






ಉಪ್ಪಿನಂಗಡಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಒಳಪಟ್ಟ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುತ್ತಿರುವ ಶ್ರೀ ಬ್ರಹ್ಮ ರಥೋತ್ಸವವು ಪರಮಪೂಜ್ಯ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಶ್ರೀ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ಅನುಗ್ರಹ ಆಶೀರ್ವಾದದೊಂದಿಗೆ ಮಧ್ವನವಮಿಯ ದಿನವಾದ ಜ.27ರಂದು ವಿಜೃಂಭಣೆಯಿಂದ ಜರಗಿತು.


ಪೂರ್ವಾಹ್ನ 8.30ಕ್ಕೆ ಹತ್ತು ಸಮಸ್ತರಿಂದ ಪ್ರಾರ್ಥನೆ ನಡೆದು, ಮಹಾಪಂಚಾಮೃತಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಯಜ್ಞಾರಂಭ ನಡೆಯಿತು. ಅಪರಾಹ್ನ ರಥ ಶುದ್ಧಿ, ಯಜ್ಞ ಪೂರ್ಣಾಹುತಿ ನಡೆದು, ಯಜ್ಞಾರತಿ, ಮಹಾಬಲಿ ನಡೆಯಿತು. ಸಂಜೆ 5ಕ್ಕೆ ಶ್ರೀ ದೇವರ ರಥಾರೋಹಣ ನಡೆದು, ಶ್ರೀ ಬ್ರಹ್ಮರಥೋತ್ಸವ ನಡೆಯಿತು. ಬಳಿಕ ಮಹಾ ಸಮಾರಾಧನೆ ನಡೆಯಿತು. ರಾತ್ರಿ ಪೂಜೆ ನಡೆದು ಉತ್ಸವ, ಏಕಾಂತ ಸೇವೆಯಾಗಿ ಪ್ರಸಾದ ವಿತರಣೆ ನಡೆಯಿತು.




ಕ್ಷೇತ್ರ ಪುರೋಹಿತರಾದ ಪಿ. ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕರಾದ ರವೀಂದ್ರ ಭಟ್, ಅರ್ಚಕರಾದ ಶ್ರೀಧರ ಭಟ್, ಸಂದೀಪ್ ಭಟ್, ಎಸ್. ಶ್ರೀನಿವಾಸ ಭಟ್, ಪಿ. ಗಣಪತಿ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ನಡೆದವು. ಈ ಸಂದರ್ಭ ದೇವಾಲಯದ ಆಡಳಿತ ಮೊಕ್ತೇಸರ ಬಿ. ಗಣೇಶ ಶೆಣೈ, ಮೊಕ್ತೇಸರರಾದ ಡಾ. ಎಂ. ರತ್ನಾಕರ ಶೆಣೈ, ಕೆ. ಅನಂತರಾಯ ಕಿಣಿ, ಯು. ನಾಗರಾಜ ಭಟ್, ಪಿ. ದೇವಿದಾಸ್ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್, ಜಿಎಸ್ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಇಂದು ಅವಭೃತೋತ್ಸವ
ಜ.28ರಂದು ಪೂರ್ವಾಹ್ನ 9:30ಕ್ಕೆ ಅವಭೃತ ಅಭಿಷೇಕ ನಡೆದು, 10 ಗಂಟೆಗೆ ಅವಭೃತೋತ್ಸವ ನಡೆಯಲಿದೆ. ಅಪರಾಹ್ನ 2.30ಕ್ಕೆ ಧ್ವಜ ಅವರೋಹಣ, ಯಜ್ಞ ಮಂಟಪ ವಿಸರ್ಜನೆ, ಸಂಪ್ರೋಕ್ಷಣೆ ನಡೆಯಲಿದೆ. ಸಂಜೆ 6.30ಕ್ಕೆ ಮಹಾಪೂಜೆ, ರಾತ್ರಿ 10ಕ್ಕೆ ಸಮಾರಾಧನೆ ನಡೆದು ಬಳಿಕ ರಾತ್ರಿ ಪೂಜೆ ನಡೆಯಲಿದೆ. 11:30ಕ್ಕೆ ರಾತ್ರಿ ಉತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.










