







ವಿಟ್ಲ: ಕಬ್ಬಿಣದ ದೋಟಿಯ ಮೂಲಕ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ದೋಟಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಬಾಲಕನೋರ್ವ ಮೃತಪಟ್ಟ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಏ.25ರಂದು ಬೆಳಿಗ್ಗೆ ನಡೆದಿದೆ.


ಬಜತ್ತೂರು ಗ್ರಾಮದ ಟಪಾಲುಕೊಟ್ಟಿಗೆ ನಿವಾಸಿ ಶರೀಫ್ ಎಂಬವರ ಪುತ್ರ ಶಹೀರ್ (15ವ.) ಮೃತಪಟ್ಟ ಬಾಲಕ. ಶರೀಫ್ ಲಾರಿ ಚಾಲಕರಾಗಿದ್ದು ಪತ್ನಿ ಹಾಗೂ ಮಕ್ಕಳೊಂದಿಗೆ ನೇರಳಕಟ್ಟೆ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುತ್ತೂರಿನ ಖಾಸಗಿ ಆಂಗ್ಲಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದ ಶಹೀರ್ ಶಾಲೆಗೆ ರಜೆಯ ಹಿನ್ನಲೆಯಲ್ಲಿ ಗಡಿಯಾರದಲ್ಲಿರುವ ಅಜ್ಜನ ಮನೆಗೆ ತೆರಳಿದ್ದ. ಏ.25ರಂದು ಬೆಳಗ್ಗೆ ದೋಟಿಯ ನೆರವಿನಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ದೋಟಿ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಬಾಲಕನ ದೇಹದ ಒಂದು ಭಾಗ ಸಂಪೂರ್ಣ ಕರಟಿ ಮೃತಟ್ಟಿದ್ದಾನೆ ಎಂದು ತಿಳಿದುಬಂದಿದೆ.



ಬಾಲಕನ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಟಪಾಲುಕೊಟ್ಟಿಗೆಯ ಮನೆಗೆ ತಂದು ವಳಾಲು ಮಸೀದಿಯಲ್ಲಿ ದಫನ ಮಾಡಲಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೃತ ಶಹೀರ್ ತಂದೆ ಶರೀಫ್, ತಾಯಿ ಸಲೀನಾ, ತಮ್ಮ, ಇಬ್ಬರು ಸಹೋದರಿಯರನ್ನು ಆಗಲಿದ್ದಾರೆ.










