






ಪುತ್ತೂರು: ಕಬಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ ಹಾಗೂ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡ ಮುಖ್ಯಗುರು ಬಾಬು ಟಿ ಅವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.



ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮುಖ್ಯಗುರು ಜೆನೆಟ್ ಡೇಝಿ ಸಿಕ್ವೇರಾ ಅವರು ಸ್ವಾಗತಿಸಿದರು. ಬಳಿಕ ನಡೆದ ಪೋಷಕರ ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ಕಲಿಕಾ ಗುಣಮಟ್ಟ, ಸ್ವಚ್ಛತೆ, ಶಿಸ್ತು ಮತ್ತು ಶಾಲೆಯ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರು ಸಕ್ರಿಯವಾಗಿ ಸಹಕರಿಸುವಂತೆ ಮನವಿ ಮಾಡಲಾಯಿತು.



ಬಾಬು ಟಿ ಅವರಿಗೆ ಬೀಳ್ಕೊಡುಗೆ:
ಮುಂಬಡ್ತಿ ಪಡೆದು ವಿದಾಯ ಹೇಳುತ್ತಿರುವ ಮುಖ್ಯಗುರು ಬಾಬು ಟಿ ಅವರನ್ನು ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಮತ್ತು ಬಿಸಿ ಊಟದ ಅಡುಗೆ ಸಿಬ್ಬಂದಿ ಶಾಲೆಯ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಶಿಕ್ಷಕಿ ಫ್ಲಾವಿಯಾ ಸಿಲ್ವಿನ್ ಮೊಂತೆರೋ ಅಭಿನಂದನಾ ಪತ್ರ ವಾಚಿಸಿದರು. ಶಿಕ್ಷಕಿ ಗೋದಾವರಿ ಟಿ. ಭಟ್ ಅಭಿನಂದನಾ ನುಡಿಯಲ್ಲಿ ಬಾಬು ಟಿ ಅವರ ಕರ್ತವ್ಯನಿಷ್ಠೆ, ಸರಳತೆ ಮತ್ತು ಮಾರ್ಗದರ್ಶನವನ್ನು ಸ್ಮರಿಸಿದರು. ಸಂಸ್ಥೆಯ ಪರವಾಗಿ ಬಾಬು ಟಿ ಅವರನ್ನು ಶಾಲು ಹೊದಿಸಿ, ಫಲ-ಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಬು ಟಿ, “ಈ ಶಾಲೆಯಲ್ಲಿನ ದಿನಗಳು ನನ್ನ ವೃತ್ತಿಜೀವನದ ಅತ್ಯಂತ ಮೌಲ್ಯಯುತ ದಿನಗಳು. ಶಿಕ್ಷಕ ವೃಂದ, ಪೋಷಕರು ಮತ್ತು ಎಸ್.ಡಿ.ಎಂ.ಸಿ ಸಮಿತಿಯ ಸಹಕಾರದಿಂದ ಶಾಲೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಾಯಿತು” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶಾಬಾ ಕೆ ಮಾತನಾಡಿ, ಬಾಬು ಟಿ ಅವರ ಸೇವೆ ಮತ್ತು ಶಾಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರು ಬಾಬು ಟಿ ಅವರ ಕಾರ್ಯದಕ್ಷತೆಯನ್ನು ಕೊಂಡಾಡಿದರು. ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಎಲ್.ಕೆ.ಜಿ ಮತ್ತು ಯು.ಕೆ.ಜಿ ಶಿಕ್ಷಕರು, ಸಹಾಯಕಿ ಸವಿತ, ಅಡುಗೆ ಸಿಬ್ಬಂದಿ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










