








- ಕೆದಿಲಾಯರೊಂದಿಗೆ ಸ್ನೇಹ ಮುಂದುವರಿದಿರುವುದು ನನ್ನ ಭಾಗ್ಯ-ವಿಲ್ಫ್ರೆಡ್ ಡಿ’ಸೋಜಾ
- ಒಂದು ಸಂಸ್ಥೆಯ ಅಭಿವೃದ್ಧಿ ಹಿಂದೆ ಒಬ್ಬರ ಶ್ರಮ ಇರುತ್ತದೆ-ಶ್ರೀಧರ್ ಕೆದಿಲಾಯ
- ಎಲ್ಲಾ ಕೆಲಸವನ್ನು ಶ್ರೀಕೃಷ್ಣ ಮಾಡಿಸಿದ್ದಾನೆ- ಜಯರಾಮ ಕೆದಿಲಾಯ
ಪುತ್ತೂರು:ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ಶಾಲಾ ಒಳಾಂಗಣ ಕಾಂಕ್ರೀಟ್ ರಸ್ತೆ, ಬಯೋಗ್ಯಾಸ್ ಸ್ಥಾವರ ಮತ್ತು ಬಿಸಿನೀರಿನ ಸೋಲಾರ್ ಘಟಕದ ಉದ್ಘಾಟನಾ ಕಾರ್ಯಕ್ರಮ ಜೂ.26ರಂದು ನಡೆಯಿತು.ಮುಖ್ಯ ಅತಿಥಿಯಾಗಿದ್ದ ಪುತ್ತೂರು ಓರಿಯಂಟಲ್ ಕ್ಯಾಶ್ಯೂ ಇಂಡಸ್ಟ್ರೀಸ್ ವ್ಯವಸ್ಥಾಪಕ ಪಾಲುದಾರ ವಿಲ್ಫ್ರೆಡ್ ಡಿ’ಸೋಜಾರವರು ಒಳಾಂಗಣ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.



ಸಾಂದೀಪನಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯರವರು ಬಯೋಗ್ಯಾಸ್ ಸ್ಥಾವರ ಹಾಗೂ ಬಿಸಿನೀರಿನ ಸೋಲಾರ್ ಘಟಕ ಉದ್ಘಾಟಿಸಿದರು. ಮುಖ್ಯಅತಿಥಿ ವಿಲ್ಫ್ರೆಡ್ ಡಿ’ಸೋಜಾರವರು ಮಾತನಾಡಿ, ಒಬ್ಬ ವ್ಯಕ್ತಿ 76 ವರ್ಷದಲ್ಲಿ ಮಾಡಿದ ಸಾಧನೆ ಅವರ ಜೀವನದ ಮೌಲ್ಯ, ಆದರ್ಶ ಗುಣಗಳಲ್ಲಿ ತಿಳಿಯುತ್ತದೆ.ಜಯರಾಮ ಕೆದಿಲಾಯ ಹಾಗೂ ನಾನು ಸಹಪಾಠಿಗಳು.ಅವರೊಂದಿಗಿನ ಸ್ನೇಹ ಇವತ್ತಿನವರೆಗೂ ಇದೆ.ನಮ್ಮ ಸ್ನೇಹ ಮುಂದುವರಿದಿರುವುದು ನನ್ನ ಭಾಗ್ಯ.ನಾವು ಸಹಪಾಠಿಗಳಾಗಿ ಸ್ನೇಹದಲ್ಲಿದ್ದರೂ ಅವರ ಸಾಧನೆ ಬಗ್ಗೆ ನನಗೆ ಹೇಳಿಯೇ ಇಲ್ಲ.ಅವರ ಮೌಲ್ಯ, ಸಾಧನೆ, ಆದರ್ಶ ಜೀವನ ಇತರರಿಗೆ ಮಾದರಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಪ್ರಗತಿಪರ ಕೃಷಿಕರಾದ ಶ್ರೀಧರ್ ಕೆದಿಲಾಯ ಪುದುಕೋಳಿ ಮಾತನಾಡಿ ಒಂದು ಸಂಸ್ಥೆಯ ಅಭಿವೃದ್ಧಿ ಹಿಂದೆ ಒಬ್ಬರ ಶ್ರಮ ಇರುತ್ತದೆ.ಜಯರಾಮ ಕೆದಿಲಾಯರು ವಿದ್ಯಾಸಂಸ್ಥೆ ಸ್ಥಾಪನೆ ಮಾಡಿ ಉನ್ನತ ಸಾಧನೆ ಮಾಡಿರುವುದಲ್ಲದೆ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ ಎಂದು ಹೇಳಿ ಶುಭಹಾರೈಸಿದರು.

ವಿದ್ಯಾರ್ಥಿಗಳಿಗೆ ಸ್ಟೇಷನರಿ ವ್ಯವಸ್ಥೆಗಾಗಿ ಸಹಕಾರಿ ಸಂಘ ಸ್ಥಾಪನೆ-ಹರೀಶ್ ಪುತ್ತೂರಾಯ:
ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಹರೀಶ್ ಪುತ್ತೂರಾಯ ಮಾತನಾಡಿ ಬದಲಾದ ಆಡಳಿತ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕು.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸ್ಟೇಷನರಿ ವ್ಯವಸ್ಥೆಗಾಗಿ ಸೌಹಾರ್ದ ಸಹಕಾರಿ ಸಂಘ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಅದರಂತೆ ಷೇರು ಸಂಗ್ರಹಣೆಗಾಗಿ ಅನುಮತಿ ಬಂದಿದೆ ಎಂದು ಹೇಳಿ ಸಹಕಾರಿ ಸಂಘ ಸ್ಥಾಪನೆಯ ಬಗ್ಗೆ ತಿಳಿಸಿದರು.
ಉತ್ತಮ ಯೋಚನೆಯೊಂದಿಗೆ ಶಾಲೆ ಆರಂಭ-ಪ್ರಸನ್ನ ಎಂ:
ಆಡಳಿತ ಮಂಡಳಿ ಉಪಾಧ್ಯಕ್ಷ, ಶ್ರೀರಾಮ ಕನ್ಸ್ಟ್ರಕ್ಷನ್ ಮಾಲಕ ಪ್ರಸನ್ನ ಎಂ. ಮಾತನಾಡಿ ಯಾವುದೇ ಸಸ್ಯ ಆಗಲಿ, ಯಾವುದೇ ಮನುಷ್ಯನಾಗಲಿ ಅಯೋಗ್ಯವಲ್ಲ ಎಲ್ಲವೂ ಯೋಗ್ಯವೇ ಆಗಿದೆ.ಜಯರಾಮ ಕೆದಿಲಾಯರವರು ಉತ್ತಮ ಯೋಜನೆಯೊಂದಿಗೆ ಶಾಲೆ ಆರಂಭಿಸಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಪೂರಕ ಚಟುವಟಿಕೆಗಳು ಅಗತ್ಯ. ನೀವು ಕೂಡ ಗುರುತಿಸಿಕೊಳ್ಳುವ ಸಾಧನೆ ಮಾಡಿ ಎಂದು ಹೇಳಿದರು.ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ಸುಬ್ರಾಯ ಬಿ.ಎಸ್.ಶೆಟ್ಟಿಮಜಲು ಮಾತನಾಡಿ 25 ವರ್ಷದಿಂದ ಇಲ್ಲಿ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ ಅವರಿಗೆ ಮುಂದೆಯೂ ಒಳ್ಳೆಯ ಕೆಲಸ ಮಾಡಲು ದೇವರು ಅನುಗ್ರಹಿಸಲಿ ಎಂದರು.ಆಡಳಿತ ಮಂಡಳಿ ಸದಸ್ಯ ವೆಂಕಟಕೃಷ್ಣ ಕೆ.ಕೆ.ಮಾತನಾಡಿ ಎಲ್ಲರ ಜೀವನದಲ್ಲಿ ಬಾಲ್ಯ ಮಹತ್ವದ ಘಟ್ಟ.ಬಾಲ್ಯದ ದಿನಗಳು ಮತ್ತೆ ಬರುವುದಿಲ್ಲ.ಆದುದರಿಂದ ನಾವು ಪ್ರತೀ ದಿನವನ್ನು ಸಂಭ್ರಮಿಸೋಣ ಎಂದು ಹೇಳಿ ಹಾರೈಸಿದರು.

ಸದಸ್ಯ ಶ್ರೀಧರ್ ಕೆದಿಲಾಯ ಮಾತನಾಡಿ ಸಂಸ್ಥೆಯ ಹುಟ್ಟು ಬೆಳವಣಿಗೆಗೆ ಕಾರಣವಾದವರನ್ನು ಸ್ಮರಿಸಿ ಸಂಸ್ಥಾಪಕರ ಆದರ್ಶಗಳನ್ನು ನೆನಪಿಸುವುದು ಆಚರಣೆಯ ಉದ್ದೇಶವಾಗಿದೆ ಎಂದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುರೇಶ ಪ್ರಭು ಮಾತನಾಡಿ ಹುಟ್ಟುಹಬ್ಬ ಆಚರಿಸುತ್ತಿರುವ ಕೆದಿಲಾಯರವರಿಗೆ ದೇವರು ಸುಖ ನೆಮ್ಮದಿ ನೀಡಲಿ ಎಂದು ಶುಭಕೋರಿದರು.
ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯ ಮಾತನಾಡಿ ಇಂದು ವಿಶೇಷ ಶುಭದಿನ.ಎಲ್ಲರಲ್ಲೂ ಒಬ್ಬ ಶ್ರೀಕೃಷ್ಣ ಇರುತ್ತಾನೆ.ನಮ್ಮ ಎಲ್ಲಾ ಕೆಲಸವನ್ನು ಶ್ರೀಕೃಷ್ಣ ಮಾಡಿಸಿದ್ದಾನೆ.ಭವಿಷ್ಯದಲ್ಲಿ ನೀವು ಬೆಳೆದು ಸಾಧನೆ ಮಾಡಿ ಸಾರ್ಥಕ ಜೀವನ ನಡೆಸಿ ಎಂದು ವಿದ್ಯಾರ್ಥಿಗಳಿಗೆ ಹೇಳಿ, ಹುಟ್ಟುಹಬ್ಬಕ್ಕೆ ಶುಭಾಶಯ ಸಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ನವನೀತ್ ನರ್ಸರಿಯ ಮಾಲಕ ವೇಣುಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು, ಶಿಕ್ಷಕರು ಸಂಸ್ಥಾಪಕರ ಬಗ್ಗೆ ಮಾತನಾಡಿದರು.ಮುಖ್ಯಶಿಕ್ಷಕ ಪ್ರಸನ್ನ ಕೆ. ಸ್ವಾಗತಿಸಿದರು.ಪುತ್ತೂರಿನ ಜನಪ್ರಿಯ ವೈದ್ಯ ದಂಪತಿ ಡಾ.ಸುರೇಶ್ ಪುತ್ತೂರಾಯ-ಆಶಾ ಪುತ್ತೂರಾಯರವರು ಅಧ್ಯಕ್ಷ ಜಯರಾಮ ಕೆದಿಲಾಯರಿಗೆ ಹುಟ್ಟು ಹಬ್ಬದ ಶುಭಾಶಯ ಸಲ್ಲಿಸಿದರು.
ಜಯರಾಮ ಕೆದಿಲಾಯರವರಿಗೆ ಹೂಹಾರ ಹಾಕಿ ಶುಭಾಶಯ ಕೋರಿದ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು
ಹುಟ್ಟುಹಬ್ಬ ಆಚರಿಸುತ್ತಿರುವ ಜಯರಾಮ ಕೆದಿಲಾಯರವರನ್ನು ದಂಪತಿ ಸಮೇತ ಹೂವಿನ ಹಾರ ಹಾಕಿ ಹುಟ್ಟುಹಬ್ಬಕ್ಕೆ ಶುಭಾಶಯ ಸಲ್ಲಿಸಲಾಯತು.ಶಿಕ್ಷಕ ವೃಂದದವರು ಹೂ ಹಾರ ಹಾಕಿ ಶುಭಾಶಯ ಸಲ್ಲಿಸಿ ಕೆದಿಲಾಯ ದಂಪತಿಯಿಂದ ಆಶೀರ್ವಾದ ಪಡೆದರು.ವಿದ್ಯಾರ್ಥಿಗಳು ಹೂಗುಚ್ಚ, ಕಿರು ಉಡುಗೊರೆ ನೀಡಿ ಶುಭಾಶಯ ಸಲ್ಲಿಸಿ ಆಶೀರ್ವಾದ ಪಡೆದರು.
ಸಾಂದೀಪನಿ ಸೌಹಾರ್ದ ಸಹಕಾರಿ ಸಂಘದ ಷೇರು ಸಂಗ್ರಹಣೆಗೆ ಚಾಲನೆ
ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆರಂಭಿಸಲಾಗುವ ಸಾಂದೀಪನಿ ಸೌಹಾರ್ದ ಸಹಕಾರಿ ಸಂಘದ ಷೇರುಪತ್ರಕ್ಕೆ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯರವರು ಸಹಿ ಹಾಕಿ ನಿಗದಿತ ಮೌಲ್ಯ ನೀಡಿ ಷೇರು ಸಂಗ್ರಹಣೆಗೆ ಚಾಲನೆ ನೀಡಿದರು.










