ಬರೆಂಬೆಟ್ಟು ದಿ| ಪಾರ್ವತಿ ಅವರ ಶ್ರದ್ಧಾಂಜಲಿ ಸಭೆ

0

ರಾಮಕುಂಜ: ಮೇ.2ರಂದು ನಿಧನರಾದ ಹಳೆನೇರೆಂಕಿ ಗ್ರಾಮದ ಬರೆಂಬೆಟ್ಟು ನಿವಾಸಿ ಬಿ.ದೇವಪ್ಪ ಗೌಡ ಅವರ ಪತ್ನಿ ದಿ| ಪಾರ್ವತಿ ಅವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆ ಮೇ 17ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಶ್ರದ್ದಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವೀರೇಂದ್ರ ಪಾಲೆತ್ತಡ್ಡ ಅವರು, ಪಾರ್ವತಿ ಅವರು ತನ್ನ ಪತಿಗೆ ಆದರ್ಶ ಪತ್ನಿಯಾಗಿ, ಮಕ್ಕಳಿಗೆ ಮಮತೆಯ ತಾಯಿಯಾಗಿ ಬೆಳೆದವರು. ಮನೆಗೆ ಬರುವ ಅತಿಥಿಗಳನ್ನು ಉತ್ತಮ ರೀತಿಯಲ್ಲಿ ಸತ್ಕರಿಸುತ್ತಿದ್ದರು. ಕುಟುಂಬದೊಂದಿಗೆ ಆತ್ಮೀಯತೆಯಿಂದ ಬರೆಯುತ್ತಿದ್ದರು. ತನ್ನ ಕೊನೆಯ ಕಾಲದಲ್ಲೂ ಯಾರಿಗೂ ತೊಂದರೆ ನೀಡದೆ ಇಹಲೋಕ ತ್ಯಜಿಸಿದ್ದಾರೆ. ಕರುಣಾಮಯಿಯಾಗಿದ್ದ ಅವರ ಜೀವನದ ಆದರ್ಶಗಳೂ ಎಲ್ಲರಿಗೂ ಮಾದರಿಯಾಗಿದೆ. ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಶೇಖರ ಗೌಡ ಕಟ್ಟಪುಣಿ ಮಾತನಾಡಿ, ದಿವಂಗತ ಪಾರ್ವತಿ ಅವರು ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಜೀವನದಲ್ಲಿ ಉತ್ತಮ ಸಂಸ್ಕಾರ ರೂಢಿಸಿಕೊಂಡಿದ್ದರು. ಭಗವಂತನ ಪಾದಸೇರಿದ ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸಿದರು.


ಉಪ್ಪಿನಂಗಡಿಯ ಉದ್ಯಮಿ ಸಚಿನ್ ಸುಂದರ ಗೌಡ, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ, ನಿವೃತ್ತ ಮುಖ್ಯಶಿಕ್ಷಕ ಗುಮ್ಮಣ್ಣ ಗೌಡ, ಕೆಎಸ್‌ಆರ್‌ಟಿಸಿಯ ನಿವೃತ್ತ ಅಧಿಕಾರಿಗಳಾದ ವಿಠಲ ರೈ, ವಿಶ್ವನಾಥ ರೈ ಎರಟಾಡಿ, ದೇವಪ್ಪ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮೃತರ ಪತಿ ಕೆಎಸ್‌ಆರ್‌ಟಿಸಿ ನಿವೃತ್ತ ಸಂಚಾರ ನಿಯಂತ್ರಕ ಬಿ.ದೇವಪ್ಪ ಗೌಡ, ಪುತ್ರ ಜಯರಾಜ್, ಸೊಸೆ ಜ್ಯೋತಿ, ಮೊಮ್ಮಗ ಚಿನ್ಮಯಕೃಷ್ಣಾ, ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here