







ಪುತ್ತೂರು: ಊರೆಲ್ಲಾ ಜಲಮಯವಾಗಿರುವ ದಟ್ಟ ಮಳೆಗಾಲದ ನಡುವೆಯೂ ಒಳಮೊಗ್ರು ಗ್ರಾಮದ ಶೇಖಮಲೆ ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ. ಮಳೆಯ ನಡುವೆಯೂ ನೀರಿಗಾಗಿ ಪರದಾಡುವ ವಿಚಿತ್ರ ಹಾಗೂ ಶೋಚನೀಯ ಪರಿಸ್ಥಿತಿ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ.


ಬೋರ್ವೆಲ್ ದುರಸ್ತಿಯೇ ಮೂಲ ಕಾರಣ!
ಗ್ರಾಮದ ಶೇಖಮಲೆ ಭಾಗದ ಜನರಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಗ್ರಾಮ ಪಂಚಾಯತ್ನ ಬೋರ್ವೆಲ್ ಕಳೆದ ಕೆಲವು ದಿನಗಳಿಂದ ಕೆಟ್ಟು ಹೋಗಿದ್ದು ಬೋರ್ವೆಲ್ ಒಳಗೆ ಪಂಪು ಸಿಕ್ಕಿಹಾಕಿಕೊಂಡಿದೆ. ಇದರಿಂದಾಗಿ ಸರಿಯಾಗಿ ನೀರು ಪೂರೈಕೆಯಾಗದೆ, ದೈನಂದಿನ ಅಗತ್ಯಗಳಿಗೆ ಮತ್ತು ಕುಡಿಯುವ ನೀರಿಗಾಗಿ ದಿನಂಪ್ರತಿ ಹರಸಾಹಸ ಪಡುವಂತಾಗಿದೆ.



ಮುಂಗಾರಿನಲ್ಲೂ ಆತಂಕ
ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದು ಸಹಜ. ಆದರೆ, ಚಂಡಮಾರುತ-ಧಾರಾಕಾರ ಮಳೆಯಾಗುವ ಈ ದಟ್ಟ ಮಳೆಗಾಲದಲ್ಲೇ ನೀರಿಗೆ ಅಭಾವ ಸೃಷ್ಟಿಯಾಗಿರುವುದು ಶೇಖಮಲೆ ಭಾಗದ ಜನರನ್ನು ತೀವ್ರ ಆತಂಕಕ್ಕೆ ಈಡುಮಾಡಿದೆ. “ಜನರ ಮೂಲಭೂತ ಅಗತ್ಯವಾದ ಕುಡಿಯುವ ನೀರನ್ನೊದಗಿಸುವುದು ಸ್ಥಳೀಯ ಆಡಳಿತದ ಕರ್ತವ್ಯ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಕೆಟ್ಟುಹೋಗಿರುವ ಬೋರ್ವೆಲ್ ದುರಸ್ತಿಗೊಳಿಸಬೇಕು. ಶೇಖಮಲೆ ಭಾಗದ ಜನರಿಗೆ ಶಾಶ್ವತ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜನರ ದಿನನಿತ್ಯದ ಪರದಾಟವನ್ನು ಕಂಡು ಸ್ಥಳೀಯ ಆಡಳಿತ ಶೀಘ್ರವೇ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಾರ್ವಜನಿಕ ಶೌಚಾಲಯಕ್ಕೆ ಬೀಗ..?
ನೀರಿನ ಅಭಾವದ ನಡುವೆಯೇ ಕುಂಬ್ರದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಶೌಚಾಲಯಕ್ಕೂ ಕೂಡ ಇದೇ ಬೋರ್ವೆಲ್ನಿಂದ ನೀರು ಸರಬರಾಜು ಆಗುತ್ತಿದ್ದು ಇದೀಗ ಬೋರ್ವೆಲ್ ಕೆಟ್ಟು ಹೋಗಿರುವುದರಿಂದ ಶೌಚಾಲಯಕ್ಕೂ ನೀರು ಇಲ್ಲದಾಗಿದೆ.
50ಕ್ಕೂ ಅಧಿಕ ಮನೆಗಳಿಗೆ ಸಂಕಷ್ಟ…!
ಶೇಖಮಲೆ ಭಾಗದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ಈ ಬೋರ್ವೆಲ್ನಿಂದ ಕುಡಿಯುವ ನೀರು ಸರಬರಾಜರಾಗುತ್ತಿದ್ದು ಇದೀಗ ಈ ಮನೆಯವರು ನೀರಿಗಾಗಿ ಪರದಾಡಬೇಕಾಗಿದೆ. ಕೆಲವು ಮನೆಯವರು 400ರೂ.ಕೊಟ್ಟು ಪಿಕ್ಅಪ್ನಲ್ಲಿ ನೀರು ತರಿಸಿಕೊಳ್ಳುತ್ತಿದ್ದಾರೆ. ಇನ್ನುಳಿದ ಒಂದಷ್ಟು ಮನೆಯವರು ಅಕ್ಕಪಕ್ಕದ ಮನೆಗಳಿಂದ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.










