






ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಆ.10ರಂದು ರೋಟರಿ ಕ್ಲಬ್ ಪುತ್ತೂರು ಪೂರ್ವ ಇವರು ಕೊಡುಗೆಯಾಗಿ ನೀಡಿದ ಕಂಪ್ಯೂಟರ್ ಮತ್ತು ಪ್ರಾಜೆಕ್ಟರ್ ನ ಹಸ್ತಾಂತರ ಕಾರ್ಯಕ್ರಮ ನಡೆಯಿತು.


ಕಂಪ್ಯೂಟರನ್ನು ಹಸ್ತಾಂತರಿಸಿ ಮಾತನಾಡಿದ ರೋಟರಿ ಕ್ಲಬ್ ಪುತ್ತೂರು ಪೂರ್ವ ಅಧ್ಯಕ್ಷ ರೋ. ರವಿಕುಮಾರ್ ರೈ ರವರು ನಮ್ಮ ರೋಟರಿ ಕ್ಲಬ್ ಪುತ್ತೂರು ಪೂರ್ವ ಹಲವಾರು ಸಮಾಜಮುಖಿ ಕೆಲಸ, ಆರೋಗ್ಯ, ಅಂಗನವಾಡಿ ಕೇಂದ್ರಗಳಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇತ್ಯಾದಿ ಸ್ವಯಂ ಇಚ್ಛೆಯಿಂದ ಹಲವಾರು ವರುಷಗಳಿಂದ ಕೊಡುಗೆಗಳನ್ನು ನೀಡಿಕೊಂಡು ಬರುತಿದ್ದು ಇಂತಹ ಯೋಜನೆಗಳಲ್ಲಿ ಶಾಲೆಗಳಿಗೆ ಸಹಕಾರ ನೀಡುವ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ದೇಶದ ರಕ್ಷಣೆಯನ್ನು ಮಾಡಿದ ಹಿರಿಯರಾದ ನಮ್ಮ ಜಿ ಕೆ ಭಟ್ ರವರು ಕಂಪ್ಯೂಟರ್ ಗುಣಮಟ್ಟವನ್ನು ಗಮನಿಸಿ ಅತ್ಯಂತ ಗುಣಮಟ್ಟದ ಕಂಪ್ಯೂಟರ್ ಮತ್ತು ಪ್ರಾಜೆಕ್ಟರ್ ನ್ನು ದಾನ ವಾಗಿ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಬೇಕು ಎನ್ನುವ ಉದ್ದೇಶವನ್ನು ಇಟ್ಟು ಕೊಂಡ ನಿಮ್ಮ ಸೇವೆಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ಕೊಡುಗೆ ವಿದ್ಯಾಕ್ಷೇತ್ರದಲ್ಲಿ ಉಪಯೋಗವಾಗಿ ಈ ಮೂಲಕ ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ನಾಯಕರಾಗಿ ಹೊರಹೊಮ್ಮಲಿ ಎಂದರು.




ನಿವೃತ್ತ ಸೇನಾನಿ ಕರ್ನಲ್, ರೋ. ಜಿ ಕೆ ಭಟ್ ರವರು ಮಾತನಾಡಿ ತನ್ನ ಮಗನಿಂದಾಗಿ ತಾನು ಈ ಶಾಲೆಗೆ ಕೊಡುಗೆಯನ್ನು ನೀಡುವಂತಾಯಿತು. ಗ್ರಾಮೀಣ ಶಾಲೆಯು ಅಭಿವೃದ್ಧಿಯನ್ನು ಹೊಂದಬೇಕು ಎನ್ನುವ ನನ್ನ ಮಗನ ಇಚ್ಛೆಯಂತೆ ನಾನು ಈ ಶಾಲೆಗೆ ಕೊಡುಗೆಯನ್ನು ನೀಡುವಂತಾಯಿತು ಎಂದರು.
ದೀಪ ಬೆಳಗಿಸಿ ಮಾತನಾಡಿದ ಶಾಲಾಧ್ಯಕ್ಷ ಜಯರಾಮ ಕೆದಿಲಾಯ ರೋಟರಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಶಾಲೆಗೆ ಹೆಚ್ಚಿನ ಕೊಡುಗೆಗಳು ಬರಲು ಭಗವಂತನ ಅನುಗ್ರಹ ಬೇಕು ಜಿ ಕೆ ಭಟ್ ರವರು ಅವರ ಮಗನ ಮೂಲಕ ಈ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನ ಕೊಡುಗೆ ನೀಡಲು ಮುಂದೆ ಬಂದಿದ್ದು ಅದನ್ನು ಸ್ವೀಕರಿಸಲು ನಮಗೂ ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋ. ಜಯಂತ್ ಬಾಯಾರ್ ಕಾರ್ಯದರ್ಶಿ ರೋಟರಿ ಕ್ಲಬ್ ಪುತ್ತೂರು ಪೂರ್ವ, ಶಾಲಾ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ,ಶಾಲಾ ಕೋಶಾಧಿಕಾರಿ,ಜೊತೆ ಕಾರ್ಯದರ್ಶಿ ಸುಬ್ರಾಯ ಬಿ ಎಸ್, ಸದಸ್ಯ ವೆಂಕಟ ಕೃಷ್ಣ ಕೆ ಕೆ, ಹಾಗೂ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಾಲಾ ಕೋಶಾಧಿಕಾರಿ ಹರೀಶ್ ಪುತ್ತೂರಾಯ ಸ್ವಾಗತಿಸಿದರು. ಶಾಲಾ ಸಹಶಿಕ್ಷಕ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಗುರು ಶಾಲಾ ಮುಖ್ಯ ಗುರು ಪ್ರಸನ್ನ ಕೆ ವಂದಿಸಿದರು.










