ಕಾವು: ಪುತ್ತಿಲ ಪರಿವಾರದಿಂದ ಯುಗಾದಿ ಆಚರಣೆ – ಸಂಘದ ಹಿರಿಯ ಸ್ವಯಂಸೇವಕ ಗಣಪಯ್ಯರಿಗೆ ಗೌರವಾರ್ಪಣೆ

0

ಕಾವು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಕಾವು ಘಟಕದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಪ್ರಯುಕ್ತ ಮಾ.19ರಂದು ಯುಗಾದಿ ಆಚರಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಕಾವು ಮಂಜಲ್ತಡ್ಕ ದ ಗಣಪಯ್ಯ ಗೌಡರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ರಾಷ್ಟ್ರಸೇವೆಯ ಪವಿತ್ರ ಪಥದಲ್ಲಿ ತನ್ನ ಬದುಕಿನ ಬಹುಪಾಲನ್ನು ನಿಶ್ಶಬ್ದವಾಗಿ ಸಮರ್ಪಿಸಿಕೊಂಡ ಸಂಘದ ಹಿರಿಯ ಶಾಖಾ ಪ್ರಮುಖರಾದ ಗಣಪಯ್ಯರವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಗೌರವಾರ್ಪಣೆ ಸಲ್ಲಿಸಲಾಯಿತು.

ಗಣಪಯ್ಯರವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರು ಗಣಪಯ್ಯರವರಿಗೆ ಶಾಲು ಹೊದಿಸಿ, ಹಾರ ಹಾಕಿ, ಗೌರವಧನ ಹಾಗೂ ಫಲವಸ್ತುಗಳನ್ನು ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಅರುಣ್ ಕುಮಾರ್ ಪುತ್ತಿಲರವರು ನಿತ್ಯ ಶಾಖೆಯ ಮೂಲಕ ರಾಷ್ಟ್ರಚಿಂತನೆಯನ್ನು ತಲೆಮಾರುಗಳಿಗೆ ಪಸರಿಸಿದ ಗಣಪಯ್ಯರಂತಹ ತ್ಯಾಗಮೂರ್ತಿಗಳು ಸಂಘದ ನಿಜವಾದ ಶಕ್ತಿಯಾಗಿದ್ದಾರೆ. ಅವರ ಸೇವಾಭಾವ ಮತ್ತು ನಿಷ್ಠೆ ನಮಗೆಲ್ಲಾ ದೀಪಸ್ತಂಭದಂತಿವೆ” ಎಂದು ಹೇಳಿದರು.


ಹಿರಿಯರಾದ ಮಹಾಲಿಂಗೇಶ್ವರ ಭಟ್ ಪಳನೀರುರವರು ಮಾತನಾಡಿ ಅಚ್ಚುಕಟ್ಟಾದ ಶಾಖಾ ಕಾರ್ಯಪದ್ಧತಿ ಹಾಗೂ ಭಗವಾಧ್ವಜದ ಮೇಲಿನ ಅಪಾರ ಭಕ್ತಿಯಿಂದ ಗಣಪಯ್ಯರು ಶಾಖೆಗೆ ಜೀವ ತುಂಬಿದವರು. ಅವರ ಮೌನ ಸೇವೆ ಅನೇಕ ಕಾರ್ಯಕರ್ತರ ಮನಸ್ಸಿನಲ್ಲಿ ಶಾಶ್ವತ ಪ್ರೇರಣೆಯಾಗಿ ಉಳಿಯಲಿದೆ ಎಂದು ಹೇಳಿದರು.

ಪುತ್ತಿಲ ಪರಿವಾರ ಕಾವು ಘಟಕದ ಸುನಿಲ್ ಬೋರ್ಕರ್ ಸ್ವಾಗತಿಸಿ, ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ ವಂದಿಸಿದರು.ಈ ಸಂದರ್ಭದಲ್ಲಿ ಅನಂತಕೃಷ್ಣ ನಾಯಕ್ ಮೇಲ್ಪಾದೆ, ರವಿಪ್ರಸಾದ್ ರೈ ಕಾವು, ನಿರಂಜನ್ ಕಾವು, ಸುನಿಲ್ ನಿಧಿಮುಂಡ, ಸುದೀಂದ್ರ ಕಾವು, ಅಮೃತಲಿಂಗಂ ಕಾವು, ಪುನೀತ್ ಕೆರೆಮಾರ್, ಕೇಶವ ಸಸ್ಪೆಟ್ಟಿ, ಸಂಕಪ್ಪ ಪೂಜಾರಿ ಚಾಕೋಟೆ, ಚಿದಾನಂದ ಆಚಾರ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಗಣಪಯ್ಯರವರಿಗೆ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here