







ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ʻಪರ್ಬದ ಲೇಸ್ʼ
ತುಳು ಜಾನಪದ, ಸಾಂಸ್ಕೃತಿಕ, ತುಳು ವನಸ್-ತೆನಸ್, ತುಳು ನಾಟಕ ಪ್ರದರ್ಶನ


ಪುತ್ತೂರು: ತುಳುವೆರೆ ಚಾವಡಿ (ರಿ.) ಬೆಂಗಳೂರು ಇದರ ವತಿಯಿಂದ 28ನೇ ವರ್ಷದ ʻಪರ್ಬದ ಲೇಸ್ʼ ತುಳುನಾಡ್ದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವು ಜು. 26ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಲಿದೆ. ಹಿರಿಯ ತುಳು ಕನ್ನಡ ಸಾಹಿತಿ ಡಿ. ಕೆ. ಚೌಟ ಸ್ಮರಣಾರ್ಥ ತುಳುನಾಡ್ದ ಸಿರಿ ಪ್ರಶಸ್ತಿಗೆ ಪುತ್ತೂರಿನ ರಾಷ್ಟ್ರೀಯ ಕೃಷಿ ಪ್ರಶಸ್ತಿ -ಚಿನ್ನದ ಪದಕ ವಿಜೇತ ಕೃಷಿಕ, ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಡಮಜಲು ಸುಭಾಸ್ ರೈಯವರು ಆಯ್ಕೆಯಾಗಿದ್ದು, ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.



ಕೃಷಿಯಲ್ಲಿ ವೈಜ್ಞಾನಿಕ ಪದ್ದತಿಗಳೊಂದಿಗೆ ಅಡಿಕೆ, ತೆಂಗು, ಕೊಕ್ಕೊ, ಕಾಳುಮೆಣಸು, ರಬ್ಬರ್ ಹಾಗೂ ಗೇರು ಕೃಷಿ ಮೂಲಕ, ಹೈನುಗಾರಿಕೆ ಮೂಲಕ ಕಡಮಜಲು ಸುಭಾಸ್ ರೈಯವರು ಓರ್ವ ಅಧ್ಯಯನ ಮಾದರಿ ಕೃಷಿಕರೆನಿಸಿಕೊಂಡಿದ್ದಾರೆ. ಇವರ ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ರೈತರ, ನೂರಾರು ಕೃಷಿ ಸಂಸ್ಥೆಗಳ ಅಧ್ಯಯನ ತಂಡಗಳು ಪ್ರತೀ ವರ್ಷ ಭೇಟಿ ನೀಡುತ್ತಿದ್ದು, ಒಂದು ಅಧ್ಯಯನ ಮಾದರಿ ಕೃಷಿ ಕ್ಷೇತ್ರವಾಗಿದೆ. ಈ ಹಿನ್ನೆಲೆಯಲ್ಲಿ ದೂರದ ಬೆಂಗಳೂರಿನಲ್ಲಿಯೂ ತುಳುನಾಡಿನ ಮಾದರಿ ಕೃಷಿಕನನ್ನು, ವೈಜ್ಞಾನಿಕ ಮಾದರಿಯ ಸಾಧಕ ಕೃಷಿಕನನ್ನು ಬೆಂಗಳೂರಿನ ತುಳುವರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಮಧ್ಯಾಹ್ನ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಬಾರ್ಕೂರು ಮಹಾಸಂಸ್ಥಾನದ ಶ್ರೀ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ತುಳುವೆರೆ ಚಾವಡಿ ಬೆಂಗಳೂರು ಇದರ ಗೌರವಾಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾತ್ ಗಟ್ಟಿ, ಉದ್ಯಮಿ ಸಮಾಜಸೇವಕ ಶಶಿಧರ್ ಶೆಟ್ಟಿ ಬರೋಡ, ಕರ್ನಾಟಕ ಕುಸ್ತಿ ಅಕಾಡೆಮಿ ಅಧ್ಯಕ್ಷ ಗುಣರಂಜನ್ ಶೆಟ್ಟಿ, ಯುಎಸ್ಎ AATA ಸಂಸ್ಥಾಪಕ ಭಾಸ್ಕರ್ ಶೇರಿಗಾರ್, ನಂದಿನಿ ಲೇಔಟ್ ಬಿಬಿಎಂಪಿ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಭಾಗವಹಿಸಲಿದ್ದಾರೆ.
ʻತುಳುನಾಡ್ದ ಸಿರಿʼ ಪ್ರಶಸ್ತಿ ಪ್ರದಾನ
ಮಧ್ಯಾಹ್ನ ತುಳುವೆರೆ ಚಾವಡಿದ ತುಳುನಾಡ್ದ ಸಿರಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾಜ ಸೇವೆ ವಿಭಾಗದಲ್ಲಿ ಅರುಣ್ ಶೆಟ್ಟಿ ಕೊಡಿಬೆಟ್ಟು, ಈಶ್ವರ ಮಲ್ಪೆ, ಸಾಹಿತ್ಯ ಕ್ಷೇತ್ರದಲ್ಲಿ ವಿಜಯಲಕ್ಷ್ಮೀ ಕಟೀಲ್ ಹಾಗೂ ಹಿರಿಯ ತುಳು ಕನ್ನಡ ಸಾಹಿತಿ ಡಿ. ಕೆ. ಚೌಟ ಸ್ಮರಣಾರ್ಥ ಪ್ರಶಸ್ತಿಯನ್ನು ಕಡಮಜಲು ಸುಭಾಸ್ ರೈಯವರಿಗೆ ನೀಡಿ ಗೌರವಿಸಲಾಗುತ್ತದೆ. ದಿ. ವಿಜಯ ಕುಮಾರ್ ಕುಲಶೇಖರ ಸ್ಮರಣಾರ್ಥ ಪ್ರಶಸ್ತಿಯನ್ನು ತುಳು ಸೇವೆಯಲ್ಲಿ ಜಿ.ವಿ.ಎಸ್. ಉಳ್ಳಾಲ್ ಇವರಿಗೆ ನೀಡಲಾಗುತ್ತದೆ.
ಬೆಳಿಗ್ಗೆ ತುಳು ಸಾಹಿತ್ಯ ಸಂವಾದ, ʻತುಳು ಜೋಕುಲೆ ಜಾನಪದ ಪದೊಕುಲೆನ ಸಂಪೊಲಿಗೆ ಬೂಕುʼ ʻತುಳು ಭಜನೆ ವಿಡಿಯೋʼ ಬಿಡುಗಡೆ ನಡೆಯಲಿದೆ. ಅದರ ಜೊತೆಗೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಹಾಗೂ ಸಂಜೆ ವಿಧಾತ್ರಿ ಕಲಾವಿದೆರ್ ಕೈಕಂಬ ಕುಡ್ಲ ಇವರಿಂದ ʼದೈವರಾಜೆ ಶ್ರೀ ಬಬ್ಬುಸ್ವಾಮಿʼ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಬೆಂಗಳೂರಿನಲ್ಲಿರುವ ತುಳುವರು ಭಾಗವಹಿಸಲು ಮನವಿ
ಈ ಕಾರ್ಯಕ್ರಮ ತುಳುನಾಡಿನ ಕಲೆ ಸಂಸ್ಕೃತಿಯನ್ನು ರಾಜ್ಯ ರಾಜಧಾನಿಯಲ್ಲಿ ಪಸರಿಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿದೆ. ತುಳುನಾಡಿನ ಕಲೆ, ಸಂಸ್ಕೃತಿ, ಜಾನಪದ ಸಾಹಿತ್ಯ, ತುಳು ನಾಟಕ ಜೊತೆಗೆ ತುಳುನಾಡಿನ ವಿಶೇಷ ತಿಂಡಿ ತಿನಿಸುಗಳೊಂದಿಗೆ ಮಧ್ಯಾಹ್ನ ʼತುಳು ವನಸ್ʼ ಕೂಡಾ ನಡೆಯಲಿದೆ. ಬೆಂಗಳೂರಿನಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿರುವ ತುಳುನಾಡಿನ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತುಳುವೆರೆ ಚಾವಡಿಯ ಅಧ್ಯಕ್ಷ ಮುಂಡಾಳಗುತ್ತು ವಿಶುಕುಮಾರ್ ರೈ ತಿಳಿಸಿದ್ದಾರೆ.










