ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಪತ್ತು ನಿರ್ವಹಣಾ ಜಾಗೃತಿ ಕಾರ್ಯಾಗಾರ

0

ಪುತ್ತೂರು: ವಿದ್ಯಾರ್ಥಿಗಳಲ್ಲಿ ಸುರಕ್ಷತೆ, ತುರ್ತು ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ನಡೆ ಹಾಗೂ ವಿಪತ್ತು ನಿರ್ವಹಣೆಯ ಅರಿವು ಮೂಡಿಸುವ ಉದ್ದೇಶದಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ‘ಸುರಕ್ಷತೆ ಹಾಗೂ ವಿಪತ್ತು ನಿರ್ವಹಣಾ’ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

10ನೇ ಬೆಟಾಲಿಯನ್ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (ಎನ್‌ಡಿಆರ್‌ಎಫ್) ಬೆಂಗಳೂರು ತಂಡದ ವತಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ವಿಪತ್ತು ನಿರ್ವಹಣಾ ಉಸ್ತುವಾರಿ ಅಧಿಕಾರಿ ಶಾಂತಿಲಾಲ್ ಜಟಿಯ ಅವರು ಎನ್‌ಡಿಆರ್‌ಎಫ್ ತಂಡದ ಕಾರ್ಯಚಟುವಟಿಕೆಗಳು, ದೇಶ ಸೇವೆ ಹಾಗೂ ಜೀವ ರಕ್ಷಣೆಯಲ್ಲಿ ಅವರ ಕೊಡುಗೆಗಳು, ವಿಪತ್ತುಗಳ ವಿಧ, ಪರಿಣಾಮ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸವಿವರವಾಗಿ ಮಾಹಿತಿ ನೀಡಿದರು.

ಎನ್‌ಡಿಆರ್‌ಎಫ್‌ನ ಸಹಾಯಕ ಸಬ್‌ಇನ್ಸ್ಪೆಕ್ಟರ್ ಸುಭಾಷ್ ಶಿಂಧೆ ನೇತೃತ್ವದಲ್ಲಿ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಅಣಕು ಪ್ರದರ್ಶನ ನಡೆಯಿತು. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ, ಸುರಕ್ಷಿತ ಸ್ಥಳಾಂತರ ಕ್ರಮಗಳು, ಕಟ್ಟಡ ಕುಸಿತ ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸುವ ವಿಧಾನವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. ತುರ್ತು ಸಹಾಯವಾಣಿ ಸೇವೆಗಳ ಬಳಕೆಯ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಎನ್‌ಡಿಆರ್‌ಎಫ್ ತಂಡದ ರಕ್ಷಕರಾದ ಸೆಲ್ವಕುಮಾರ್, ಬಾಲಕೃಷ್ಣ ಹಾಗೂ ವಿ. ಶ್ರೀನಿವಾಸಲು ಅಣಕು ಪ್ರದರ್ಶನದಲ್ಲಿ ಸಹಕರಿಸಿದರು.ಕಾಲೇಜಿನ ಶೈಕ್ಷಣಿಕ ಸಂಯೋಜಕ ಶ್ರೀವತ್ಸ ಎನ್, ದ್ವಿತೀಯ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಮಮತಾ ಶೆಟ್ಟಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here