







ಭಾರತವು ಪ್ರಜಾಪ್ರಭುತ್ವ ಹಾಗೂ ಸರ್ವಧರ್ಮೀಯ ರಾಷ್ಟ್ರ. ಪರಸ್ಪರ ಸಹಕಾರ ಹಾಗೂ ಸಹಬಾಳ್ವೆಯಿಂದ ಅಂದಿನಿಂದ ಇಂದಿನವರೆಗೂ ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರೀಕನ ಪಾತ್ರವೂ ಕೂಡ ಅಮೂಲ್ಯವಾದದ್ದು. ಆದರೆ ದೇಶವನ್ನು ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಸಂಕಷ್ಟ ಬಂದೊದಗಿದಾಗ ದೇಶದ ಜನತೆಯಲ್ಲಿ ರಕ್ತ ಕುದಿಯುತ್ತಿತ್ತು.ನಾವಾಯಿತು ನಮ್ಮ ದೇಶವಾಯಿತು ಎಂದು ಶಾಂತಿಯಿಂದ ದೇಶವನ್ನು ತನ್ನ ಮನೆಯೆಂದೇ ಗ್ರಹಿಸಿ ರಕ್ಷಿಸುತ್ತಿರುವಾಗ ಹೇಡಿಗಳಂತೆ ದೇಶದ ಒಳನುಗ್ಗಿ ನಮ್ಮನ್ನೇ ಕೊಲ್ಲುವಷ್ಟು ಧೈರ್ಯ ಆ ಪಾಪಿ ಪಾಕಿಸ್ತಾನಿ ಸೈನಿಕರಿಗೆ ಎಲ್ಲಿಂದ ಬಂತು?


ಇದು ಇಂದು ನಿನ್ನೆಯ ವಿಷಯವಲ್ಲ. 1999ರ ಇಸವಿಯಲ್ಲಿ ಆದಂತಹ ಕಾರ್ಗಿಲ್ ಯುದ್ಧದ ಸನ್ನಿವೇಶವದು. 1999ರ ಮೇ ಮತ್ತು ಜುಲೈ ತಿಂಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನದ ನಡುವೆ ಲಡಾಖ್ ನ ಕಾರ್ಗಿಲ್ ಜಿಲ್ಲೆಯಲ್ಲಿ ಸಶಸ್ತ್ರ ಸಹಿತ ಭೀಕರ ಯುದ್ಧ ನಡೆಯುತ್ತದೆ. ಕಾಲು ಕೆರೆದು ಜಗಳಕ್ಕೆ ಬರುವ ಜಾಯಮಾನ ಪಾಕಿಸ್ತಾನಿಗಳದ್ದು. ಅವರಿಗೆ ತಾವಾಯಿತು ತಮ್ಮ ದೇಶವಾಯಿತು ಎಂದು ಸುಮ್ಮನಿರಲು ಬರುವುದಿಲ್ಲ. ಪಾಕಿಸ್ತಾನದ ಪಾತಕಿಗಳಿಗೆ ಭಾರತ ದೇಶದ ಅಭಿವೃದ್ಧಿಯನ್ನು ನೋಡಿ ಸಹಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಒಳಗೊಳಗೆ ಕುತಂತ್ರ ನಡೆಸಿ ಭಾರತ ಮಾತೆಯನ್ನು ಕೆದಕುವ ಪ್ರಯತ್ನ ನಡೆಸುತ್ತಿರುತ್ತಾರೆ. ಯುದ್ಧದಲ್ಲಿ ಸೆರೆ ಸಿಕ್ಕ ಸೈನಿಕರನ್ನು ನಡೆಸಿಕೊಳ್ಳಲು ಕೂಡ ಕೆಲವೊಂದು ನಿಯಮಗಳಿರುತ್ತವೆ. ಆದರೆ ಈ ಪಾತಕಿ ಪಾಕಿಸ್ತಾನಿಗಳಿಗೆ ಅದಾವುದೂ ಕೂಡ ಇಲ್ಲದಾಯಿತು. ಎಷ್ಟರಮಟ್ಟಿಗೆ ಅವರು ಅಟ್ಟಹಾಸ ಮೆರೆದರೆಂದರೆ ನಮ್ಮ ದೇಶದ ಹೆಮ್ಮೆಯ ಸೈನಿಕರಾದ ಕ್ಯಾಪ್ಟನ್ ಸೌರಭ ಕಾಲಿಯಾ ಹಾಗೂ ಅವರ ಸಹಚರರನ್ನು ದೇಹದ ಯಾವೊಂದು ಅಂಗಗಳು ಸ್ಥಿರವಾಗಿಲ್ಲದಂತೆ ದೇಹವನ್ನು ಛಿದ್ರಛಿದ್ರಗೊಳಿಸಿ ಮಾನವೀಯತೆಗೆ ಬೆಲೆಯೇ ಇಲ್ಲದಂತಾಗಿಸಿದರು. ಅಂದು ಪಾಕಿಸ್ತಾನದ ಈ ಕ್ರೌರ್ಯಕ್ಕೆ ಇಡೀ ಭಾರತ ದೇಶವೇ ದಿಗ್ಭ್ರಾಂತವಾಗಿತ್ತು. ಇಂತಹ ಒಂದು ಕ್ರೂರಿ ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರ ಎಂದು ಹೇಳಿಕೊಳ್ಳಲು ಮುಜುಗರವೆನಿಸುತ್ತದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾರಂತಹ ಹೆಮ್ಮೆಯ ಸಹೃದಯಿ ವೀರಯೋಧರನ್ನೇ ಬಲಿ ತೆಗೆದುಕೊಂಡಂತಹ ಪಾಪಿ ಪಾಕಿಸ್ತಾನವೇ ನಿನಗಿನ್ನು ಉಳಿಗಾಲವಿಲ್ಲ. ಕಾರ್ಗಿಲ್ ದಿನ ಅನ್ನುವಾಗ ದೇಶದ ಜನತೆಯಲ್ಲಿ ರಕ್ತ ಕುದಿಯುತ್ತದೆ. ಏಕೆಂದರೆ ಕಾರ್ಗಿಲ್ ಪ್ರದೇಶವನ್ನು ಗೆದ್ದ ವಿಜಯೋತ್ಸವದ ನೆನಪು ಒಂದು ಕಡೆಯಾದರೆ, ದೇಶಕ್ಕಾಗಿ ಅದೆಷ್ಟೋ ಸೈನಿಕರು ಮೇ ತಿಂಗಳಿನಿಂದ ಜುಲೈ ತಿಂಗಳವರೆಗೂ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದ್ದಾರೆ. ಎಷ್ಟೋ ಸೈನಿಕರು ಅಂಗವೈಕಲ್ಯವನ್ನು ಹೊಂದಿ ಈಗಲೂ ಕೂಡ ಈ ಪಾಪಿ ಪಾಕಿಸ್ತಾನದ ಅಟ್ಟಹಾಸದ ಫಲದ ನೋವನ್ನು ಜೀವನವಿಡೀ ಅನುಭವಿಸುತ್ತಿದ್ದಾರೆ. ಸಾಮಾನ್ಯ ಮನುಷ್ಯರಾದ ನಾವು ಕೈಯ ಬೆರಳಿಗೆ ಒಂದು ಕತ್ತಿ ತಾಗಿ ಗಾಯವಾದರೆ ಒದ್ದಾಡುತ್ತೇವೆ. ಅಂತಹುದರಲ್ಲಿ ಇಡೀ ದೇಹವು ಗುಂಡಿನಿಂದ ಆವರಿಸಿ ರಕ್ತ ಸಿಕ್ತವಾಗಿದ್ದರೂ ಕೂಡ, ನನ್ನ ದೇಹವು ದೇಶಕ್ಕಾಗಿ, ಭಾರತ ಮಾತೆಯ ಸೇವೆಗಾಗಿ ಮೀಸಲು ಎಂದು ಯುದ್ಧಭೂಮಿಗೆ ಬೆನ್ನು ಹಾಕದೇ, ಎದುರಾಳಿಗೆ ಎದೆಯೊಡ್ಡಿ ದೇಶದ ರಕ್ಷಣೆಗಾಗಿ ನಿಂತ ನಮ್ಮ ಹೆಮ್ಮೆಯ ವೀರಯೋಧರಿಗೆ ನಾವೇನು ಕೊಡುಗೆ ನೀಡಿದ್ದೇವೆ ಎಂಬುದು ಯೋಚಿಸಬೇಕಾದ ವಿಚಾರವಾಗಿದೆ. ನಮ್ಮ ಹಾಗೆ ಅವರಿಗೂ ಕೂಡ ತಮ್ಮದೇ ಆದಂತಹ ಮನೆ, ಸಂಸಾರ ಎಂಬಂತಹ ಆಸೆ, ಆಕಾಂಕ್ಷೆಗಳಿರುತ್ತವೆ. ತಮ್ಮ ಎಲ್ಲಾ ಆಸೆ, ಆಕಾಂಕ್ಷೆ, ಕನಸುಗಳನ್ನು ಬದಿಗೊತ್ತಿ ‘ಮೈ ಹೂ ಜವಾನ್’ ಎಂಬ ದಿಟ್ಟ ನಿಲುವನ್ನು ಹೊಂದಿ ದೇಶಕ್ಕಾಗಿ ಹೋರಾಡಿದ ವೀರ ಸೈನಿಕರ ಕುಟುಂಬಕ್ಕೋಸ್ಕರ ನಾವೇನು ಮಾಡಿದ್ದೇವೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.



ದೇಶ ನಮಗಾಗಿ ಏನು ಮಾಡಿದೆ ಎನ್ನುವುದಕ್ಕಿಂತ ದೇಶಕೋಸ್ಕರ ನಾವೇನು ಮಾಡಿದ್ದೇವೆ* ಎನ್ನುವುದು ಮುಖ್ಯವಾಗುತ್ತದೆ. ಏಕೆಂದರೆ *ಮಾನವ ಸಂಘಜೀವಿ* . *ಡಿ.ವಿ.ಜಿ ಯವರ* ಮಾತಿನಂತೆ ಎಲ್ಲರೊಳಗೊಂದಾಗಿ ನಾವು ಬದುಕಬೇಕು. ಇದೇ ಮಾನವ ಧರ್ಮ. ಮಾನವನಲ್ಲಿ ಪ್ರೀತಿ, ದಯೆ, ಕರುಣೆ, ಸಹಬಾಳ್ವೆ ,ಸ್ನೇಹ, ಸಹಕಾರ, ಮಾನವೀಯತೆ, ಭ್ರಾತೃತ್ವ ಮನೋಭಾವ ಎನ್ನುವಂತಹ ಗುಣಗಳಿದ್ದರೆ ಮಾತ್ರ ದೇಶ ಸುಭದ್ರವಾಗಿರುತ್ತದೆ ಎಂಬ ನಿಲುವಿನೊಂದಿಗೆ ದೇಶಕ್ಕಾಗಿ ಪ್ರಾಣತೆತ್ತಂತಹ ವೀರಯೋಧರನ್ನು ನಮ್ಮ ಅಂತರಾಳದಿಂದ ಸ್ಮರಿಸುವುದರೊಂದಿಗೆ ಯುವಜನತೆಯು ದೇಶದ ರಕ್ಷಣೆಗೆ ನಿಲ್ಲಬೇಕು ಎಂಬ ಮಾತುಗಳೊಂದಿಗೆ ವಿರಮಿಸುತ್ತಿದ್ದೇನೆ.
ಅಶ್ವಿನಿ ರಾಘವೇಂದ್ರ ಶೆಣೈ, ಅಂಬಿಕಾ ವಿದ್ಯಾಲಯ(ಸಿ.ಬಿ.ಎಸ್.ಇ) ಪುತ್ತೂರು










