ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ತೆಂಗಿನ ಸಸಿ ನಾಟಿ ಕಾರ್ಯಕ್ರಮ

0

ರಾಮಕುಂಜ: ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಹಾಗೂ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರ ಆಶ್ರಯದಲ್ಲಿ ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಜು.17ರಂದು ತೆಂಗಿನ ಸಸಿ ನೆಡುವ ಕಾರ್ಯಕ್ರಮ ನಡೆಯಿತು.


ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಅವರು ತೆಂಗಿನ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯವು ಕಲ್ಪವೃಕ್ಷದಂತೆ ಬೆಳೆಯಲಿ ಎಂದು ಹೇಳಿದ ಅವರು ಈ ವರ್ಷ ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ವಿ.ಎಸ್.ಸಿ. ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲು ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದರು.
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ಬೆಳ್ಳಿಪ್ಪಾಡಿ ಅವರು ತೆಂಗಿನ ಸಸಿಯನ್ನು ಕೆ.ಸಿ.ವೀರಣ್ಣ ಅವರಿಗೆ ಹಸ್ತಾಂತರಿಸಿ ಮಾತನಾಡಿ, ನಮ್ಮ ಸಂಸ್ಥೆ ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಈ ಬಾರಿ ಕೊಯಿಲ ಪಶುವೈದ್ಯ ಕೀಯ ಮಹಾವಿದ್ಯಾಲಯದ ಆವರಣದಲ್ಲಿ ೧೫೦ ತೆಂಗಿನ ಸಸಿಗಳನ್ನು ನೆಟ್ಟು ಅದಕ್ಕೆ ಗೊಬ್ಬರ ಹಾಕಿ ಕೊಡುವ ಕಾರ್ಯ ಮಾಡಿಕೊಡಲಿದೆ ಎಂದರು.


ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎಂ.ಸಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿರಾಜ್, ಬ್ಯಾಂಕ್ ಆಫ್ ಬರೋಡಾದ ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕಿ ಯಶೋಧಾ, ಕೊಯಿಲ ಜಾನುವಾರು ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ.ಕೆ.ಬಿ.ಚಿದಾನಂದ, ಮಂಗಳೂರು ಕೃಷಿ ವಿಜ್ಞಾನ ಕೆಂದ್ರದ ಹಿರಿಯ ವಿಜ್ಞಾನಿ ಡಾ. ರಮೇಶ್ ಟಿ.ಜೆ., ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಚ್.ಎನ್.ಆಂಜನೇಯಪ್ಪ, ಸಿಪಿಸಿಆರ್ ಕಿದುವಿನ ವಿಜ್ಞಾನಿ ಡಾ.ದಿವಾಕರ್, ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪುನೀತ್ ಉಪಸ್ಥಿತರಿದ್ದರು. ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here