ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಮೂಡುತ್ತಿರುವ ಮೌನ ಸಂಕಟ – ಉಪನ್ಯಾಸಕರು ಒತ್ತಡದಲ್ಲಿ… ವಿದ್ಯಾರ್ಥಿಗಳು ಗೊಂದಲದಲ್ಲಿ… ಪೋಷಕರು ಆತಂಕದಲ್ಲಿ…

0

✍️ಜೇಸಿ ಮೋಹನ್ ಚಂದ್ರ, ತೋಟದ ಮನೆ, ಪದಕ

ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಶಿಕ್ಷಣ ಕ್ಷೇತ್ರದಲ್ಲಿ 2026–27ನೇ ಸಾಲಿನಲ್ಲಿ “ಕಾರ್ಯಭಾರ ಕೊರತೆ” ಎಂಬ ಹೆಸರಿನಲ್ಲಿ ಉಪನ್ಯಾಸಕರನ್ನು ಎರಡು ಕಾಲೇಜುಗಳಿಗೆ ವಾರದಲ್ಲಿ ಮೂರು ದಿನಗಳಂತೆ ನಿಯೋಜಿಸುವ ಆದೇಶಗಳು ಜಾರಿಯಾಗುತ್ತಿವೆ. ಆಡಳಿತಾತ್ಮಕವಾಗಿ ಇದು ತಾತ್ಕಾಲಿಕ ಪರಿಹಾರವೆಂದು ಕಾಣಬಹುದಾದರೂ, ಅದರ ನಿಜವಾದ ಪರಿಣಾಮವನ್ನು ನೇರವಾಗಿ ಅನುಭವಿಸುತ್ತಿರುವವರು ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರು.

ಒಬ್ಬ ಉಪನ್ಯಾಸಕ ಎರಡು ಕಾಲೇಜುಗಳ ಜವಾಬ್ದಾರಿಯನ್ನು ನಿರ್ವಹಿಸುವಾಗ, ಅವರ ದಿನಚರಿ ಸಂಪೂರ್ಣ ಒತ್ತಡದಿಂದ ತುಂಬಿರುತ್ತದೆ. ವಾರದಲ್ಲಿ ಮೂರು ದಿನ ಒಂದು ಕಾಲೇಜು, ಉಳಿದ ಮೂರು ದಿನ ಮತ್ತೊಂದು ಕಾಲೇಜು. ಇದರ ನಡುವೆ ನಿರಂತರ ಪ್ರಯಾಣ, ಸಮಯದ ಒತ್ತಡ, ದಾಖಲೆಗಳ ನಿರ್ವಹಣೆ, ಪರೀಕ್ಷಾ ಕರ್ತವ್ಯ, ಮೌಲ್ಯಮಾಪನ ಹಾಗೂ ಪಠ್ಯ ಪೂರ್ಣಗೊಳಿಸುವ ಹೊಣೆಗಾರಿಕೆ. ದೈಹಿಕ ದಣಿವಿಗಿಂತಲೂ ಹೆಚ್ಚು ಮಾನಸಿಕ ಒತ್ತಡ ಅವರನ್ನು ಕಂಗೆಡಿಸುತ್ತಿದೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ನೀಡಬೇಕೆಂಬ ನಿಷ್ಠೆ ಇದ್ದರೂ, ಸಮಯದ ಮಿತಿಯಿಂದ ಅವರು ಕೇವಲ “ಪಠ್ಯ ಮುಗಿಸುವ” ಕೆಲಸಕ್ಕೆ ಸೀಮಿತರಾಗುತ್ತಿದ್ದಾರೆ.
ಈ ವ್ಯವಸ್ಥೆಯ ನೇರ ಪರಿಣಾಮ ವಿದ್ಯಾರ್ಥಿಗಳ ಮೇಲೆಯೇ ಬೀಳುತ್ತಿದೆ. ಇಡೀ ವರ್ಷದ ಪಠ್ಯವನ್ನು ಅರ್ಧ ವರ್ಷದಲ್ಲೇ ಮುಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಠಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳಲು, ಪ್ರಶ್ನೆ ಕೇಳಲು, ಚರ್ಚೆ ನಡೆಸಲು ಅಥವಾ ಮರುಪಾಠ ಮಾಡಲು ವಿದ್ಯಾರ್ಥಿಗಳಿಗೆ ಸಮಯ ಸಿಗುತ್ತಿಲ್ಲ. ಕೆಲವೊಮ್ಮೆ ಉಪನ್ಯಾಸಕರು ಕಾಲೇಜಿನಲ್ಲಿ ಲಭ್ಯವಿರದ ಕಾರಣ ಪಾಠಗಳು ಮಧ್ಯೆ ನಿಲ್ಲುತ್ತವೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ, ಆತ್ಮವಿಶ್ವಾಸದ ಕೊರತೆ ಮತ್ತು ಪರೀಕ್ಷಾ ಭಯ ಹೆಚ್ಚಾಗುವ ಸಾಧ್ಯತೆಗಳಿವೆ.

ಪದವಿ ಪೂರ್ವ ಶಿಕ್ಷಣವೆಂದರೆ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ ಅತಿ ಮಹತ್ವದ ಹಂತ. ಇದೇ ಹಂತದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ವಾಣಿಜ್ಯ, ವಿಜ್ಞಾನ ಹಾಗೂ ಇತರೆ ಉನ್ನತ ಶಿಕ್ಷಣದ ಕನಸುಗಳಿಗೆ ಭದ್ರ ನೆಲೆ ಸಿಗಬೇಕು. ಆದರೆ ಸರಿಯಾದ ಮಾರ್ಗದರ್ಶನ ಮತ್ತು ಸಮರ್ಪಕ ಬೋಧನೆ ಇಲ್ಲದ ಪರಿಸ್ಥಿತಿಯಲ್ಲಿ ಅನೇಕ ವಿದ್ಯಾರ್ಥಿಗಳ ಕನಸುಗಳು ಅರ್ಧದಲ್ಲೇ ಕುಸಿಯುವ ಅಪಾಯ ಎದುರಾಗಿದೆ.

ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸ್ಥಿತಿ ಇನ್ನಷ್ಟು ಸಂಕಷ್ಟಕರವಾಗಿದೆ. ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಅವರಿಗೆ ಟ್ಯೂಷನ್ ಅಥವಾ ಖಾಸಗಿ ತರಬೇತಿಯ ಸೌಲಭ್ಯಗಳು ಸುಲಭವಾಗಿ ಲಭ್ಯವಿರುವುದಿಲ್ಲ. ಕಾಲೇಜಿನ ಬೋಧನೆಯೇ ಅವರ ಪ್ರಮುಖ ಆಧಾರ. ಆದರೆ ಶಿಕ್ಷಕರ ಕೊರತೆ ಮತ್ತು ಅವ್ಯವಸ್ಥಿತ ವೇಳಾಪಟ್ಟಿಯಿಂದ ಅವರು ಮೌನವಾಗಿ ಹಿನ್ನಡೆಯಾಗುತ್ತಿದ್ದಾರೆ. ಪ್ರತಿಭೆ ಇದ್ದರೂ, ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಇದೆ.

ಇದರಿಂದ ಬಡ ಮತ್ತು ದುರ್ಬಲ ವರ್ಗದ ಪೋಷಕರ ಆತಂಕವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಮ್ಮ ಮಕ್ಕಳ ಭವಿಷ್ಯ ಉತ್ತಮವಾಗಬೇಕು ಎಂಬ ಆಶಯದಿಂದ ಕಷ್ಟಪಟ್ಟು ಓದಿಸುತ್ತಿರುವ ಪೋಷಕರು, ಕಾಲೇಜಿನಲ್ಲಿ ಸಮರ್ಪಕ ಬೋಧನೆ ನಡೆಯದಿರುವುದನ್ನು ಕಂಡು ನಿರಾಶರಾಗುತ್ತಿದ್ದಾರೆ. “ನಮ್ಮ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೇಗೆ ಎದುರಿಸಬಹುದು?”, “ಉತ್ತಮ ಫಲಿತಾಂಶ ಪಡೆಯಬಹುದೇ?” ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಿವೆ.

ಶಿಕ್ಷಣವೆಂದರೆ ಕೇವಲ ಪಠ್ಯ ಪೂರ್ಣಗೊಳಿಸುವ ಕಾರ್ಯವಲ್ಲ; ಅದು ವಿದ್ಯಾರ್ಥಿಯ ವ್ಯಕ್ತಿತ್ವ, ಚಿಂತನೆ ಮತ್ತು ಭವಿಷ್ಯವನ್ನು ರೂಪಿಸುವ ಮಹತ್ವದ ಪ್ರಕ್ರಿಯೆ. ಶಿಕ್ಷಕರಿಗೆ ಸಮರ್ಪಕ ಸಮಯ, ನೆಮ್ಮದಿ ಮತ್ತು ಸ್ಥಿರ ವಾತಾವರಣ ದೊರಕಿದಾಗ ಮಾತ್ರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಣೆಯ ಒತ್ತಡದಲ್ಲಿ ನಲುಗುತ್ತಿದ್ದಾರೆ; ವಿದ್ಯಾರ್ಥಿಗಳು ಗೊಂದಲದಲ್ಲಿ ಮುಳುಗುತ್ತಿದ್ದಾರೆ; ಪೋಷಕರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಆದ್ದರಿಂದ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. “ಕಾರ್ಯಭಾರ ಕೊರತೆ” ಎಂಬ ಹೆಸರಿನಲ್ಲಿ ಎರಡು ಕಾಲೇಜುಗಳಿಗೆ ಉಪನ್ಯಾಸಕರನ್ನು ನಿಯೋಜಿಸುವ ಕ್ರಮವನ್ನು ಮರುಪರಿಶೀಲಿಸಬೇಕು. ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಪ್ರತಿಯೊಂದು ಕಾಲೇಜಿನ ವಿದ್ಯಾರ್ಥಿ ಸಂಖ್ಯೆಯನ್ನು ಪರಿಗಣಿಸಿ ಪ್ರತಿಯೊಂದು ವಿಷಯಕ್ಕೂ ಪೂರ್ಣಕಾಲಿಕ ಉಪನ್ಯಾಸಕರನ್ನು ನೇಮಿಸಬೇಕು. ಶಿಕ್ಷಣ ವ್ಯವಸ್ಥೆಯನ್ನು ಕೇವಲ ಆಡಳಿತಾತ್ಮಕ ಅಂಕಿ-ಅಂಶಗಳ ಆಧಾರದಲ್ಲಿ ನೋಡದೇ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರಿಗಣಿಸುವ ಅಗತ್ಯ ಇದೆ.


ಯಾಕೆಂದರೆ ಇಂದು ಒತ್ತಡದಲ್ಲಿ ಇರುವ ಶಿಕ್ಷಕ, ಗೊಂದಲದಲ್ಲಿ ಇರುವ ವಿದ್ಯಾರ್ಥಿ ಮತ್ತು ಆತಂಕದಲ್ಲಿ ಇರುವ ಪೋಷಕರ ನಡುವೆ ಮೌನವಾಗಿ ಕುಸಿಯುತ್ತಿರುವುದು — ಶಿಕ್ಷಣದ ಗುಣಮಟ್ಟ ಮಾತ್ರವಲ್ಲ, ಸಾವಿರಾರು ಕುಟುಂಬಗಳ ಭವಿಷ್ಯದ ಕನಸುಗಳೂ ಹೌದು.

ಜೇಸಿ ಮೋಹನ್ ಚಂದ್ರ, ತೋಟದ ಮನೆ, ಪದಕ

LEAVE A REPLY

Please enter your comment!
Please enter your name here