ಆಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ಯುವಸಮೂಹ ಹಾದಿ ತಪ್ಪುತ್ತಿರುವ ಬಗ್ಗೆ ಪೋಷಕರು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ – ರೆಂಜಲಾಡಿ ಖತೀಬ್ ನಾಸಿರ್ ಫೈಝಿ ಈದ್ ಸಂದೇಶ

0

ಪುತ್ತೂರು: ಆಧುನಿಕ ಡಿಜಿಟಲ್ ಯುಗದ ತಂತ್ರ ಜ್ಞಾನದ ಹೆಸರಿನಲ್ಲಿ ಯುವಸಮೂಹ ಹಾದಿ ತಪ್ಪುತ್ತಿದ್ದು ಈ ಬಗ್ಗೆ ಪೋಷಕರು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದು ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ನಾಸಿರ್ ಫೈಝಿ ಕುಂತೂರು ಹೇಳಿದರು. ಮೇ.28ರಂದು ರೆಂಜಲಾಡಿ ಮಸೀದಿಯಲ್ಲಿ ಅವರು ಈದ್ ಸಂದೇಶ ನೀಡಿದರು.

ತಂತ್ರಜ್ಞಾನ ಮುಂದುವರಿದಂತೆ ಅದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕೇ ವಿನಃ ದುರುಪಯೋಗಪಡಿಸಿಕೊಳ್ಳಬಾರದು, ಈಗಿನ ತಲೆಮಾರು ಧಾರ್ಮಿಕತೆಯಿಂದ ದೂರವುಳಿದು ಮೊಬೈಲ್ ಗುಂಗಿನಲ್ಲಿ ಮುಳುಗಿ ಹೋಗುತ್ತಿದ್ದು ಇದರ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಮುಂದೆ ದೊಡ್ಡ ನಷ್ಟ ಸಂಭವಿಸಲಿದೆ ಎಂದು ಅವರು ಹೇಳಿದರು.


ಎ.ಐ ತಂತ್ರಜ್ಞಾನ ಯುಗದಲ್ಲಿ ಜೀವಿಸುತ್ತಿರುವ ನಾವು ಧರ್ಮದ ವಿಚಾರಗಳನ್ನು ನಿರ್ಲಕ್ಷಿಸಬಾರದು, ಧರ್ಮದ ಆಚಾರ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು, ಮಕ್ಕಳನ್ನು ಹಾದಿ ತಪ್ಪದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.


ತ್ಯಾಗ, ಬಲಿದಾನ ಮತ್ತು ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬದ ದಿನ ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಬೇಕು, ದ್ವೇಷ, ಅಸೂಯೆಗಳನ್ನು ಬಿಟ್ಟು ಪ್ರೀತಿ ಹಂಚಬೇಕು ಎಂದ ಅವರು ಅನಗತ್ಯ ವಿಚಾರಗಳಿಂದ ದೂರವುಳಿಯುವ ಮೂಲಕ ಅಲ್ಲಾಹು ತೋರಿಸಿದ ಸನ್ಮಾರ್ಗದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್, ಜಮಾಅತ್ ಅಧ್ಯಕ್ಷ ಆರ್ ಎಂ ಅಲಿ ಹಾಜಿ, ಪ್ರಧಾನ ಕಾರ್ಯದರ್ಶಿ ಜೈನುದ್ದೀನ್ ಹಾಜಿ ಜೆ.ಎಸ್ ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here