






ಪುತ್ತೂರು: ಭಾರತ ಸರಕಾರದ ನೀತಿ ಆಯೋಗ ( NITI Aayog)ದ ಅಡಿಯಲ್ಲಿ ಬರುವ AIM- ATL ವತಿಯಿಂದ “Team India for First Global Challenge (FGC)” ಗಾಗಿ ನಡೆಸಲ್ಪಟ್ಟ ಮೊದಲ ಹಂತದ ಸ್ಪರ್ಧೆಯಲ್ಲಿ ದೇಶದಾದ್ಯಂತ ನೂರಾರು ತಂಡಗಳು ಭಾಗವಹಿಸಿದ್ದು, ಅವುಗಳಲ್ಲಿ 30 ತಂಡಗಳ ಪ್ರಾಜೆಕ್ಟ್ ಗಳು ಎರಡನೇ ಹಂತಕ್ಕೆ ಆಯ್ಕೆಗೊಂಡಿರುತ್ತವೆ. ಇವುಗಳಲ್ಲಿ ಪುತ್ತೂರಿನ ನೆಹರೂ ನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿ ನಿಯರು ಪ್ರಸ್ತುತ ಪಡಿಸಿದ “Unspoken Truth “ ಎಂಬ ಮೊಬೈಲ್ ಅಪ್ಲಿಕೇಶನ್ ಸ್ಥಾನ ಪಡೆದುಕೊಂಡಿರುತ್ತದೆ.



8ನೇ ತರಗತಿಯ ವಿದ್ಯಾರ್ಥಿನಿಯರಾದ ಮೇಧಾ ಭಟ್ ( ಕೃಷ್ಣಮೂರ್ತಿ ಪಟ್ಲ ಮತ್ತು ಶ್ವೇತಾ ಸರಸ್ವತಿ ಬಂಗಾರಡ್ಕ ದಂಪತಿ ಪುತ್ರಿ), ಪ್ರಣಮ್ಯ ಜೆ (ಜಯಪ್ರಕಾಶ್ ಬಿ ಮತ್ತು ಮಾಧವಿ ಕೆ.ಎ ದಂಪತಿ ಪುತ್ರಿ), ಮಾನ್ವಿ ಕಜೆ ( ಡಾ. ಚರಣ್ ಕಜೆ ಮತ್ತು ರಮ್ಯಾ ಕಜೆ ದಂಪತಿ ಪುತ್ರಿ), ಆರಾಧನಾ ಬಿ.(ಡಾ. ಶ್ರೀ ಪ್ರಕಾಶ್ ಬಿ. ರವರ ಪುತ್ರಿ) ಮತ್ತು ಸುಧೀಕ್ಷಾ ಎಸ್. ಭಟ್( ರಾಘವೇಂದ್ರ ಪ್ರಸಾದ್ ಮತ್ತು ಶ್ರುತಿ ಎಂ.ಎಸ್ ದಂಪತಿ ಪುತ್ರಿ ) ಇವರ ತಂಡವು ಟಾಪ್ 30 ತಂಡಗಳಲ್ಲಿ ಆಯ್ಕೆಯಾಗಿ ಸ್ಪರ್ಧೆಯ ಎರಡನೇ ಹಂತಕ್ಕೆ ಅರ್ಹತೆ ಪಡೆದಿರುತ್ತದೆ. ಈ ಹಂತದಲ್ಲಿ ಆಯ್ಕೆಯಾದ ತಂಡವು, ಮುಂದಿನ ಮೂರನೇ ಹಂತದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.



ಮೂಲತಃ ಪುತ್ತೂರಿನವರಾಗಿದ್ದು, ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಆನಂದವರ್ಧನ ಇವರು, ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ತರಬೇತಿಯನ್ನು ನೀಡಿರುತ್ತಾರೆ ಹಾಗೂ ಶಾಲಾ ಶಿಕ್ಷಕಿ ಹೇಮಾ ಭಟ್ ಮಾರ್ಗದರ್ಶನ ನೀಡಿರುತ್ತಾರೆ ಮತ್ತು ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ ಹಾಗೂ ಆಡಳಿತ ಮಂಡಳಿಯವರು ಎಲ್ಲಾ ವಿಧದ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.









