






ಕೊಕ್ಕಡ: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೃಷ್ಣ ಕುಮಾರ್ ಶೆಟ್ಟಿ ಕಡಬ ಅವರಿಗೆ ಅಭಿನಂದನಾ ಕಾರ್ಯಕ್ರಮ ಆ.8ರಂದು ಸೌತಡ್ಕದ ಸೇವಾಧಾಮದಲ್ಲಿ ನಡೆಯಿತು.


ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮುಖ್ಯಸ್ಥ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಸಂಸ್ಥೆಯ ದೇವದಾಸ್ ಶೆಟ್ಟಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ನ ಅಧ್ಯಕ್ಷ ಕೃಷ್ಣ ಭಟ್, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪಟ್ಟೂರು ಶ್ರೀರಾಮ ಶಾಲೆಯ ಅಧ್ಯಕ್ಷ ಜನಾರ್ದನ ಕಜೆ ಹಾಗೂ ಶ್ರೀ ಮಹಾಗಣಪತಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಹಾಗೂ ಸೌತಡ್ಕ ಶ್ರೀ ವಿದ್ಯಾಗಣಪತಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ರಚನಾ ಸಮಿತಿ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಪಿಎಂಸಿ ಮಾಜಿ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಕೃಷ್ಣ ಕುಮಾರ್ ಶೆಟ್ಟಿ ಕಡಬ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಕೃಷ್ಣ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.
ನಿಡ್ಲೆ ಗ್ರಾಮದ ಪೈರೋಡಿ ಸತ್ಯನಾರಾಯಣ ರಾವ್ ಅವರು ನೂತನ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಮೊದಲ ಕಂತು 40 ಸಾವಿರ ರೂ ನೀಡಿದ್ದು ಉಳಿದ 10 ಸಾವಿರ ರೂ ಮೊತ್ತವನ್ನು ಕಾರ್ಯಕ್ರಮದಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಹಸ್ತಾಂತರಿಸಿದರು.
ಹರೀಶ್ ರಾವ್ ಮುಂಡ್ರುಪ್ಪಾಡಿ ಸ್ವಾಗತಿಸಿ ಜನಾರ್ದನ ಕಜೆ ವಂದಿಸಿದರು. ಪಟ್ಟೂರು ಶಾಲೆಯ ಸಹ ಶಿಕ್ಷಕಿಯರಾದ ಭವ್ಯ ಮತ್ತು ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಿಕಾ ಸಮಿತಿಯ ಮುಂದಾಳು ಡಾ. ಕಮಲಾ ಪ್ರಭಾಕರ ಭಟ್, ಜಯರಾಮ ನೆಲ್ಲಿತ್ತಾಯ ಸಹಿತ ಹಲವರು ಭಾಗವಹಿಸಿದ್ದರು.
ಸಂಸ್ಕಾರಯುತ ಶಿಕ್ಷಣ ನಮ್ಮ ಗುರಿ: ಕೃಷ್ಣ ಶೆಟ್ಟಿ

ನನ್ನ ಮೇಲೆ ನಂಬಿಕೆ ಇಟ್ಟು ಹಿರಿಯರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಸಂಸ್ಥೆ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಅವರ ಅಧ್ಯಕ್ಷತೆಯಲ್ಲಿ ನಿರ್ದೇಶಕರಾಗಿ ದುಡಿದ ಅನುಭವ ನನಗಿದೆ.
ಜಿಲ್ಲೆಯ ಯಾವ ಭಾಗದಲ್ಲಿ ನಮ್ಮ ವಿದ್ಯಾಸಂಸ್ಥೆಯ ಅವಶ್ಯಕತೆ ಇದೆಯೋ ಅಲ್ಲಿ ಎಲ್ಲ ಕಡೆ ಪ್ರಭಾಕರ ಭಟ್ಟರ ನೇತೃತ್ವದಲ್ಲಿ ಸಂಸ್ಥೆಯನ್ನು ಆರಂಭಿಸಿದ್ದೇವೆ. ಅದೇ ರೀತಿ ಕಡಬದಲ್ಲೂ ಸಂಸ್ಥೆ ಆರಂಭವಾಗಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದೇ ನಮ್ಮ ಗುರಿ.
ಕೃಷ್ಣ ಶೆಟ್ಟಿ ಕಡಬ, ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು
ರಾಷ್ಟ್ರೀಯ ಚಿಂತನೆ ಬೆಳೆಸುವುದು ನಮ್ಮ ಆದ್ಯತೆ: ಡಾ. ಪ್ರಭಾಕರ ಭಟ್

ಸೌತಡ್ಕದಲ್ಲಿ ನಮ್ಮ ಸಂಸ್ಥೆಯನ್ನು ಆರಂಭಿಸುವುದು ಇಲ್ಲಿನ ಹಿರಿಯರ ಮತ್ತು ನಮ್ಮ ಕನಸು. 1963-64ರಲ್ಲಿ ಪುತ್ತೂರಿನಲ್ಲಿ ಫಿಲೋಮಿನಾ ಎಜುಕೇಷನ್ ಸಂಸ್ಥೆ ಮಾತ್ರ ಇತ್ತು. ಅದು ಅವರ ಚಿಂತನೆ ಪ್ರಕಾರ ನಡೆಯುತ್ತಿತ್ತು. ಹುಡುಗಿಯರು ಬಳೆ ತೊಡಬಾರದು, ಸಿಂಧೂರ ಇಡಬಾರದು, ಹೂ ಮುಡಿಯಬಾರದು ಎಂಬುದಾಗಿ ನಿಯಮ ಇತ್ತು. ಅದರ ವಿರುದ್ಧ ಆಗಿನ ಹೆಣ್ಣು ಮಕ್ಕಳು ಸಿಡಿದೆದ್ದ ಪರಿಣಾಮ ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆ ಪ್ರಾರಂಭವಾಯಿತು. ನಮ್ಮ ಜಿಲ್ಲೆಯಲ್ಲಿ ಮತ್ತು ಕಾಸರಗೋಡು ಜಿಲ್ಲೆಯಲ್ಲೂ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ನಕ್ಸಲ್ ಪ್ರದೇಶವಾಗಿತ್ತು. ಆ ಕಾರಣ ಆ ಭಾಗದಲ್ಲಿ ರಾಷ್ಟ್ರೀಯ ಚಿಂತನೆಯನ್ನು ತುಂಬುವ ಸಲುವಾಗಿ ನಮ್ಮ ಸಂಸ್ಥೆ ಆರಂಭವಾಯಿತು. ಮುಂದಿನ ದಿನಗಳು ತರುಣ-ತರುಣಿಯರದ್ದು. ಅವರಲ್ಲಿ ರಾಷ್ಟ್ರೀಯ ಚಿಂತನೆಯನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕು. ಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ನಮ್ಮ ಸಂಸ್ಥೆ ಇನ್ನಷ್ಟು ಬೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ತರುಣರು ಮತ್ತು ಹಿರಿಯರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ದೊಡ್ಡ ಮನಸ್ಸಿನವರು ಕೃಷ್ಣ ಶೆಟ್ಟಿ ಅವರು.
ಡಾ. ಪ್ರಭಾಕರ ಭಟ್ ಕಲ್ಲಡ್ಕ, ಆರ್.ಎಸ್. ಎಸ್. ಹಿರಿಯ ಮುಂದಾಳು










