ಕಾಕ್ರೋಚ್ ಜನತಾ ಪಾರ್ಟಿ ಉದಯ…! ಜಗತ್ತನ್ನೇ ಆಳುವ ಜಿರಳೆಗಳ ಹಿಂದಿರುವ ರೋಚಕ ರಹಸ್ಯಗಳು!

0

@ ಸಿಶೇ ಕಜೆಮಾರ್

ಪುತ್ತೂರು: ರಾಜಕೀಯ ರಂಗದಲ್ಲಿ ಪ್ರತಿದಿನವೂ ಹೊಸ ಹೊಸ ಪಕ್ಷಗಳ ಉದಯವಾಗುವುದು ಸಾಮಾನ್ಯ. ಆದರೆ ಸದ್ಯ ಸೋಶಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಸದ್ದು ಮಾಡುತ್ತಿರುವುದು ಮಾತ್ರ “ಕಾಕ್ರೋಚ್ ಜನತಾ ಪಾರ್ಟಿ”! ಹೌದು, ಕಣ್ಣಿಗೆ ಕಂಡರೆ ಸಾಕು ಹೆದರಿ ಓಡುವಂತೆ ಮಾಡುವ, ಕಸದ ಮೂಲೆಗಳಲ್ಲಿ ಬದುಕುವ ಜಿರಳೆಗಳ ಹೆಸರಿನಲ್ಲಿ ಇಂತಹದ್ದೊಂದು ವಿಶಿಷ್ಟ “ಪಾರ್ಟಿ” ಆರಂಭವಾಗಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ, ನಾವು ನಿತ್ಯವೂ ಕಾಣುವ, ಆದರೆ ಯಾರಿಗೂ ತಿಳಿಯದ ಈ ಜಿರಳೆಗಳ ( ಕಾಂಕ್ರೋಚ್) ಸಾಮ್ರಾಜ್ಯದ ಹಿಂದಿರುವ ಅತ್ಯಂತ ರೋಚಕ ಮತ್ತು ಆಘಾತಕಾರಿ ರಹಸ್ಯಗಳ ಮೇಲೆ ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ.


ಡೈನೋಸಾರ್‌ಗಳಿಗಿಂತಲೂ ಹಳಬರು ಈ ಜಿರಳೆಗಳು!
ಮಾನವನ ಇತಿಹಾಸ ಕೇವಲ ಕೆಲವು ಲಕ್ಷ ವರ್ಷಗಳದ್ದಾದರೆ, ಜಿರಳೆಗಳ ಇತಿಹಾಸ ಬರೋಬ್ಬರಿ 30 ರಿಂದ 35 ಕೋಟಿ ವರ್ಷಗಳಷ್ಟು ಹಳೆಯದು. ಅಂದರೆ ಭೂಮಿಯ ಮೇಲೆ ದೈತ್ಯ ಡೈನೋಸಾರ್‌ಗಳು ಹುಟ್ಟುವ ಮುನ್ನವೇ ಈ ಜಿರಳೆಗಳು ಅಸ್ತಿತ್ವದಲ್ಲಿದ್ದವು. ಡೈನೋಸಾರ್‌ಗಳು ವಿನಾಶ ಹೊಂದಿದರೂ, ಜಿರಳೆಗಳು ಮಾತ್ರ ಇಂದಿಗೂ ರಾಜರಂತೆ ಬದುಕುತ್ತಿವೆ!


ತಲೆ ಇಲ್ಲದಿದ್ದರೂ ವಾರಗಟ್ಟಲೆ ಬದುಕಬಲ್ಲವು!
ಜೀವ ಇರುವ ಯಾವುದೇ ಕ್ರೀಮಿ ಕೀಟ, ಪ್ರಾಣಿ ಪಕ್ಷಿಗಳ ತಲೆ ಕತ್ತರಿಸಿದರೆ ಅವು ಕೆಲವೇ ನಿಮಿಷಗಳಲ್ಲಿ ಸತ್ತು ಹೋಗುತ್ತವೆ ಆದರೆ ಜಿರಳೆಗಳು ತಲೆ ಇಲ್ಲದಿದ್ದರೂ ವಾರಗಟ್ಟಲೆ ಬದುಕಬಲ್ಲವು, ಜಿರಳೆಗಳ ದೇಹರಚನೆ ಎಷ್ಟು ವಿಚಿತ್ರವಾಗಿದೆ ಎಂದರೆ, ಅದರ ತಲೆಯನ್ನು ಕತ್ತರಿಸಿ ಹಾಕಿದರೂ ಅದು ಕನಿಷ್ಠ ಒಂದು ವಾರಗಳ ಕಾಲ ಜೀವಂತವಾಗಿರಬಲ್ಲದು! ಇದಕ್ಕೆ ಕಾರಣ ಏನೆಂದರೆ ಜಿರಳೆಗಳು ನಮ್ಮಂತೆ ಮೂಗಿನಿಂದ ಉಸಿರಾಡುವುದಿಲ್ಲ. ಬದಲಿಗೆ ತಮ್ಮ ದೇಹದ ಮೇಲಿರುವ ಸಣ್ಣ ಸಣ್ಣ ರಂಧ್ರಗಳ ಮೂಲಕ ಉಸಿರಾಡುತ್ತವೆ. ಅವು ತಲೆ ಇಲ್ಲದೆ ಸಾಯುವುದು ಉಸಿರುಗಟ್ಟಿಯಲ್ಲ, ಬದಲಿಗೆ ನೀರು ಕುಡಿಯಲು ಸಾಧ್ಯವಾಗದೆ ದಾಹದಿಂದ ಸತ್ತು ಹೋಗುತ್ತವೆ.


ಅಣುಬಾಂಬ್ ದಾಳಿಗೂ ಕಗ್ಗಂಟಾಗುವ ಜೀವಿ
ಒಂದು ವೇಳೆ ಜಗತ್ತಿನಲ್ಲಿ ಅಣುಯುದ್ಧ ನಡೆದು, ಇಡೀ ಮಾನವಕುಲವೇ ವಿನಾಶವಾದರೂ ಜಿರಳೆಗಳು ಮಾತ್ರ ಬದುಕುಳಿಯುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಇವುಗಳ ದೇಹವು ಮಾನವರಿಗಿಂತ ೧೦ ಪಟ್ಟು ಹೆಚ್ಚು ವಿಕಿರಣವನ್ನು (ರೇಡಿಯೇಷನ್) ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಿರೋಷಿಮಾ ಮತ್ತು ನಾಗಾಸಾಕಿ ಅಣುಬಾಂಬ್ ದಾಳಿಯ ನಂತರವೂ ಅಲ್ಲಿ ಜಿರಳೆಗಳು ಬದುಕುಳಿದಿದ್ದವು ಎಂಬುದು ಸಾಬೀತಾಗಿದೆ.


ಜಿರಳೆಯ ರಕ್ತದ ಬಣ್ಣ ಬಿಳಿ!
ನಮ್ಮ ರಕ್ತ ಕೆಂಪಾಗಿರಲು ಹಿಮೋಗ್ಲೋಬಿನ್ ಕಾರಣ. ಆದರೆ ಜಿರಳೆಗಳ ರಕ್ತದಲ್ಲಿ ಹಿಮೋಗ್ಲೋಬಿನ್ ಇರುವುದಿಲ್ಲ. ಹೀಗಾಗಿ ಅವುಗಳ ರಕ್ತವು ಬಿಳಿ ಅಥವಾ ಬಣ್ಣರಹಿತ (ಕಲರ್‌ಲೆಸ್) ಆಗಿರುತ್ತದೆ. ಅಲ್ಲದೆ, ಇವುಗಳಿಗೆ ಶ್ವಾಸಕೋಶಗಳೂ ಇರುವುದಿಲ್ಲ.


ಆಹಾರವಿಲ್ಲದೆ ತಿಂಗಳು ಕಾಲ ಬದುಕು ಭರವಸೆ
ಜಿರಳೆಗಳು ಅತ್ಯಂತ ಕಠಿಣ ಪರಿಸ್ಥಿತಿಯನ್ನೂ ಎದುರಿಸಬಲ್ಲವು. ಇವುಗಳು ನೀರಿಲ್ಲದೆ ಒಂದು ವಾರ ಬದುಕಬಲ್ಲವು ಮತ್ತು ಯಾವುದೇ ಆಹಾರವಿಲ್ಲದೇ ಒಂದು ತಿಂಗಳ ಕಾಲ ಜೀವಿಸಬಲ್ಲವು. ಇಷ್ಟೇ ಅಲ್ಲ, ಇವುಗಳು ನೀರಿನ ಅಡಿಯಲ್ಲಿ ಬರೋಬ್ಬರಿ 40 ನಿಮಿಷಗಳ ಕಾಲ ಉಸಿರು ಬಿಗಿಹಿಡಿದು ಕೂರಬಲ್ಲವು! ಇದು ಜಿರಳೆಗಳ `ಸೂಪರ್ ಪವರ್’ ಆಗಿದೆ.



ಒಟ್ಟಿನಲ್ಲಿ, “ಕಾಕ್ರೋಚ್ ಜನತಾ ಪಾರ್ಟಿ” ಕೇವಲ ತಮಾಷೆಗೆ ಅಥವಾ ರಾಜಕೀಯ ವ್ಯಂಗ್ಯಕ್ಕೆ ಆರಂಭವಾಗಿದ್ದರೂ, ಜಿರಳೆಗಳ ಹಿನ್ನೆಲೆ ನೋಡಿದರೆ ಅವು ಜಗತ್ತಿನ ಅತ್ಯಂತ ಧೀಮಂತ ಮತ್ತು ‘ಸರ್ವೈವಲ್’ ಶಕ್ತಿಯುಳ್ಳ ಜೀವಿಗಳು ಎಂಬುದು ಸುಳ್ಳಲ್ಲ. ಎಂತಹದ್ದೇ ಕಠಿಣ ಪರಿಸ್ಥಿತಿ ಬಂದರೂ ಧೃತಿಗೆಡದೆ ಬದುಕುವುದನ್ನು ಈ ಜಿರಳೆಗಳಿಂದ ಕಲಿಯಬೇಕು ಎಂದು ನೆಟ್ಟಿಗರು ಈಗ ಜೋಕ್ ಮಾಡುತ್ತಿದ್ದಾರೆ. ಯಾರಿಗೆ ಗೊತ್ತು, ಈ ಕಾಂಕ್ರೋಚ್ ಪಾರ್ಟಿಯ “ಸಹಿಷ್ಣುತೆ” ಮತ್ತು “ಅಳಿವಿಲ್ಲದ ಗುಣ” ನಮ್ಮ ರಾಜಕಾರಣಿಗಳಿಗೂ ಬಂದರೆ ಅಚ್ಚರಿಯಿಲ್ಲ! ಏನಂತೀರಾ…?


ದೇಶದ ನಿರುದ್ಯೋಗಿ ಯುವಕರನ್ನು ಜಿರಳೆಗಳು ಮತ್ತು ಸಮಾಜದ ಪರಾವಲಂಭಿಗಳು ಎಂದು ವ್ಯವಸ್ಥೆಯೇ ಜರೆದಾಗ ನೊಂದ ಯುವಸಮೂಹ ಅದನ್ನು ಪ್ರತಿಭಟಿಸಲು ಕಂಡಕೊಂಡದ್ದೇ ಈ ಕಾಂಕ್ರೋಚ್ ಜನತಾ ಪಾರ್ಟಿ. ಕೆಲವೇ ದಿನಗಳಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ಗಳನ್ನು ಪಡೆದುಕೊಂಡಿರುವ ಈ ಪಾರ್ಟಿಗೆ ಯುವಕರು ಸೇರುತ್ತಲೇ ಇದ್ದಾರೆ. ಮೂಲತಃ ಮಹಾರಾಷ್ಟ್ರದ ಅಭಿಜಿತ್ ದೀಪ್ಕೆ ಎಂಬ ಯುವಕ ರಚಿಸಿದ ಈ ಸೋಶಿಯಲ್ ಮೀಡಿಯಾ ಖಾತೆ ಇಷ್ಟೊಂದು ವೈರಲ್ ಆಗುತ್ತೆ ಯಾರು ಕೂಡ ಊಹಿಸಿರಲಿಲ್ಲ.

LEAVE A REPLY

Please enter your comment!
Please enter your name here