ಬಿಳಿಕೋಟಿನೊಳಗಿನ ವೈದ್ಯರೆಂಬ ದೇವರು – ವೈದ್ಯರ ದಿನದ ಆಶಯ ವೈಚಾರಿಕ ಚಿಂತನೆ

0

ಪ್ರತಿಯೊಬ್ಬ ಮನುಷ್ಯನ ಜೀವನದ ಪ್ರಯಾಣದಲ್ಲಿ ಇಬ್ಬರು ವ್ಯಕ್ತಿಗಳು ಅತ್ಯಂತ ಮುಖ್ಯರಾಗುತ್ತಾರೆ. ಒಬ್ಬರು ಜನ್ಮ ನೀಡಿದ ತಾಯಿ, ಮತ್ತೊಬ್ಬರು ಆ ಜನ್ಮವನ್ನು ಕಾಯುವ ವೈದ್ಯ. ಜುಲೈ 1 ಬಂತೆಂದರೆ ನಮಗೆ ನೆನಪಾಗುವುದು ಬಿಳಿ ಕೋಟು ಧರಿಸಿ ಸ್ಟೆತೋಸ್ಕೋಪ್‌ ಹಿಡಿದು ನಮ್ಮ ದೈಹಿಕ ರೋಗ, ರುಜಿನ, ನೋವುಗಳಿಗೆ ಚಿಕಿತ್ಸೆ ನೀಡುವ ವೈದ್ಯರ ಲೋಕ. ಭಾರತದ ಹೆಮ್ಮೆಯ ವೈದ್ಯ ಭಾರತರತ್ನ ಬಿ.ಸಿ ರಾಯ್‌ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆಯ ಅಂಗವಾಗಿ ಈ ದಿನವನ್ನು ನಾವು ” ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸುತ್ತಿದ್ಧೆವೆ. ಆದರೆ ಈ ಆಚರಣೆ ಕೇವಲ ಒಂದು ದಿನದ ಶುಭಾಶಯಕ್ಕೆ ಸೀಮಿತವಾಗಬೇಕೇ? ಅಥವಾ ವೈದ್ಯ -ರೋಗಿಯ ನಡುವಿನ ಸಂಬಂಧದ ಆಳವನ್ನು ಅರಿಯುವ ವೈಚಾರಿಕ ಸಂದರ್ಭವಾಗಬೇಕೇ? ಎಂಬುದನ್ನು ನಾವು ಮೊದಲಾಗಿ ತಿಳಿಯಬೇಕಾಗಿದೆ.

ದೇವರೆಂಬ ಕಲ್ಪನೆ ಮತ್ತು ಮನುಷ್ಯತ್ವದ ವಾಸ್ತವ:
ನಮ್ಮ ಸಮಾಜದಲ್ಲಿ ವೈದ್ಯರನ್ನು “ವೈದ್ಯೋ ನಾರಾಯಣ ಹರಿ” ಎಂದೂ ” ನಡೆದಾಡುವ ದೇವರೆಂದು” ಕರೆಯುವ ರೂಢಿಯಿದೆ. ಆದರೆ ವೈಚಾರಿಕವಾಗಿ ಯೋಚಿಸಿದರೆ ವೈದ್ಯರು ಖಂಡಿತವಾಗಿಯೂ ದೇವರಲ್ಲ. ಅವರು ನಮ್ಮಂತೆಯೇ ರಕ್ತ, ಮಾಂಸ, ಎಲುಬುಗಳಿಂದ ಕೂಡಿದ ಮನುಷ್ಯರು. ದೇವರಿಗೆ ತಪ್ಪಾಗುವುದಿಲ್ಲ. ಆದರೆ ಮನುಷ್ಯನಾದವನಿಗೆ ತನ್ನದೇ ಆದ ಇತಿಮಿತಿಗಳಿವೆ. ವೈದ್ಯರನ್ನು ದೇವರೆಂದು ಅತಿಯಾಗಿ ಬಿಂಬಿಸಿ ವೈಭವೀಕರಿಸಿದಾಗ, ಚಿಕಿತ್ಸೆ ವಿಫಲವಾದಾಗ ತಕ್ಷಣ ಸಮಾಜ ಅವರ ಮೇಲೆ ಆಕ್ರೋಶ ಹೊರಹಾಕುತ್ತದೆ. ವೈದ್ಯರನ್ನು ದೇವರನ್ನಾಗಿ ನೋಡುವ ಬದಲು ಅತ್ಯಂತ ಉನ್ನತ, ಜವಬ್ದಾರಿಯುತ ಕರುಣಾಳು ಮತ್ತು ಜ್ಞಾನ ಹೊಂದಿರುವ ಮನುಷ್ಯನಾಗಿ ನೋಡುವುದು ಇಂದಿನ ಅಗತ್ಯವಾಗಿದೆ. ವೈದ್ಯರು ರೋಗವನ್ನು ಗುಣಪಡಿಸಬಹುದು ಆದರೆ ರೋಗಿಯನ್ನು ಗುಣಪಡಿಸುವುದು ಅವರಲ್ಲಿನ ಮನುಷ್ಯತ್ವ ಮತ್ತು ರೋಗಿಯ ನಂಬಿಕೆ.

ತಂತ್ರಜ್ಞಾನ ಯುಗದಲ್ಲಿ ಕರಗುತ್ತಿರುವ “ಸ್ಪರ್ಶ”ದ ಮಹತ್ವ:
ಇಂದಿನ ವೈದ್ಯಕೀಯ ಕ್ಷೇತ್ರ, ವಿಜ್ಞಾನ ಮತ್ತು ತಂತ್ರಜ್ಞಾನದ ತುತ್ತ ತುದಿಯಲ್ಲಿದೆ. ಸ್ಕ್ಯಾನಿಂಗ್‌, ರೋಬೊಟಿಕ್‌ ಸರ್ಜರಿ, ಎಐ ತಂತ್ರಜ್ಞಾನಗಳನ್ನು ಹೊಂದಿದ ಚಿಕಿತ್ಸಾ ವಿಜ್ಞಾನದ ನಡುವೆ “ಮಾನವೀಯ ಕಲೆ” ಕಳೆದು ಹೋಗಬಾರದು. ಓರ್ವ ರೋಗಿ ವೈದ್ಯರ ಬಳಿಗೆ ಬರುವುದು ಕೇವಲ ಔಷಧಿ, ಗುಳಿಗೆಗಳಿಗಾಗಿ ಮಾತ್ರ ಅಲ್ಲ. ವೈದ್ಯರು ರೋಗಿಯ ಹೆಗಲ ಮೇಲೆ ಕೈಯಿಟ್ಟು ಹೇಳುವ “ನಾನಿದ್ದೇನೆ ಹೆದರಬೇಡಿ. ಧೈರ್ಯವಾಗಿರಿ” ಎಂಬ ಎರಡು ಮಾತುಗಳು ರೋಗಿಯ ಅರ್ಧದಷ್ಟು ರೋಗವನ್ನು ಗುಣಪಡಿಸುತ್ತದೆ. ಈ “ಹೀಲಿಂಗ್‌ ಟಚ್‌ ” ವೈದ್ಯ ವಿಜ್ಞಾನಕ್ಕಿಂತ ಮಿಗಿಲಾದದ್ದು ಎಂಬುವುದನ್ನು ಯಾವ ವೈದ್ಯನೂ ಮರೆಯಬಾರದು.

ಇಂದಿನ ಸವಾಲುಗಳು ಮತ್ತು ಸಾಮರಸ್ಯದ ಅಗತ್ಯ:
ಇತ್ತೀಚಿನ ದಿನಗಳಲ್ಲಿ ವೈದ್ಯರು ಮತ್ತು ಸಾರ್ವಜನಿಕರ ನಡುವಿನ ನಂಬಿಕೆಯ ಕೊಂಡಿ ತುಸು ಸಡಿಲವಾಗುತ್ತಿರುವುದು ಆತಂಕಕಾರಿ ಸಂಗತಿ. ವಾಣಿಜ್ಯಕರಣದ ಆರೋಪ ಒಂದೆಡೆಯಾದರೆ ವೈದ್ಯರ ಮೇಲಿನ ಹಲ್ಲೆಗಳು ಇನ್ನೊಂದೆಡೆ. ವೈದ್ಯಕೀಯ ವೃತ್ತಿ ಕೇವಲ ವ್ಯವಹಾರವಾಗದೆ ಸೇವಾ ಮನೋಭಾವದ ಜೀವಾಳವನ್ನು ಉಳಿಸಿಕೊಳ್ಳಬೇಕಾಗಿದೆ. ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ವೈದ್ಯರ ಶ್ರಮವನ್ನು ಸಮಾಜ ಗೌರವಿಸಬೇಕಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಅವರು ಎದುರಿಸುವ ಮಾನಸಿಕ ಒತ್ತಡವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.

ಕೃತಜ್ಞತೆಯ ಸಾರ್ಥಕತೆ:
ಕೋವಿಡ್‌ ಮಹಾ ಮಾರಿಯಂತಹ ಕರಾಳ ದಿನಗಳಲ್ಲಿ ಜಗತ್ತೇ ಬಾಗಿಲು ಮುಚ್ಚಿ ಕುಳಿತಾಗ, ಪ್ರಾಣದ ಹಂಗು ತೊರೆದು ಮುಂಚೂಣಿಯಲ್ಲಿ ನಿಂತು ಹೋರಾಡಿದವರು ಇದೇ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು. ಬಿಳಿ ಕೋಟಿನ ಹಿಂದಿದ್ದ ಆ ಪ್ರತಿಯೊಂದು ಜೀವವೂ ಆಗ ನಮಗಾಗಿ ಮಿಡಿದಿತ್ತು. ಈ ವೈದ್ಯರ ದಿನದಂದು ನಾವು ಕೇವಲ”ಹ್ಯಾಪಿ ಡಾಕ್ಟರ್ಸ್ ಡೇ ” ಎಂದು ವಾಟ್ಸಪ್‌ ಸಂದೇಶಕ್ಕೆ ಸೀಮಿತವಾದರೆ ಸಾಲದು. ಬದಲಾಗಿ ವೈದ್ಯರ ಶ್ರಮಕ್ಕೆ ಗೌರವ ನೀಡಿವ, ಅವರ ಮಿತಿಗಳನ್ನು ಅರ್ಥೈಸಿಕೊಳ್ಳುವ ಮತ್ತು ವೈದ್ಯಕೀಯ ರಂಗದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿಹಡಿಯುವ ಪ್ರಜ್ಞಾವಂತ ಸಮಾಜವನ್ನು ನಿರ್ಮಿಸಬೇಕಾಗಿದೆ.


ಜಗತ್ತನ್ನು ಆರೋಗ್ಯ ಪೂರ್ಣವಾಗಿರಿಸಲು ಹಗಲಿರುಳು ಶ್ರಮಿಸುವ ನಾಡಿನ ಎಲ್ಲಾ “ವೈದ್ಯ ದೇವತೆಗಳಿಗೆ” ವೈದ್ಯರ ದಿನದ ಅನಂತ ಶುಭಾಶಯಗಳು ಹಾಗೂ ಗೌರವದ ನಮನಗಳು.

LEAVE A REPLY

Please enter your comment!
Please enter your name here