ಅಜ್ಜಿಕಲ್ಲು: ಜನನಿ ಜ್ಞಾನವಿಕಾಸ ಸಭೆ,ಸಂಸಾರ ಕಲಾ ತಂಡದ ಬೀದಿ ನಾಟಕ ಕಾರ್ಯಕ್ರಮ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಬೆಟ್ಟಂಪಾಡಿ ವಲಯದ ಅಜ್ಜಿಕಲ್ಲು ಕಾರ್ಯಕ್ಷೇತ್ರದ ಜನನಿ ಜ್ಞಾನವಿಕಾಸ ಕೇಂದ್ರದಲ್ಲಿ ಸಮಾಜ ಜಾಗೃತಿ ಮೂಡಿಸುವ ಉದ್ದೇಶದಿಂದ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜ್ಜಿಕಲ್ಲು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ನಾಯ್ಕ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮದಲ್ಲಿ ಉಂಟಾದ ಅಭಿವೃದ್ಧಿ, ಪ್ರತಿಯೊಂದು ಕುಟುಂಬದ ಏಳಿಗೆ ಹಾಗೂ ಆರ್ಥಿಕ ಸಬಲೀಕರಣದ ಕುರಿತು ಮಾತನಾಡಿದ ಅವರು, ಯೋಜನೆಯ ಸೇವೆ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಜನಪರ ಕಾರ್ಯಕ್ರಮಗಳು ಗ್ರಾಮವನ್ನು ತಲುಪಲಿ ಎಂದು ಆಶಿಸಿದರು.

ಜಟಾಧರಿ ಭಜನಾ ಮಂದಿರ ಅಜ್ಜಿಕಲ್ಲು ಇದರ ಕೋಶಾಧಿಕಾರಿ ಶಶಿರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಮುಂದೆಯೂ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಬಂಟ್ವಾಳದ ಸಂಸಾರ ಜೋಡು ಮಾರ್ಗ ಕಲಾತಂಡದ ಕಲಾವಿದರು ಬೀದಿ ನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ನಾಟಕದ ಮೂಲಕ ಅತಿಯಾದ ಅಂತರ್ಜಲ ಕೊರೆಯುವಿಕೆಯಿಂದ ಉಂಟಾಗುತ್ತಿರುವ ನೀರಿನ ಸಮಸ್ಯೆ, ಮೊಬೈಲ್ ಬಳಕೆಯಿಂದ ಸಮಾಜ ಎದುರಿಸುತ್ತಿರುವ ಸವಾಲುಗಳು, ಸಂಚಾರಿ ನಿಯಮಗಳ ಪಾಲನೆಯ ಅಗತ್ಯತೆ, ದುಶ್ಚಟಗಳ ದುಷ್ಪರಿಣಾಮಗಳು, ದಿನೇದಿನೇ ಹೆಚ್ಚುತ್ತಿರುವ ಹೊಸ ಕಾಯಿಲೆಗಳು ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ಉಂಟಾಗುವ ಹಾನಿಗಳ ಬಗ್ಗೆ ಪರಿಣಾಮಕಾರಿ ಸಂದೇಶ ನೀಡಲಾಯಿತು. ಈ ಜಾಗೃತಿ ಕಾರ್ಯಕ್ರಮವು ಸದಸ್ಯರಲ್ಲಿ ಹೊಸ ಚಿಂತನೆ ಮತ್ತು ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಒಕ್ಕೂಟದ ಅಧ್ಯಕ್ಷೆ ಸರೋಜ ಕೆ., ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಸೇವಾ ಪ್ರತಿನಿಧಿ ಕಲಾವತಿ, ಸಂಸಾರ ಜೋಡು ಮಾರ್ಗ ಕಲಾತಂಡದ ಮುಖ್ಯಸ್ಥ ಮೌನೇಶ್ ವಿಶ್ವಕರ್ಮ ಹಾಗೂ ತಂಡದ ಸದಸ್ಯರು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರು ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here