






ಪುತ್ತೂರು: ಬಹು ನಿರೀಕ್ಷಿತ ಪುತ್ತೂರು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಮುಹೂರ್ತ ಕೂಡಿಬಂದಿದ್ದು, ಕಾಲೇಜು ಜಾಗಕ್ಕೆ ತೆರಳುವ ರಸ್ತೆ ಹಾಗೂ ಮರ ಕಟಾವು ಕಾಮಗಾರಿಗೆ ಶಾಸಕ ಅಶೋಕ್ ರೈ ಭಾನುವಾರ ಚಾಲನೆ ನೀಡಿದರು.ಸೇಡಿಯಾಪು ಬಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕರು, “ಪುತ್ತೂರಿಗೆ ಮೆಡಿಕಲ್ ಕಾಲೇಜು ತರಲು ನಿರಂತರ ಶ್ರಮವಹಿಸಿದ್ದೆ. ಎಲ್ಲ ಧರ್ಮದ ದೈವ ದೇವರುಗಳ ಆಶೀರ್ವಾದ ಮತ್ತು ಕ್ಷೇತ್ರದ ಜನತೆಯ ಆಶೀರ್ವಾದದಿಂದ ಕಾಲೇಜು ಕೈಗೂಡಿದೆ. ಕಾಲೇಜು ಆಗುವುದಿಲ್ಲ ಎಂದು ಕೆಲವರು ತಮಾಷೆ ಮಾಡಿದರು, ನಂಜು ಮಾತನಾಡಿದರು, ಕೆಣಕಿದರು. ಇದೆಲ್ಲದರ ನಡುವೆ ಕಾಲೇಜು ಮಂಜೂರಾಗಿ ಇಂದು ಕಾಮಗಾರಿಗೆ ಚಾಲನೆ ನೀಡಿದ್ದೇನೆ” ಎಂದರು.



ಇಂದು ಪುತ್ತೂರು ಕ್ಷೇತ್ರದ ಜನತೆಗೆ ಶುಭದಿನ. ಎಷ್ಟೋ ವರ್ಷದಿಂದ ಈ ದಿನಕ್ಕಾಗಿ ಕಾಯುತ್ತಿದ್ದರು. ಒಂದು ಹಂತದ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಮುಂದೆ ನಿರಂತರವಾಗಿ ಕಾಮಗಾರಿ ನಡೆಯಲಿದೆ. ಮರ ಕಟಾವು ಕಾಮಗಾರಿಯೂ ಶೀಘ್ರ ಮುಗಿದು ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ” ಎಂದು ತಿಳಿಸಿದರು.



ಮೆಡಿಕಲ್ ಕಾಲೇಜು ಆರಂಭಕ್ಕೂ ಮುನ್ನ ಆಸ್ಪತ್ರೆ ನಿರ್ಮಾಣವಾಗಬೇಕಿದ್ದು, ₹182 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಕೊೖಲದಲ್ಲಿರುವ ಜಾನುವಾರು ಆಸ್ಪತ್ರೆಯ ಉದ್ಘಾಟನೆಯಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಿದ್ದಾರೆ ಎಂದು ಶಾಸಕರು ಹೇಳಿದರು. ಮೆಡಿಕಲ್ ಕಾಲೇಜಿಗೆ ನಿಗದಿಪಡಿಸಿದ ಜಾಗದಲ್ಲಿರುವ ಬೃಹತ್ ಕೆರೆಯನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೆರೆಯ ಸೌಂದರ್ಯ ಸವಿಯುವ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ನಿಗದಿತ ಜಾಗದ ನಾಲ್ಕು ಭಾಗದಿಂದಲೂ ಸುಮಾರು 60 ಮೀಟರ್ ಅಗಲದ ರಸ್ತೆ ನಿರ್ಮಾಣವಾಗಲಿದೆ. 40 ಎಕ್ರೆ ಜೊತೆಗೆ ಇನ್ನೂ 20 ಎಕ್ರೆ ಜಾಗ ಗುರುತಿಸಲಾಗಿದ್ದು, ಮೆಡಿಕಲ್ ಹಬ್ ಮಾಡುವ ಇರಾದೆ ಇದೆ. ಮುಂದಿನ ಎರಡು ವರ್ಷದಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ರಾರಾಜಿಸಲಿದೆ ಎಂದು ಶಾಸಕ ಅಶೋಕ್ ರೈ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು, ಪೂರ್ಣೇಶ್ ಭಂಡಾರಿ, ಗಿರೀಶ್ ಸಂಟ್ಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.










