






ಉಪ್ಪಿನಂಗಡಿ: ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ನಡೆಯಿತು.



ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಮತ್ತು LKG & UKG ಯ ಪುಟಾಣಿ ಮಕ್ಕಳನ್ನು ಹೂ ಹಾಗೂ ಬಲೂನುಗಳನ್ನು ನೀಡಿ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಇದರಿಂದ ಮಕ್ಕಳಲ್ಲಿ ಸಂಭ್ರಮ ಮತ್ತು ಆತ್ಮಸ್ಥೈರ್ಯ ಮೂಡಿತು. ತದನಂತರ ನಡೆದ ಸಭಾ ಕಾರ್ಯಕ್ರಮವನ್ನು ಗಣ್ಯರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.



ಅಧ್ಯಕ್ಷತೆ ವಹಿಸಿದ್ದ ಅಝೀಝ್ ಬಿ.ಕೆ ಅವರು ಶಾಲೆಯ ಪ್ರಗತಿ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಶಾಲೆಗೆ ನೂತನವಾಗಿ ಆಗಮಿಸಿದ ಮುಖ್ಯ ಗುರುಗಳಾದ ಪುಷ್ಪಾ ಅವರನ್ನು ಹೂಗುಚ್ಛ ನೀಡಿ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಅವರು ಮಕ್ಕಳ ಶೈಕ್ಷಣಿಕ ಪ್ರಗತಿ, ಶಿಸ್ತು ಮತ್ತು ಮಕ್ಕಳ ಶಿಕ್ಷಣಕ್ಕೆ ಪೋಷಕರ ಪಾತ್ರದ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನಕರಾಜ್ ಹಿತವಚನ ನೀಡಿ ಮಕ್ಕಳಿಗೆ ಸಿಹಿ ಹಂಚಿ ಶುಭ ಹಾರೈಸಿದರು. ವೇದಿಕೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ಅಸ್ಮಾ, ಎಸ್ಡಿಎಂಸಿ ಸದಸ್ಯ ವಾಮನ ಬರಮೇಲು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪಾಯಸದ ವ್ಯವಸ್ಥೆಯನ್ನು ಎಸ್ಡಿಎಂಸಿ ಸದಸ್ಯ ಪದ್ಮನಾಭ ಶೆಟ್ಟಿ ಅವರು ನೀಡಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಮಕ್ಕಳು ಭಾಗವಹಿಸಿದ್ದರು. ಪಿಎಸ್ಟಿ ಶಿಕ್ಷಕಿ ಲೀನಾ ಲಸ್ರಾದೋ ಸ್ವಾಗತಿಸಿದರು. ಟಿಜಿಟಿ ಶಿಕ್ಷಕಿ ಸುಮನ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು ಹಾಗೂ ಜಿಪಿಟಿ ಶಿಕ್ಷಕಿ ಸಂಧ್ಯಾ ವಂದಿಸಿದರು.










