







ಬರಹ: ಸಿಶೇ ಕಜೆಮಾರ್


ಪುತ್ತೂರು: ಮಳೆಗಾಲ ಆರಂಭವಾಯಿತೆಂದರೆ ಸಾಕು, ರಸ್ತೆಗಿಳಿಯುವ ಪ್ರತಿಯೊಬ್ಬರಿಗೂ ಮಳೆಯಿಂದ ರಕ್ಷಣೆ ಪಡೆಯುವುದೇ ಬಹುದೊಡ್ಡ ಆತಂಕ. ಬಿಟ್ಟು ಬಿಡದೆ ಸುರಿಯುವ ಮಳೆಯಲ್ಲಿ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರು ಮತ್ತು ರೈತರಿಗೆ ನೆರವಾಗಲು ಮಾರುಕಟ್ಟೆಗೆ ಹಲವು ನಮೂನೆಯ ರೇನ್‌ಕೋಟ್‌ಗಳು ಲಗ್ಗೆ ಇಡುತ್ತವೆ. ಆದರೆ, ಕಳೆದ ಎರಡು ವರ್ಷಗಳಿಂದ ಮಾರುಕಟ್ಟೆಯ ಚಿತ್ರಣವೇ ಬದಲಾಗಿದ್ದು, ಕೇವಲ ರೂ.100 ಬೆಲೆಯ ರೇನ್‌ಕೋಟ್ ಭಾರಿ ಸಂಚಲನ ಮೂಡಿಸಿದೆ.



ದುಬಾರಿ ಬೆಲೆಯ ರೇನ್‌ಕೋಟ್‌ಗಳಿಗೆ ಟಕ್ಕರ್
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಗುಣಮಟ್ಟದ ರೇನ್‌ಕೋಟ್ ಎಂದರೆ ಕನಿಷ್ಠ ರೂ. 1,೦೦೦ದಿಂದ 1,5೦೦ರವರೆಗೆ ವೆಚ್ಚ ಮಾಡಬೇಕಾಗುತ್ತದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅಥವಾ ತಕ್ಷಣದ ಅಗತ್ಯಕ್ಕೆ ಇಷ್ಟೊಂದು ಹಣ ನೀಡಿ ರೇನ್‌ಕೋಟ್ ಖರೀದಿಸುವುದು ಹೊರೆಯಾಗಿತ್ತು. ಆದರೆ, ಈ ರೂ.100ರ ರೇನ್‌ಕೋಟ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ, ದುಬಾರಿ ಬೆಲೆಯ ಬ್ರ್ಯಾಂಡೆಡ್ ರೇನ್‌ಕೋಟ್‌ಗಳಿಗೆ ಪ್ರಬಲ ಪೈಪೋಟಿ (ಟಕ್ಕರ್) ನೀಡಿದೆ. ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ರಕ್ಷಣೆ ನೀಡುತ್ತಿರುವುದು ಇದರ ಪ್ರಮುಖ ಪ್ಲಸ್ ಪಾಯಿಂಟ್ ಆಗಿದೆ.
ಯಾರಿಗೆಲ್ಲಾ ಇದು ವರದಾನ?
ಸಣ್ಣ ಮೊತ್ತದಲ್ಲಿ ಸಿಗುವ ಈ ರೇನ್‌ಕೋಟ್ ಸದ್ಯ ಲಕ್ಷಾಂತರ ಜನರ ದಿನನಿತ್ಯದ ಮಳೆಗಾಲದ ಜೀವನವನ್ನು ಸರಳಗೊಳಿಸಿದೆ. ಮುಖ್ಯವಾಗಿ ಹೊಲ-ಗದ್ದೆಗಳಲ್ಲಿ ನಿರಂತರವಾಗಿ ದುಡಿಯುವ ರೈತರಿಗೆ ಭಾರಿ ತೂಕದ ರೇನ್‌ಕೋಟ್‌ಗಳು ಕಿರಿಕಿರಿಯುಂಟು ಮಾಡುತ್ತಿದ್ದವು. ಆದರೆ ಈ ಹಗುರವಾದ 100 ರೂಪಾಯಿ ರೇನ್‌ಕೋಟ್ ಧರಿಸಿ ಕೆಲಸ ಮಾಡುವುದು ಅತ್ಯಂತ ಸುಲಭವಾಗಿದ್ದು, ರೈತ ಸಮುದಾಯ ಇದನ್ನು ಅಚ್ಚುಮೆಚ್ಚಿನಿಂದ ಬಳಸುತ್ತಿದೆ.

ಇನ್ನು ದ್ವಿಚಕ್ರ ವಾಹನ ಸವಾರರಿಗೆ, ದಿಢೀರನೆ ಮಳೆ ಬಂದಾಗ ಬೈಕ್, ಸ್ಕೂಟರ್ ಸವಾರರು ರಸ್ತೆಬದಿಯ ಅಂಗಡಿಗಳಲ್ಲಿ ತಕ್ಷಣವೇ ಸಿಗುವ ಈ ರೇನ್‌ಕೋಟ್ ಖರೀದಿಸಿ, ನೆನೆಯದೆ ಗಮ್ಯಸ್ಥಾನ ತಲುಪುತ್ತಿದ್ದಾರೆ. ಜಾಗವನ್ನೂ ಹೆಚ್ಚಾಗಿ ಆಕ್ರಮಿಸದ ಕಾರಣ ಇದನ್ನು ಬೈಕ್‌ನಲ್ಲಿ ಸದಾ ಇಟ್ಟುಕೊಳ್ಳುವುದು ಕೂಡ ಸುಲಭವಾಗಿದೆ. ಶಾಲೆ, ಕಾಲೇಜು ಮತ್ತು ಕಚೇರಿಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಜೇಬಿಗೆ ಹೊರೆಯಾಗದ ದರದಲ್ಲಿ ಲಭ್ಯವಿರುವುದರಿಂದ, ಪ್ರತಿಯೊಬ್ಬರ ಬ್ಯಾಗ್‌ನಲ್ಲಿಯೂ ಇದು ಜಾಗ ಪಡೆದುಕೊಂಡಿದೆ.
ಈ ನೂರು ರೂಪಾಯಿ ರೇನ್‌ಕೋಟ್‌ನ ಜನಪ್ರಿಯತೆಗೆ ಮುಖ್ಯ ಕಾರಣವೆಂದರೆ ಕೈಗೆಟುಕುವ ದರ. 100 ರೂಪಾಯಿಯಂತೆ ಸಿಗುವುದರಿಂದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ಸುಲಭವಾಗಿ ಖರೀದಿಸಬಹುದಾಗಿದೆ. ತೂಕದಲ್ಲಿ ಅತ್ಯಂತ ಹಗುರವಾಗಿದ್ದು, ಪ್ರಯಾಣದ ವೇಳೆಯಲ್ಲಿ ಮಡಚಿ ಬ್ಯಾಗ್ ಅಥವಾ ಬೈಕ್ ಡಿಕ್ಕಿಯಲ್ಲಿ ಇಟ್ಟುಕೊಳ್ಳಲು ಸೂಕ್ತವಾಗಿದೆ. ಸಣ್ಣ ಪುಟ್ಟ ವ್ಯಾಪಾರಿಗಳಿಂದ ಹಿಡಿದು ಸಾಫ್ಟ್‌ವೇರ್ ಉದ್ಯೋಗಿಗಳವರೆಗೆ ಪ್ರತಿಯೊಬ್ಬರೂ ಇದನ್ನು ಖರೀದಿಸುತ್ತಿರುವುದರಿಂದ ಸದ್ಯ ಮಾರುಕಟ್ಟೆಯಲ್ಲಿ ಸಾವಿರಾರು ರೇನ್‌ಕೋಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗುತ್ತಿವೆ. ಮಳೆಗಾಲದ ಈ ತುರ್ತು ಸಮಯದಲ್ಲಿ ದುಬಾರಿ ವೆಚ್ಚಕ್ಕೆ ಪರ್ಯಾಯವಾಗಿ ಬಂದಿರುವ 100 ರೂಪಾಯಿ ರೇನ್‌ಕೋಟ್, “ಕಡಿಮೆ ವೆಚ್ಚ – ಹೆಚ್ಚಿನ ಪ್ರಯೋಜನ” ಎಂಬ ಸೂತ್ರಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಗ್ರಾಹಕರ ಮನ ಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಬೈಕ್ ಬೆಲೆ 2 ಲಕ್ಷ ಇದ್ದರೂ ರೇನ್‌ಕೋಟ್ ಮಾತ್ರ ನೂರರದ್ದು…?!
ಒಂದು ಕಾಲದಲ್ಲಿ ಸಾವಿರಾರು ರೂಪಾಯಿ ಕೊಟ್ಟು ರೇನ್‌ಕೋಟ್ ಖರೀದಿಸಿ ಹಾಕಿದರೂ ಜೋರು ಮಳೆ ಬಂದರೆ ಬಟ್ಟೆಯಲ್ಲೇ ಒದ್ದೆಯಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಒಬ್ಬ 2 ಲಕ್ಷ ರೂಪಾಯಿ ಬೆಲೆಯ ಬೈಕ್ ಓಡಿಸುತ್ತಿದ್ದರು ಆತ ಧರಿಸುವ ರೇನ್‌ಕೋಟ್ ಮಾತ್ರ 100 ರೂಪಾಯಿದ್ದು ಆಗಿರುತ್ತದೆ. ಏಕೆಂದರೆ ಇದು ಮಳೆ ನೀರಿನಿಂದ ಸಂಪೂರ್ಣ ರಕ್ಷಣೆ ಕೊಡುತ್ತದೆ. ಇನ್ನು ಮಡಚಿ ಇಟ್ಟುಕೊಳ್ಳಲು ಕೂಡ ಸುಲಭ. ಮೊದಲೆಲ್ಲ ದೊಡ್ಡ ಬ್ಯಾಗ್ ಅನ್ನು ಬೆನ್ನಿಗೆ ಹಾಕಿಕೊಂಡು ಅದರಲ್ಲಿ ರೇನ್‌ಕೋಟ್ ಇಟ್ಟುಕೊಳ್ಳಬೇಕಾಗಿತ್ತು ಆದರೆ ಈ ರೇನ್‌ಕೋಟ್‌ಗೆ ಆ ಚಿಂತೆ ಇಲ್ಲ.

ನಾನು ಮೊದಲೆಲ್ಲ ಸಾವಿರ ರೂಪಾಯಿ ರೇನ್‌ಕೋಟ್ ಹಾಕಿದ್ದರೂ ಮಳೆಯಲ್ಲಿ ಬಟ್ಟೆಯಲ್ಲೆ ಒದ್ದೆಯಾಗುತ್ತಿತ್ತು ಈ ನೂರು ರೂಪಾಯಿ ರೇನ್‌ಕೋಟ್ ಬಂದಮೇಲೆ ಅದನ್ನೇ ಖರೀದಿಸಿ ಹಾಕುತ್ತಿದ್ದೇನೆ ಒಂದು ಚೂರು ಒದ್ದೆಯಾಗಲ್ಲ. ನನ್ನ ಕೆಲಸಕ್ಕೆ ಇದು ತುಂಬಾ ಪ್ರಯೋಜನವಾಗಿದೆ.
ಶಿವರಾಮ್ ತ್ಯಾಗರಾಜನಗರ, ನಿತ್ಯ ನಿಧಿ ಸಂಗ್ರಹಕರು










