







- ಜ್ಞಾನ ಎಂದರೆ ಸಂಪತ್ತು. ಸಂಸ್ಕೃತದಲ್ಲಿ “ನಹೀ ಜ್ಞಾನೇನ ಸದೃಶಂ” ಎಂದು ಉಕ್ತಿ ಇದೆ. ಅಂದರೆ ಜ್ಞಾನಕ್ಕೆ ಸಮಾನವಾದದ್ದು ಯಾವುದು ಇಲ್ಲ ಎಂದು ಅರ್ಥ ಮಾಡಬಹುದು. ಜ್ಞಾನವನ್ನು ಗಳಿಸಲು ಕೇವಲ ಪುಸ್ತಕವೊಂದೇ ಮಾಧ್ಯಮವಲ್ಲ. ವಾರ್ತಾಪತ್ರಿಕೆಗಳನ್ನು ಓದುವುದರಿಂದಲೂ ಕೂಡ ಜ್ಞಾನ ಸಂಪಾದನೆ ಆಗುತ್ತದೆ.
ದೇಶದ ಮೂಲೆ ಮೂಲೆಗಳಲ್ಲಿ ನಡೆಯುವ ಘಟನೆಗಳು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಷಯಗಳು, ಮಕ್ಕಳಿಗೆ ಉಪಯೋಗಕರವಾದ ಕಲಿಕೆಗಳು ನಮಗೆ ಪತ್ರಿಕೆಗಳಿಂದ ದೊರೆಯುತ್ತದೆ. ವಾರ್ತಾಪತ್ರಿಕೆಗಳು ಮಾನವನ ಜೀವನದ ಒಂದು ಅಂಗವಾಗಿದೆ. ಬೆಳಗ್ಗೆ ಎದ್ದ ಕೂಡಲೇ ಪತ್ರಿಕೆಯನ್ನು ನೋಡದೇ ದಿನ ಆರಂಭಿಸಿದವರಿಲ್ಲ. ಹಾಗಾಗಿ ಒಂದಲ್ಲ ಒಂದು ರೀತಿಯಲ್ಲಿ ಪತ್ರಿಕೆಗಳು ನಮಗೆ ಜ್ಞಾನವನ್ನು ಕೊಡುವಂತಹ ಮಾಧ್ಯಮವಾಗಿದೆ.
ಸ್ವಾತಂತ್ರ್ಯ ಪೂರ್ವದಿಂದಲೂ ಕೂಡ ನಮ್ಮ ಸ್ವಾತಂತ್ರ್ಯ ನಾಯಕರು ಜನರಿಗೆ ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ತಿಳಿಸಲು ಪತ್ರಿಕೆಯ ಮುಖೇನ ಸುದ್ದಿ ರವಾನಿಸುತ್ತಿದ್ದರು. ಮಂಗಳೂರು ಸಮಾಚಾರ ಎನ್ನುವಂಥದ್ದು ನಮ್ಮ ಕರ್ನಾಟಕದ ಮೊದಲ ಕನ್ನಡ ಪತ್ರಿಕೆಯಾಗಿದೆ. ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ 1843ರ ಜುಲೈ1 ರಿಂದ ಮಂಗಳೂರಿನಲ್ಲಿ ಬಾಸೆಲ್ ಮಿಷನ್ ರವರ ಮುದ್ರಣಾಲಯದಿಂದ ಪ್ರಕಟವಾಯಿತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಪತ್ರಿಕೆಯ ಸಂಪಾದಕರಾಗಿದ್ದರು. ಹಾಗಾಗಿ ಮೋಗ್ಲಿನ್ ರವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಕನ್ನಡದ ಪತ್ರಿಕೋದ್ಯಮ ಪಿತಾಮಹ ಎಂದು ಕರೆಯಲಾಗುತ್ತದೆ. ಮಂಗಳೂರು ಸಮಾಚಾರ ಪತ್ರಿಕೆಯು ಪಾಕ್ಷಿಕವಾಗಿ ಅಂದರೆ 15 ದಿನಗಳಿಗೊಮ್ಮೆ ಪ್ರಕಟವಾಗುತ್ತಿತ್ತು. ತನ್ಮೂಲಕ ಜನರಿಗೆ ಅಂತರ್ ರಾಜ್ಯ ವರ್ತಮಾನಗಳು, ವಾಚಕರ ವಾಣಿಗಳು, ಹಾಡು, ಕಥೆಗಳನ್ನು ಒಳಗೊಂಡ ಅಂಕಣಗಳಾಗಿತ್ತು. ಭಾರತದ ಭಾಗಗಳನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಮಾಡುತ್ತಿದ್ದ ಪ್ರಯತ್ನಗಳ ಕುರಿತಾಗಿ ಅವರ ತೀವ್ರ ವಿರೋಧವನ್ನು ವ್ಯಕ್ತಪಡಿಸಿ ಪ್ರಕಟಿಸಿದರು. ಇದರಲ್ಲಿ ತಿಳುವಳಿಕೆಯನ್ನು ಮೂಡಿಸುವ ಉದ್ದೇಶದಿಂದ ಅಪರಾಧಕ್ಕೆ ತಕ್ಕ ಶಿಕ್ಷೆ ಆಗುತ್ತದೆ ಎಂಬ ಮನವರಿಕೆಯನ್ನು ಮಾಡುತ್ತಿದ್ದರು.
ನಮ್ಮ ಪತ್ರಿಕೋದ್ಯಮವು ಒಂದು ಬಹು ಉನ್ನತ ಸ್ಥಾನಕ್ಕೆ ಏರಿದೆ. ಇಂದು ಕನ್ನಡದ ಪತ್ರಿಕೋದ್ಯಮದ ವಿಷಯದಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ವೃತ್ತಿಪರ ಕೋರ್ಸ್ ರೂಪದಲ್ಲಿ ಪತ್ರಿಕೋದ್ಯಮ ಪದವಿ, ಸ್ನಾತಕೊತ್ತರ ಪದವಿ, ಪಿ.ಎಚ್.ಡಿ ಸೇರಿದಂತೆ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಪತ್ರಿಕೋದ್ಯಮದಲ್ಲಿ ಭವಿಷ್ಯವನ್ನು ಕಂಡುಕೊಳ್ಳುತ್ತಿದ್ದಾರೆ. ಪತ್ರಿಕಾ ರಂಗವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ.
ಇಂಥಹ ಒಂದು ಜ್ಞಾನವನ್ನು ನೀಡುತ್ತಿರುವ ಪತ್ರಿಕೆಯನ್ನು ಓದುವಂಥದ್ದು ಮಕ್ಕಳ ದೈನಂದಿನ ಹವ್ಯಾಸವಾದಾಗ ಜ್ಞಾನವು ವೃದ್ಧಿಯಾಗುತ್ತದೆ ಎಂದು ಹೇಳುತ್ತಾ, ಪತ್ರಿಕೆಗಳ ಅಗಾಧವಾದ ಸೇವೆಗೆ ಗೌರವವನ್ನು ಕೊಡೋಣ ಹಾಗೂ ಈ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವು ಅಂತರ್ಗತವಾಗಲಿ ಎಂಬ ಆಶಯದೊಂದಿಗೆ ಪತ್ರಿಕಾ ರಂಗದಲ್ಲಿ ತಮ್ಮ ಅದ್ಭುತ ಚಾಪನ್ನು ಮೂಡಿಸುತ್ತಿರುವ ಎಲ್ಲಾ ಪತ್ರಿಕೆ ರಂಗದ ಬಂಧುಗಳಿಗೆ ನನ್ನ ಸಾದರ ಪ್ರಣಾಮಗಳೊಂದಿಗೆ ವಿರಮಿಸುತ್ತಿದ್ದೇನೆ.
ಅಶ್ವಿನಿ ರಾಘವೇಂದ್ರ ಶೆಣೈ
ಅಂಬಿಕಾ ವಿದ್ಯಾಲಯ (ಸಿ.ಬಿ.ಎಸ್. ಸಿ )
ಪುತ್ತೂರು












