’ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೊೖಲ ಪಶು ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭ ’-ಕಟ್ಟಡ ಪರಿಶೀಲನೆ ನಡೆಸಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್

0

ರಾಮಕುಂಜ: ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೊೖಲ ಪಶು ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.

ಅವರು ಮಾ.3ರಂದು ಕಡಬ ತಾಲೂಕಿನ ಕೊಲದಲ್ಲಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಕಾಮಗಾರಿಗಳು ಮತ್ತು ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಲೇಜು ಆರಂಭಕ್ಕೆ ಮುನ್ನ ಭಾರತೀಯ ಪಶು ವೈದ್ಯಕೀಯ ಕೌನ್ಸಿಲ್‌ನಿಂದ ಅನುಮತಿ ಸಿಗಬೇಕಾಗಿದೆ. ಅದಕ್ಕೂ ಮುನ್ನ ಇಲ್ಲಿ ಏನೆಲ್ಲಾ ಕೊರತೆಗಳಿವೆ ಅದನ್ನು ಸರಿಪಡಿಸಬೇಕಾಗಿದ್ದು ಅದಕ್ಕಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಮೊದಲನೇ ವರ್ಷ ಮತ್ತು 2ನೇ ವರ್ಷಕ್ಕೆ ತರಗತಿ ಪ್ರಾರಂಭಿಸಲು ಏನೆಲ್ಲಾ ಸೌಲಭ್ಯಗಳು ಬೇಕಾಗಿದೆಯೋ ಅವುಗಳಿಗೆ ಅಗತ್ಯ ಕ್ರಮಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಕಾಲೇಜು ಆರಂಭ ಮಾಡಲು ಪೂರಕ ವ್ಯವಸ್ಥೆಗಳು ಆಗಿದೆ ಎಂದು ಸಚಿವರು ತಿಳಿಸಿದರು.

136 ಕೋಟಿ ರೂ.ಯೋಜನೆ:
ಕಟ್ಟಡ ನಿರ್ಮಾಣ ಕಾಮಗಾರಿಗೆ ಒಟ್ಟು 136 ಕೋಟಿ ರೂ. ವ್ಯಯ ಆಗಿದ್ದು, ಉಳಿದಂತೆ ವ್ಯವಸ್ಥೆಗಳಿಗೆ ಇನ್ನೂ 18 ಕೋಟಿ ಬಿಡುಗಡೆ ಆಗಿದೆ. ಕಾಲೇಜು ಆರಂಭಕ್ಕೆ 28 ಉಪನ್ಯಾಸಕರ ಹುದ್ದೆಗಳ ಅಗತ್ಯ ಇದ್ದು, ಈ ಪೈಕಿ 13 ಹುದ್ದೆಗಳು ಭರ್ತಿ ಆಗಿದೆ. ಇತರೇ 32 ಸಿಬ್ಬಂದಿಗಳಿಗಾಗಿ ಟೆಂಡರು ಕರೆಯಲಾಗಿದೆ. ಸರ್ಕಾರ ಹಂತ ಹಂತವಾಗಿ ಇಲ್ಲಿನ ಅಗತ್ಯತೆಗಳನ್ನು ಪೂರೈಸಲಿದೆ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಗೋ ಶಾಲೆ, ತಳಿ ಸಂವರ್ಧನಾ ಕೇಂದ್ರಕ್ಕೆ ಭೇಟಿ:
ಸಚಿವರು ಪಶು ಸಂಗೋಪನಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಗೋ ಶಾಲೆಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆಯೂ ಪರಿಶೀಲನೆ ನಡೆಸಿದರು. ಬಳಿಕ ಕೊೖಲ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದರು. ಸಚಿವರ ಜೊತೆಗೆ ಶಾಸಕಿ ಭಾಗೀರಥಿ ಮುರುಳ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿನೋತ್ ಪ್ರಿಯ ಆರ್., ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಾದ ಶಿಲ್ಪಾನಾಗ್ ಸಿ.ಟಿ., ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಕೆ.ಸಿ.ವೀರಣ್ಣ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ನಾಗರಾಜ್, ಭಾರತೀಯ ಪಶು ವೈದ್ಯಕೀಯ ಪರಿಷತ್ ಮಂಡಳಿ ಸದಸ್ಯ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ, ಕೊೖಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ. ಚಿದಾನಂದ ಕೆ.ಬಿ., ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು ಇದರ ಉಪ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಕೊೖಲ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಉಪ ಕುಲಪತಿ ಡಾ. ಶಿವಕುಮಾರ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧರ್ಮಪಾಲ, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಪ್ರಸನ್ನ ಹೆಬ್ಬಾರ್, ಡಾ.ಪುನೀತ್ ಮತ್ತಿತರರು ಉಪಸ್ಥಿತರಿದ್ದರು.

ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ ರಾಮಕುಂಜ, ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಹೆಚ್. ಆದಂ, ಭೂ ನ್ಯಾಯಮಂಡಳಿ ಸದಸ್ಯ ಕೆ.ಪಿ.ಅಬ್ರಹಾಂ ನೆಲ್ಯಾಡಿ, ಗ್ರಾ.ಪಂ.ಮಾಜಿ ಸದಸ್ಯರಾದ ಯತೀಶ್ ಬಾನಡ್ಕ, ಪ್ರಶಾಂತ ಆರ್.ಕೆ., ನಝೀರ್ ಪೂರಿಂಗ, ಲಕ್ಷ್ಮೀ ನಾರಾಯಣ ರಾವ್, ಬಾಲಕೃಷ್ಣ ಗೌಡ, ಅಶ್ರಫ್ ಶೇಡಿಗುಂಡಿ ಕಡಬ, ಎ.ಕೆ.ಬಶೀರ್, ಅಬ್ಬಾಸ್ ಕುಂತೂರು, ಪುರುಷೋತ್ತಮ ಕೊಯಿಲ, ಫಾರೂಕ್ ಅಮೈ, ಎಸ್.ಕೆ. ಸಿದ್ದಿಕ್, ಎಸ್.ಪಿ.ಖಲಂದರ್, ಪಿ.ಲತೀಫ್ ಮತ್ತಿತರರು ಉಪಸ್ಥಿತರಿದ್ದರು.


ಕಟ್ಟಡ ಕಾಮಗಾರಿ ಕಳಪೆಯಾಗಿದೆ:
ಕಟ್ಟಡ ಕಾಮಗಾರಿ ತೀರಾ ಕಳಪೆಯಾಗಿದ್ದು, ಮಳೆಗಾಲದಲ್ಲಿ ಕಟ್ಟಡದ ಮೇಲಿನ ಸ್ಲಾಬ್‌ನಿಂದ ನೀರು ಸೋರಿಕೆಯಾಗುತ್ತಿದೆ. ಅದಕ್ಕಾಗಿ ಅದರ ಮೇಲೆ ತಗಡು ಶೀಟು ಹಾಕಲಾಗಿದೆ, ಹೀಗಿದ್ದೂ ಮಳೆಗೆ ಕೆಲವೊಂದು ಕಡೆಯಲ್ಲಿ ಇನ್ನೂ ಸೋರಿಕೆ ಆಗುತ್ತಿದೆ ಎಂದು ಗ್ರಾಮಸ್ಥರು ಹಾಗೂ ಪತ್ರಕರ್ತರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿ ಅದನ್ನು ಸರಿಪಡಿಸುವಂತೆ ಸೂಚಿಸಿದರು.

ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಮನವಿ;
ಪಶುವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಗೊಂಡಿರುವ ಪ್ರದೇಶವು ತೀರ ಹಿಂದುಳಿದ ಹಾಗೂ ಬಡವರು ಹೆಚ್ಚಾಗಿರುವ ಪ್ರದೇಶವಾಗಿರುತ್ತದೆ. ಗ್ರಾಮಾಂತರ ಪ್ರದೇಶವಾದ ಇಲ್ಲಿ ಅತೀ ಹೆಚ್ಚು ನಿರುದ್ಯೋಗಿ ಯುವಕರು ಇದ್ದು ಮುಂದಿನ ದಿನಗಳಲ್ಲಿ ಕೊಲ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಉದ್ಯೋಗ ನೀಡುವಾಗ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಕೃಷ್ಣಪ್ಪ ಜಿ.ರಾಮಕುಂಜ ಅವರು ಸಚಿವರಿಗೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here