ಖೋಟಾ ನೋಟು ಪ್ರಕರಣ: ಮುಂದುವರಿದ ತನಿಖೆ

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ 2 ಅಂತಸ್ತಿನ ಕಟ್ಟಡವೊಂದರಲ್ಲಿ ಖೋಟಾ ನೋಟು ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ ಪೊಲೀಸರ ತನಿಖೆ ಪ್ರಗತಿಯಲ್ಲಿದೆ.


ಈ ಪ್ರಕರಣದಲ್ಲಿ ಪುತ್ತೂರು ಕಸಬಾ ಗ್ರಾಮದ ಇಬ್ರಾಹೀಂ (60), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಶರೀಫ (51), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ ಪುಂಡಲೀಕ ಶೋಳಂಬಿ (30), ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ಮಹಮ್ಮದ್ ನಬಾಸ್ (37), ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಸಲ್ಮಾನ್ ಫಾರೀಸ್ (25), ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಸಿರಾಜುದ್ದೀನ್ (34), ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಇರ್ಷಾದ್ (31) ಬಂಧಿತರಾಗಿದ್ದು, ಈ ಪ್ರಕರಣದ ಪ್ರಮುಖ ಸೂತ್ರಧಾರಿ ಇಬ್ರಾಹೀಂ ಎನ್ನಲಾಗಿದೆ. ಈತ ಈ ಹಿಂದೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲೂ ಆರೋಪಿಯಾಗಿದ್ದ ಎನ್ನಲಾಗುತ್ತಿದ್ದು, ಆದರೆ ಪೊಲೀಸ್ ಮೂಲಗಳು ಈ ಬಗ್ಗೆ ದೃಢಪಡಿಸಿಲ್ಲ.


ಪೈಂಟರ್‌ಗಳೆಂದು ಬಾಡಿಗೆ ಪಡೆದರು:
ಕಾಯರ್ಪಾಡಿ ಸಮೀಪದ ಮಾಪಳ್ಳ ನಿವಾಸಿಯೋರ್ವರಿಗೆ ಸೇರಿದ ಮನೆ ಇದಾಗಿದ್ದು, ಇವರು ಇರುವ ಮನೆಗೂ ಬಾಡಿಗೆಗೆ ನೀಡಿದ ಮನೆಗೂ ಸುಮಾರು ಮೂರು ಕಿ.ಮೀ.ನಷ್ಟು ದೂರವಿದೆ. ಸುಮಾರು ಮೂರು ತಿಂಗಳ ಹಿಂದೆ ಇವರ ಬಳಿ ಖೋಟಾ ನೋಟು ಪ್ರಕರಣದಲ್ಲಿ ಆರೋಪಿಗಳಾಗಿರುವ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಸಿರಾಜುದ್ದೀನ್ ಹಾಗೂ ಮತ್ತೋರ್ವ ಬಾಡಿಗೆ ಮನೆ ಕೇಳಿಕೊಂಡು ಬಂದಿದ್ದು, ಇವರಲ್ಲಿ ತಾವು ಪೈಂಟಿಂಗ್ ಕೆಲಸ ಮಾಡುವವರು ಎಂದು ಹೇಳಿಕೊಂಡಿದ್ದರು. ಅವರಲ್ಲಿ ಸಿರಾಜ್ ಒಂದು ಮನೆ ಪಡೆದರೆ, ಎರಡು ಮನೆಯನ್ನು ಮತ್ತೋರ್ವ ಬಾಡಿಗೆಗೆ ಪಡೆದಿದ್ದ. ಬಾಡಿಗೆ ಮನೆಯ ಮಾಲಕರು ಕೆಳಗಿನ ಎರಡು ತಲಾ 4,500 ಹಾಗೂ 5೦೦೦ ಸಾವಿರ ರೂ. ಮತ್ತು ಮೇಲಿನ ಮನೆಗೆ 4೦೦೦ ಬಾಡಿಗೆ ವಿಧಿಸಿ, ಅದಕ್ಕೆ ಬಾಡಿಗೆ ಕರಾರುಪತ್ರ ಮಾಡಿಕೊಂಡು, ಮನೆಯನ್ನು ಇವರಿಗೆ ಬಾಡಿಗೆಗೆ ನೀಡಿದ್ದರು. ಬಳಿಕದ ದಿನಗಳಲ್ಲಿ ಆರೋಪಿಗಳು ಒಬ್ಬೊಬ್ಬರಾಗಿ ಈ ಮನೆಯೊಳಗೆ ಸೇರಿಕೊಂಡು ಖೋಟಾ ನೋಟು ಮುದ್ರಣ ದಂಧೆ ಆರಂಭಿಸಿದ್ದರು ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here