ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಎನ್‌ಸಿಸಿ ವಾರ್ಷಿಕ ತರಬೇತಿ ಶಿಬಿರ ಸಮಾರೋಪ

0

ಪುತ್ತೂರು: ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಏಕತೆ ಹಾಗೂ ಸ್ವಯಂ ಶಿಸ್ತು ಇವುಗಳನ್ನು ರೂಢಿಸಿ, ಬೆಳೆಸಿ ರಾಷ್ಟ್ರ ಸೇವೆಗೆ ಅಣಿಗೊಳಿಸುವ ಯೋಜನೆಯಾದ ಎನ್.ಸಿ.ಸಿ ಯ ವಿಶೇಷ ಕಾರ್ಯಯೋಜನೆಗಳಲ್ಲಿ ಒಂದಾದ ವಾರ್ಷಿಕ ತರಬೇತಿ ಶಿಬಿರವು ಮೇ.5ರಿಂದ ಮೇ.14ರವರೆಗೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದ್ದು, ಮೇ.12ರಂದು ಸಂಜೆ ಸಮಾರೋಪ ಸಮಾರಂಭ ಜರಗಿತು.


19 ಕರ್ನಾಟಕ ಬೆಟಾಲಿಯನ್‌ ಮಡಿಕೇರಿ ಇದರ ವತಿಯಿಂದ ಈ ಶಿಬಿರ ನಡೆದಿದ್ದು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 22 ಪ್ರೌಢಶಾಲೆಗಳು ಹಾಗೂ 5 ಪದವಿ ಮಹಾವಿದ್ಯಾಲಯಗಳ 670 ಎನ್.ಸಿ.ಸಿ ಪ್ರಶಿಕ್ಷಣಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.  ಎನ್.ಸಿ.ಸಿ ಹೊಂದಿರುವ ವಿವಿಧಾ ಶಾಲಾ-ಕಾಲೇಜುಗಳ 20 ಎನ್.ಸಿ.ಸಿ ಅಧಿಕಾರಿಗಳು, ಸುಮಾರು 20 ಮಂದಿ ಭೂಸೇನಾ ಅಧಿಕಾರಿಗಳು ಶಿಬಿರದಲ್ಲಿ ಪಾಲ್ಗೊಂಡು ಪ್ರಶಿಕ್ಷಣಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಬಂದೂಕು ತರಬೇತಿ ಮತ್ತು ವಿಪತ್ತು ನಿರ್ವಹಣಾ ಕ್ರಮಗಳ ಕುರಿತು ತರಬೇತಿ ನೀಡಿದರು.


ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ. ಕೃಷ್ಣ ಭಟ್‌ ರವರು ʻಇದು ಒಂದು ಹೊಸ ಲೋಕ. ಶಿಸ್ತು, ಸಂಯಮ ಮತ್ತು ದಕ್ಷತೆಯ ಪಾಠ ಕಲಿಸುವ ಈ ಶಿಬಿರವನ್ನು ಇಲ್ಲಿ ಆಯೋಜಿಸಿದ್ದಕ್ಕೆ ವಿಶೇಷ ಅಭಿನಂದನೆಗಳು. ಶಿಕ್ಷಣದ ಜೊತೆಗೆ ಎನ್‌ಸಿಸಿ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಕರ್ತವ್ಯವನ್ನು ಹೇಗೆ ಮಾಡುವುದು ? ನಮ್ಮನ್ನು ಹೇಗೆ  ರಕ್ಷಿಸಿಕೊಳ್ಳುವುದು. ? ಸಮಾಜವನ್ನು ಮತ್ತು ದೇಶವನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಎನ್‌ಸಿಸಿ ಕ್ಯಾಂಪ್‌ ಸ್ಪಷ್ಟವಾಗಿ ಹೇಳಿಕೊಡುತ್ತಿದೆ. ಇದರಿಂದ ಮಕ್ಕಳಲ್ಲಿ ಸೈನ್ಯದಲ್ಲಿ ತೊಡಗಿಸಿಕೊಳ್ಳುವ ಕನಸು ನನಸು ಮಾಡಲು ಸಾಧ್ಯವಿದೆʼ ಎಂದರು.


19 ಕರ್ನಾಟಕ ಬೆಟಾಲಿಯನ್‌ ಮಡಿಕೇರಿ ಇದರ ಕಮಾಂಡಿಂಗ್‌ ಆಫೀಸರ್‌ ಕರ್ನಲ್‌ ರೆಜಿತ್‌ ಮುಕುಂದನ್‌ ರವರು ಮಾತನಾಡಿ ʻಈ ಶಿಬಿರವನ್ನು ಪುತ್ತೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲು ವಿವೇಕಾನಂದ ವಿದ್ಯಾವರ್ಧಕ ಸಂಘ ಅಭೂತಪೂರ್ವ ಸಹಕಾರ ನೀಡಿದೆ. ಈ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯಗುರುಗಳು ಮತ್ತು ಶಿಕ್ಷಕರ ಸಹಕಾರವಿಲ್ಲದೇ ಈ ಕ್ಯಾಂಪ್ ಯಶಸ್ವಿಯಾಗುತ್ತಿರಲಿಲ್ಲ. ಮುಖ್ಯಗುರುಗಳು ನಮ್ಮ ಶಿಬಿರಕ್ಕೆ ಆಧಾರಸ್ತಂಭವಾಗಿ ಸಹಕಾರ ನೀಡಿದ್ದಾರೆ. ಹವಾಮಾನ ನಮಗೆ ಪೂರಕವಾಗಿತ್ತು. ಮಕ್ಕಳಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಿಲ್ಲ.  ಉತ್ತಮ ಸಸ್ಯಾಹಾರ ಆಹಾರ ವ್ಯವಸ್ಥೆಯೂ ಶಿಬಿರಾರ್ಥಿಗಳಿಗೆ ಹಿಡಿಸಿದೆ. ಇದಕ್ಕಾಗಿ ನಾವು ಈ ಸಂಸ್ಥೆಗೆ ವಿಶೇಷ ಆಭಾರಿಗಳಾಗಿದ್ದೇವೆʼ ಎಂದರು.


19 ಕರ್ನಾಟಕ ಬೆಟಾಲಿಯನ್‌ ಮಡಿಕೇರಿ ಇದರ ಆಡಳಿತಾಧಿಕಾರಿ ಲೆ. ಕರ್ನಲ್‌ ಶ್ರೀನಿವಾಸನ್‌, ಸುಬೇದಾರ್‌ ಮೇಜರ್‌ ಶಿಜು ಪಿ., ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್‌, ಸೇನಾ ತರಬೇತಿ ಸಹಾಯಕ ಅಧಿಕಾರಿಗಳು, ಕೊಡಗು, ಪುತ್ತೂರು ಸುಳ್ಯ ತಾಲೂಕಿನ ಎಲ್ಲಾ ಶಾಲೆಗಳ ಎನ್‌ಸಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.


10 ಕರ್ನಾಟಕ ಬೆಟಾಲಿಯನ್‌ ಮಡಿಕೇರಿ ಇದರ ವತಿಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ. ಕೃಷ್ಣ ಭಟ್‌, ಮುಖ್ಯಗುರು ಸತೀಶ್‌ ಕುಮಾರ್‌ ರೈ, ಎನ್‌ಸಿಸಿ ಕೇರ್‌ಟೇಕರ್‌ ಆಫೀಸರ್‌ ರವಿಚಂದ್ರ, ಕಿಚನ್‌ & ಚೀಫ್‌ ಕೋರ್ಡಿನೇಟರ್‌ ಗಣೇಶ್‌ ಪಿ., ಸ್ಯಾನಿಟೇಷನ್‌ &ಹೌಸ್‌ಕೀಪಿಂಗ್‌ ವಿಭಾಗದ ಗೀತಾ  ರವರಿಗೆ ಕರ್ನಲ್‌ ರೆಜಿತ್‌ ಮುಕುಂದನ್‌ ಗೌರವ ಸ್ಮರಣಿಕೆ ನೀಡಿ ಗೌರವಿಸಿದರು.


ಶಾಲಾ ಆಡಳಿತ ಮಂಡಳಿ ಸದಸ್ಯರಾದ ಚಂದ್ರಶೇಖರ ಎಸ್.‌, ಕೃಷ್ಣ ಮೋಹನ್‌, ಹರಿಕೃಷ್ಣ ಬಿ., ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಭಾಸ್ಕರ ಬಲ್ಯಾಯ, ವಿವೇಕಾನಂದ ಪಿ.ಯು. ಕಾಲೇಜಿನ ಪ್ರಾಂಶುಪಾಲ ದೇವಿಚರಣ್‌ ರೈ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ., ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು ಪಾಲ್ಗೊಂಡರು.


ಶಿಬಿರಾರ್ಥಿ ನಿಹಾರಿಕಾ ಪ್ರಾರ್ಥಿಸಿದರು. ಸಾನ್ವಿ ಆನಂದ್‌ ಸ್ವಾಗತ ನೃತ್ಯ ಮಾಡಿದರು. ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಇದೇ ವೇಳೆ ಶಿಬಿರದ ವಿವಿಧ ದಿನಗಳಲ್ಲಿ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಜರಗಿತು. ಪ್ರಶಿಕ್ಷಣಾರ್ಥಿ ಇಶಾನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಿಬಿರದ ಹೈಲೈಟ್ಸ್‌ ದೃಶ್ಯಾವಳಿಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಹಾಗೂ ಶಿಬಿರಾರ್ಥಿಗಳಿಗೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ಸೈನ್ಯದ ಮೋಟಿವೇಷನಲ್‌ ವಿಡಿಯೋ ಪ್ರದರ್ಶಿಸಲಾಯಿತು. ಅಂತಿಮವಾಗಿ ಎನ್‌ಸಿಸಿ ಸಾಂಗ್‌, ವಂದೇಮಾತರಂ, ರಾಷ್ಟ್ರಗೀತೆಯೊಂದಿಗೆ ಸಮಾಪನಗೊಂಡಿತು. ಬಳಿಕ ಸಹಭೋಜನ ನಡೆಯಿತು.


ಸೇನಾ ಕರ್ತವ್ಯಗಳ ಜ್ಞಾನ ಬೆಳೆಸಲು ಎನ್‌ಸಿಸಿ ಪೂರಕ
ಸೇನೆಯಲ್ಲಿ ನಿರ್ವಹಿಸಲಾಗುವ ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ಬೆಳೆಸಿದಾಗ ಶಿಕ್ಷಣ ಮುಗಿಸಿ ಸೈನ್ಯ ಸೇರುವಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಎನ್‌ಸಿಸಿ ಶಿಬಿರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಬೌದ್ಧಿಕ ಮತ್ತು ದೈಹಿಕ ವಿಕಾಸಕ್ಕೂ ಕಾರಣವಾಗುತ್ತಿದೆ.ʼ
ಡಾ. ಕೆ.ಎಂ. ಕೃಷ್ಣ ಭಟ್‌ ಕಾರ್ಯದರ್ಶಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು

ಅತ್ಯುತ್ತಮ ವ್ಯವಸ್ಥೆಗೆ ನಾವು ಆಭಾರಿಗಳು
ʻಈ ಶಿಬಿರವನ್ನು ಪುತ್ತೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲು ವಿವೇಕಾನಂದ ವಿದ್ಯಾವರ್ಧಕ ಸಂಘ ಅಭೂತಪೂರ್ವ ಸಹಕಾರ ನೀಡಿದೆ. ಈ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯಗುರುಗಳು ಮತ್ತು ಶಿಕ್ಷಕರ ಸಹಕಾರವಿಲ್ಲದೇ ಈ ಕ್ಯಾಂಪ್ ಯಶಸ್ವಿಯಾಗುತ್ತಿರಲಿಲ್ಲ. ಇಲ್ಲಿನ ಅತ್ಯುತ್ತಮವಾದ ವ್ಯವಸ್ಥೆಗಳು ಶಿಬಿರದ ಯಶಸ್ಸಿಗೆ ಕಾರಣವಾದವು.
ಕ. ರೆಜಿತ್‌ ಮುಕುಂದನ್‌ ಶಿಬಿರದ ಕಮಾಂಡಿಂಗ್‌ ಆಫೀಸರ್‌


ಚಾಂಪಿಯನ್‌ ಕಂಪೆನಿಗಳು
ಎನ್‌ಸಿಸಿ ಶಿಬಿರದಲ್ಲಿ 440 ಅಂಕಗಳೊಂದಿಗೆ ʻಆಲ್ಫಾʼ ಕಂಪೆನಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. 430 ಅಂಕಗಳೊಂದಿಗೆ ʻಬ್ರಾವೊʼ ಕಂಪೆನಿ ದ್ವಿತೀಯ, 360 ಅಂಕಗಳೊಂದಿಗೆ ʻಚಾರ್ಲಿʼ ಕಂಪೆನಿ ತೃತೀಯ ಮತ್ತು 350 ಅಂಕಗಳೊಂದಿಗೆ ʻಡೆಲ್ಟಾʼ ಕಂಪೆನಿ ಚತುರ್ಥ ಸ್ಥಾನ ಗಳಿಸಿತು. ವಿಜೇತ ಕಂಪೆನಿಗಳಿಗೆ ಟ್ರೋಫಿ ನೀಡಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here