕ್ ಶಾಲೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ನಯನಗೌರಿ, ಚಿತ್ರಾಂಗದನ ಪಾತ್ರದಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನ ಕರ್ನಾಟಕ ಪಬ್ಲಿಕ್ ಶಾಲೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ಮಧುಶ್ರೀ, ದೇವವ್ರತನ ಪಾತ್ರದಲ್ಲಿ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಸರಕಾರಿ ಶಾಲೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ವೇದಾವತಿ ಡಿ.ವಿ, ಬ್ರಹ್ಮ ಮತ್ತು ವಿಚಿತ್ರವೀರ್ಯ ಪಾತ್ರದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಜೇರ ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಾವತಿ ಅತ್ಯುತ್ತಮವಾದ ಅಭಿನಯ ನೀಡಿದರು.


ಪುತ್ತೂರಿನ ಕಲಾವಿದ ಕೇಶವ ಕೆಮ್ಮಿಂಜೆ ಇವರ ಆಕರ್ಷಕ ದೃಶ್ಯ ಸಂಯೋಜನೆ, ನಯನ ಗೌರಿ ಕನ್ಯಾನ ಇವರ ಹಿನ್ನೆಲೆ ಗಾಯನ, ಪುತ್ತೂರು ಭಾವನಾ ಕಲಾ ಆಲಯ ಇವರ ವಸ್ತ್ರಲಂಕಾರ, ಪುತ್ತೂರು ತಾಲೂಕಿನ ನೆಟ್ಟಣಿಗೆ ಮೂಡ್ನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಶಿರ್ಲಾಲು ಇವರ ಮುಖಾಲಂಕಾರ, ಪುತ್ತೂರು ತಾಲೂಕಿನ ನರಿಮೊಗರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಚರಣ್ ಕುಮಾರ್ ಪುದು ಇವರ ಮುಖವಾಡಗಳು ನಾಟಕಕ್ಕೆ ಮೆರುಗು ನೀಡಿದವು.

ಮಂಗಳೂರಿನ ಸಿವಿಲ್ ಇಂಜಿನಿಯರ್ ಮಧುಸೂಧನ್ ಅಂಬೆಕಲ್ಲು ನಾಟಕ ನಿರ್ಮಾಣಕ್ಕೆ ಸಹಕರಿಸಿದರು. ಪುತ್ತೂರು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗೇಶ್ ಪಾಟಾಳಿ ಪೆರುವಾಯಿ, ನೂಜಿ ಬಾಳ್ತಿಲ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಗಣೇಶ್ ನಡುವಾಲು, ಪುತ್ತೂರಿನ ಅಪೇ ಚಾಲಕ ಇಲ್ಯಾಸ್ ಗೂಳಿತೊಟ್ಟು ಹಾಗೂ ಮೂಡಬಿದ್ರೆ ತಾಲೂಕಿನ ಶಿಕ್ಷಕರ ವೃಂದ ನಾಟಕ ಸಿದ್ಧತೆಗೆ ಸಹಕರಿಸಿದರು.

LEAVE A REPLY

Please enter your comment!
Please enter your name here