ಭಾರತದ ರಾಷ್ಟ್ರಧ್ವಜ – ಇತಿಹಾಸ, ಸಂಕೇತ ಮತ್ತು ನಿಯಮ

0

ಭಾರತದ ರಾಷ್ಟ್ರಧ್ವಜವು ಪ್ರತಿಯೊಬ್ಬ ಭಾರತೀಯನ ಆಶಯ, ಸ್ವಾಭಿಮಾನ ಮತ್ತು ಐಕ್ಯತೆಯ ಸಂಕೇತವಾಗಿದೆ. ಇದನ್ನು ಪ್ರೀತಿಯಿಂದ ತ್ರಿವರ್ಣ ಧ್ವಜ ಅಥವಾ ತಿರಂಗ ಎಂದು ಕರೆಯಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ‍್ಯ ಸಿಗುವ ಕೆಲ ದಿನಗಳ ಮುನ್ನ 1947 ಜುಲೈ 22ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಈ ಧ್ವಜವನ್ನು ಅಧಿಕೃತವಾಗಿ ಸ್ವೀಕರಿಸಲಾಯಿತು.


ಧ್ವಜದ ವಿನ್ಯಾಸ ಮತ್ತು ಪ್ರಮಾಣಗಳು
ನಮ್ಮ ಧ್ವಜವು 3 ಸಮಾನಾತರ ಬಣ್ಣಗಳ ಪಟ್ಟಿಗಳನ್ನು ಹೊಂದಿದೆ. ಧ್ವಜದ ಮಧ್ಯ ಭಾಗದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದ್ದು ರಾಷ್ಟ್ರ ಧ್ವಜದ ಉದ್ದ ಮತ್ತು ಅಗಲದ ಅನುಪಾತ ಯಾವಾಗಲೂ 3:2ರಷ್ಟು ಇದೆ. ಕಾನೂನಿನ ಪ್ರಕಾರ ರಾಷ್ಟ್ರ ಧ್ವಜವನ್ನು ಕೇವಲ ಖಾದಿ ಬಟ್ಟೆಯಿಂದ ಮಾತ್ರ ತಯಾರಿಸಬೇಕು. ಬಿಳಿ ಬಟ್ಟೆಯ ಮಧ್ಯ ಭಾಗದಲ್ಲಿ ಸಾರನಾಥದ ಅಶೋಕ ಸ್ತಂಭದಿಂದ ಆಯ್ಕೆ ಮಾಡಲಾದ 24 ಕಟ್ಟಿಗಳನ್ನ ಒಳಗೊಂಡ ನೆವಿ ಬ್ಲೂ ಬಣ್ಣದ ಚಕ್ರವಿರಬೇಕು.


ರಾಷ್ಟ್ರ ಧ್ವಜದ ಇತಿಹಾಸ ಮತ್ತು ವಿಕಾಸ
ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಸಮಯದಲ್ಲಿ ರಾಷ್ಟ್ರ ಧ್ವಜವೂ ಹಲವು ಬದಲಾವಣೆಗಳನ್ನ ಕಂಡಿತ್ತು. ಆಂದ್ರಪ್ರದೇಶದ ಪಿಂಗಳಿ ವೆಂಕಯ್ಯ ಅವರು ಭಾರತ ಧ್ವಜದ ಮೂಲ ವಿನ್ಯಾಸವನ್ನು ಸಿದ್ಧಪಡಿಸಿದರು. 1921ರಲ್ಲಿ ಗಾಂಧೀಜಿಯವರ ಸೂಚನೆಯಂತೆ ಚರಕವನ್ನು ಸೇರಿಸಲಾಯಿತು. 1931ರಲ್ಲಿ ಕೆಂಪು ಬಣ್ಣದ ಬದಲಿಗೆ ಕೇಸರಿ ಬಣ್ಣವನ್ನು ಅಳವಡಿಸಿಕೊಂಡು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿಕೃತ ಧ್ವಜವಾಗಿ ಇದನ್ನು ಬಳಸಿತು. 1947ರಲ್ಲಿ ಸ್ವತಂತ್ರ‍್ಯ ಭಾರತಕ್ಕೆ ಧ್ವಜವನ್ನು ಆಯ್ಕೆ ಮಾಡುವಾಗ ಚರಕದ ಬದಲಿಗೆ ಚಾರಿತ್ರಿಕ ಅಶೋಕ ಚಕ್ರವನ್ನು ಸೇರಿಸಿ ಇಂದಿನ ತ್ರಿವರ್ಣ ಧ್ವಜವನ್ನು ಆಂತಿಮಗೊಳಿಸಲಾಯಿತು. ಪಿಂಗಳಿ ವೆಂಕಯ್ಯನವರು ಮೂಲ ಸ್ವರಾಜ್ ಧ್ವಜವನ್ನು ವಿನ್ಯಾಸಗೊಳಿಸಿದರೆ, 1947ರಲ್ಲಿ ಅಂಗೀಕರಿಸಲಾದ ಅಂತಿಮ ರಾಷ್ಟ್ರೀಯ ತಿರಂಗ ಧ್ವಜದ ವಿನ್ಯಾಸ ಮತ್ತು ಪರಿಷ್ಕರಣೆಯಲ್ಲಿ ಮಹತ್ಮಾಗಾಂಧಿ ಮತ್ತು ಬದ್ರುಧೀನ್ ತೈಯ್ಯಬ್ಜಿ ಅವರ ಪ್ರಮುಖ ಕೊಡುಗೆಗಳೊಂದಿಗೆ ಸುರೈಯ ತೈಯ್ಯಬ್ಜಿ ಅವರು ಪ್ರಮುಖ ಪಾತ್ರವಹಿಸಿದ್ದರು.‌


ಭಾರತದಲ್ಲಿ ಅಧಿಕೃತವಾಗಿ ರಾಷ್ಟ್ರಧ್ವಜಗಳನ್ನು ತಯಾರಿಸುವ ಏಕೈಕ ಪ್ರಮಾಣಿಕೃತ ಸಂಸ್ಧೆ ಕರ್ನಾಟಕದಲ್ಲಿದೆ. ಹುಬ್ಬಳ್ಳಿಯ ಬಂಗಾರ ಪೇಟೆಯಲ್ಲಿರುವ ಕರ್ನಾಟಕದ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಇಡೀ ದೇಶಕ್ಕೆ ಅಗತ್ಯವಿರುವ ಪ್ರಮಾಣಿತ ರಾಷ್ಟ್ರಧ್ವಜಗಳನ್ನು ತಯಾರಿಸಿ ಪೂರೈಸುತ್ತಿದೆ.


ಧ್ವಜ ಸಂಹಿತೆ ಮತ್ತು ಗೌರವ
2002ರಲ್ಲಿ ಜಾರಿಗೆ ಬಂದ ಫ್ಲಾಗ್ ಕೋಡ್ ಆಫ್ ಇಂಡಿಯಾ ಪ್ರಕಾರ ರಾಷ್ಟ್ರಧ್ವಜವನ್ನು ಹಾರಿಸುವಾಗ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕು. ಧ್ವಜವು ಎಂದಿಗೂ ನೆಲಕ್ಕೆ ಅಥವಾ ನೀರಿಗೆ ತಾಗದಂತೆ ನೋಡಿಕೊಳ್ಳಬೇಕು. ಹರಿದ ಅಥವಾ ಬಣ್ಣಗೆಟ್ಟ ಧ್ವಜವನ್ನು ಹಾರಿಸುವುದು ಅಪರಾಧವಾಗಿದೆ. 2022ರ ತಿದ್ದುಪಡಿ ಪ್ರಕಾರ ನಾಗರಿಕರು ತಮ್ಮ ಮನೆಗಳ ಮೇಲೆ ಹಗಲು ಮತ್ತು ರಾತ್ರಿ ಧ್ವಜವನ್ನು ಹಾರಿಸಲು ಅವಕಾಶ ನೀಡಲಾಗಿದೆ. ಧ್ವಜವನ್ನು ಗೌರವ ಪೂರ್ವಕವಾಗಿ ಕಂಬದ ತುದಿಯಲ್ಲಿ ಹಾರಿಸಬೇಕು ಮತ್ತು ಯಾವುದೇ ಜಾಹಿರಾತು ಅಥವಾ ಅಲಂಕಾರಕ್ಕೆ ಧ್ವಜವನ್ನು ಬಳಸುವಂತಿಲ್ಲ.


ಧ್ವಜ ತಯಾರಿಕೆ
ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ರಾಷ್ಟ್ರ ಧ್ವಜ ತಯಾರಿಸುವ ಅಧಿಕೃತ ಹಕ್ಕು ಹೊಂದಿರುವ ಸಂಸ್ಧೆಯಾಗಿದೆ. ಇಲ್ಲಿ ಧ್ವಜ ತಯಾರಿಕೆ ಅತ್ಯಂತ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಟ್ಟಿದೆ. ಧ್ವಜದ ಪ್ರತಿಯಿಂದು ಭಾಗವನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್ ಸಂಸ್ಧೆ 6 ಬಾರಿ ಪರಿಶೀಲನೆ/ತಪಾಸಣೆ ನಡೆಸುತ್ತದೆ. ಬಣ್ಣ, ದಾರದ ಸಾಂದ್ರತೆ, ಸೆಳೆತದ ಸಾಮರ್ಥ್ಯ ಮತ್ತು ಅಳತೆಯಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಆ ಧ್ವಜವನ್ನು ತಿರಸ್ಕರಿಸಲಾಗುತ್ತದೆ. ರಾಷ್ಟ್ರಧ್ವಜ ಸಂಹಿತೆ ಪ್ರಕಾರ ರಾಷ್ಟ್ರಧ್ವಜವನ್ನು ಕೇವಲ 9 ನಿರ್ದಿಷ್ಟ ಅಳತೆಗಳಲ್ಲಿ ಮಾತ್ರ ತಯಾರಿಸಲು ಅವಕಾಶವಿದೆ.


ಧ್ವಜದ ಅಳತೆ
ಅತ್ಯಂತ ದೊಡ್ಡ ಧ್ವಜ 20.7 /13.8 ಅಡಿ. (ದೊಡ್ಡ ಕೋಟೆ ಮತ್ತು ಸರಕಾರಿ ಕಟ್ಟಡಗಳಲ್ಲಿ ಬಳಸುವಂತದ್ದು) ಮತ್ತು ಅತ್ಯಂತ ಸಣ್ಣ ದ್ವಜ 64 ಇಂಚು(ಮೇಜಿನ ಮೇಲೆ ಇಡುವ ಧ್ವಜ) ಆಗಿರುತ್ತದೆ. ಉಳಿದಂತೆ 11.8/7.9 ಅಡಿ (ಸರಕಾರಿ ಮತ್ತು ಸಾರ್ವಜನಿಕ ದೊಡ್ಡ ಕಟ್ಟಡಗಳಲ್ಲಿ ಬಳಸುವಂತದ್ದು), 8.8/5.9 ಅಡಿ (ರಾಜ್ಯ ರಾಜಧಾನಿ ಆಡಳಿತ ಕೇಂದ್ರ ಕಟ್ಟಡಗಳಲ್ಲಿ ಬಳಸುವಂತದ್ದು), 5.9/3.9 ಅಡಿ (ಮಧ್ಯಮ ಮತ್ತು ದೊಡ್ಡ ಗಾತ್ರದ ಸಾರ್ವಜನಿಕ ಕಟ್ಟಡಗಳಲ್ಲಿ ಬಳಸುವಂತದ್ದು. 4.4/3.0 ಅಡಿ (ಜಿಲ್ಲಾ ಕಛೇರಿ ಮತ್ತು ಶಿಕ್ಷಣ ಸಂಸ್ಧೆಗಳಿಗೆ), 3.0/2.0 ಅಡಿ (ಸಾಧಾರಣ, ಹೋರಾಂಗಣ, ಶಾಲಾ ಧ್ವಜಸ್ತಂಭ ಮತ್ತು ಸ್ಧಳೀಯ ಕಛೇರಿಗಳಲ್ಲಿ ಬಳಕೆ), 1.5/1.0 ಅಡಿ (ವಿವಿಐಪಿ ವಿಮಾನ ಮತ್ತು ಸಮಾರಂಭಗಳಲ್ಲಿ ಬಳಕೆ), 9/6 ಇಂಚು (ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ಮಂತ್ರಿ ಮತ್ತು ನ್ಯಾಯಾಧೀಶರ ಅಧಿಕೃತ ಕಾರುಗಳಿಗೆ ಬಳಸುವಂತದ್ದು) ಆಗಿರುತ್ತದೆ.


ರಾಷ್ಟ್ರ ಧ್ವಜ – ಗೌರವ
ಸೇನಾ ಗೌರವಗಳ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ವಿಶೇಷ ಸ್ಧಾನವಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಅಥವಾ ಗಣ್ಯ ವ್ಯಕ್ತಿಗಳ ಪಾರ್ಥಿವ ಶರೀರದ ಮೇಲೆ ರಾಷ್ಟ್ರ ಧ್ವಜವನ್ನು ಹೊದಿಸಲಾಗುತ್ತದೆ. ಶವ ಸಂಸ್ಕಾರಕ್ಕೆ ಮೊದಲು ಆ ಧ್ವಜವನ್ನು ಅತ್ಯಂತ ಗೌರವದಿಂದ ಮಡಚಿ ಯೋಧನ ಕುಟುಂಬಸ್ಧರಿಗೆ ಹಸ್ತಾಂತರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಪಾರ್ಥಿವ ಶರೀರದ ಜೊತೆ ಧ್ವಜವನ್ನು ದಫನ ಮಾಡುವಂತಿಲ್ಲ, ಸುಡುವಂತಿಲ್ಲ.ರಾಷ್ಟ್ರ ತೆಗೆದಿಡುವಾಗ ಗೌರವ ಪೂರ್ವಕವಾಗಿ ಮಡಚಲು ನಿರ್ಧಿಷ್ಟ ನಿಯಮವಿದೆ. ಕೇಸರಿ ಮತ್ತು ಹಸಿರು ಪಟ್ಟಿಯನ್ನು ಒಳಗಡೆಗೆ ಮಡಚಿ ಬಿಳಿ ಪಟ್ಟಿ ಹೊರಗಡೆಗೆ ಕಾಣುವಂತಿರಬೇಕು ಮತ್ತು ಅಶೋಕ ಚಕ್ರವು ಸಂಪೂರ್ಣವಾಗಿ ಮೇಲ್ಭಾಗದಲ್ಲಿ ಕಾಣಿಸುವಂತೆ ಇರಬೇಕು.


ವಿಶ್ವ ದಾಖಲೆ ಮತ್ತು ಐತಿಹಾಸಿಕ ಕ್ಷಣ
1953 ಮೇ 29 ರಂದು ತೇನ್ ಸಿಂಗ್ ನೋರ್ಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದಾಗ ಪ್ರಥಮ ಬಾರಿಗೆ ಭಾರತ ಧ್ವಜವನ್ನು ಅಲ್ಲಿ ಹಾರಿಸಲಾಗಿತ್ತು. ಭಾರತದ ಮೊದಲ ಗಗನ ಯಾತ್ರಿ ರಾಕೇಶ್ ಶರ್ಮ 1984ರಲ್ಲಿ ಸೋಯೂಜ್.ಟಿ-11 ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದಾಗ ತಮ್ಮ ಸ್ಪೇಸ್ ಸೂಟ್‌ನಲ್ಲಿ ತ್ರಿವರ್ಣ ಧ್ವಜದ ಬ್ಯಾಡ್ಜ್ ಧರಿಸಿದ್ದರು. 2008ರ ಚಂದ್ರಯಾನ-1, 2023ರ ಚಂದ್ರಯಾನ -2 ಮತ್ತು 3 ಮಿಷನ್‌ಗಳ ಮೂಲಕ ಚಂದ್ರನ ಮೇಲ್ಮೈ ಮೇಲೆ ಭಾರತದ ರಾಷ್ಟ್ರ ಧ್ವಜದ ಮುದ್ರೆ ಯಶಸ್ವಿಯಾಗಿ ತಲುಪಿದೆ.


ಧ್ವಜ ಕಾನೂನು ಮತ್ತು ದಂಡನೆ
ರಾಷ್ಟ್ರೀಯ ಗೌರವಕ್ಕೆ ಅಪಚಾರ ತಡೆಯುವ ಕಾಯಿದೆ 1971ರ ಪ್ರಕಾರ ಧ್ವಜವನ್ನು ಯಾವುದೇ ವಸ್ತ್ರವಾಗಿ, ಕರವಸ್ತ್ರವಾಗಿ, ಮ್ಯಾಟ್ ಆಗಿ ಕುಶನ್ ಕವರ್ ಆಗಿ ಬಳಸುವಂತಿಲ್ಲ. ಧ್ವಜದ ಮೇಲೆ ಯಾವುದೇ ಬರಹಗಳನ್ನು ಬರೆಯುವುದು ಅಥವಾ ಮುದ್ರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ರಾಷ್ಟ್ರ ಧ್ವಜಕ್ಕೆ ಸಾರ್ವಜನಿಕವಾಗಿ ಅವಮಾನಿಸಿದರೆ, ಸುಟ್ಟರೆ ಅಥವ ಹರಿದು ಹಾಕಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.


ಪಿಂಗಳಿ ವೆಂಕಯ್ಯ
ಭಾರತದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ. ಇವರು ಸ್ವಾತಂತ್ರ‍್ಯ ಹೋರಾಟಗಾರ, ಶಿಕ್ಷಣ ತಜ್ಞ, ಮತ್ತು ಕೃಷಿ ವಿಜ್ಞಾನಿಯಾಗಿದ್ದರು. ಇವರಿಗೆ ಜಪಾನ್ ವೆಂಕಯ್ಯ ಮತ್ತು ಪತ್ತಿ (ಹತ್ತಿ) ವೆಂಕಯ್ಯ ಎಂಬ ಅಡ್ಡ ಹೆಸರು ಇತ್ತು. 19ನೇ ವಯುಸ್ಸಿನಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಗೆ ಸೇರಿದ ಇವರು ದಕ್ಷಿಣ ಆಫ್ರೀಕದಲ್ಲಿ ನಡೆದ ಬೋಯರ್ ಯುದ್ಧದಲ್ಲಿ ಭಾಗಹಿಸಿದ್ದರು. ದಕ್ಷಿಣ ಆಪ್ರೀಕಾದಲ್ಲಿ ಇದ್ದಾಗ ಬ್ರಿಟಿಷರ ಧ್ವಜಕ್ಕೆ ಲಂಡನ್ ಸೈನಿಕರು ನೀಡುತ್ತಿದ್ದ ಗೌರವನ್ನು ಕಂಡು ಭಾರತೀಯರಿಗೂ ತಮ್ಮದೆ ಆದ ಸ್ವತಂತ್ರ ರಾಷ್ಟ್ರಧ್ವಜವಿರಬೇಕು ಎಂದು ಯೋಜನೆ ಮೂಡಿತು. ವೆಂಕಯ್ಯನವರು ಸಿದ್ದಪಡಿಸಿದ ಧ್ವಜದಲ್ಲಿ ಎರಡು ಧರ್ಮಗಳನ್ನು ಸಂಕೇತಿಸುವ ಕೆಂಪು ಮತ್ತು ಹಸಿರು ಬಣ್ಣಗಳಿದ್ದವು. ಗಾಂಧೀಜಿಯವರ ಸಲಹೆ ಮೇರೆಗೆ ಇತರ ಎಲ್ಲಾ ಧರ್ಮಗಳು ಮತ್ತು ಶಾಂತಿಯ ಸಂಕೇತವಾಗಿ ಬಿಳಿ ಬಣ್ಣವನ್ನು ಮತ್ತು ಸ್ವಾವಲಂಬನೆಯ ಸಂಕೇತವಾಗಿ ಮಧ್ಯದಲ್ಲಿ ಚರಕವನ್ನು ರಚಿಸಲಾಯಿತು. 1947 ರ ಸ್ವಾತಂತ್ರ‍್ಯದ ಸಂದರ್ಭದಲ್ಲಿ ಧಾರ್ಮಿಕ ಚೌಕಟ್ಟಿನಿಂದ ಹೊರತಂದು ಬಣ್ಣಗಳಿಗೆ ಕೇಸರಿ – ತ್ಯಾಗ, ಬಿಳಿ-ಶಾಂತಿ, ಹಸಿರು-ಸಮೃದ್ಧಿ ನೈತಿಕ ಅರ್ಥವನ್ನು ನೀಡಿ ಚರಕದ ಜಾಗದಲ್ಲಿ ಅಶೋಕ ಚಕ್ರವನ್ನು ಅಳವಡಿಸಲಾಯಿತು.


ಪ್ಲಾಸ್ಟಿಕ್ ಧ್ವಜ
ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಧ್ವಜಗಳು ನೂರಾರು ವರ್ಷ ಪರಿಸರದಲ್ಲಿ ಉಳಿದು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜಗಳನ್ನು ರಸ್ತೆಯಲ್ಲಿ, ಚರಂಡಿಗಳಲ್ಲಿ ಅಥವಾ ಕಸದ ರಾಶಿಯಲ್ಲಿ ಎಸೆಯುವುದು ಇದು ರಾಷ್ಟ್ರಧ್ವಜಕ್ಕೆ ದೊಡ ಅಗೌರವವಾಗಿದೆ. ಮಣ್ಣಿನಲ್ಲಿ ಕರಗದೆ ಉಳಿದು ಭೂಮಿಯ ಫಲವತ್ತತೆಗೂ ಕಂಟಕವಾಗಿದೆ. ರಾಷ್ಟ್ರೀಯ ಗೌರವಕ್ಕೆ ಅಪಚಾರ ತಡೆಯುವ 1971ರ ಕಾಯಿದೆಯಂತೆ ರಾಷ್ಟ್ರಧ್ವಜವನ್ನು ಕಸದ ಬುಟ್ಟಿಗೆ ಹಾಕುವುದು, ನೆಲಕ್ಕೆ ಎಸೆಯುವುದು, ಧ್ವಜದ ಗೌರವಕ್ಕೆ ಕುಂದು ತರುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಕಾಯಿದೆಯಡಿ ತಪಿತಸ್ಧರಿಗೆ 3 ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ. ಸಾರ್ವಜನಿಕ ಕಾರ್ಯಕ್ರಮ ಅಥವಾ ಶಾಲಾ ಮಕ್ಕಳಿಗೆ ಅಗತ್ಯವಿದ್ದರೆ ಕಾಗದದ ಧ್ವಜ ಬಳಸಬಹುದು. ಸಮಾರಂಭ ಮುಗಿದ ಮೇಲೆ ಕಾಗದದ ಅಥವಾ ಖಾದಿ ಬಟ್ಟೆಯ ಧ್ವಜಗಳು ಹಾಳಾಗಿದ್ದರೆ ಅವುಗಳನ್ನು ಎಲ್ಲೆಂದರಲ್ಲಿ ಎಸೆಯದೆ ಗೌರವಯುತವಾಗಿ ಸಂಗ್ರಹಿಸಿ ಧ್ವಜ ಸಂಹಿತೆಯ ಪ್ರಕಾರ ಯಾರೂ ನೋಡದಂತೆ ಬೆಂಕಿಯಲ್ಲಿ ದಹಿಸಿ ಬೂದಿಮಾಡಬೇಕು, ಅಥವಾ ಗೌರವ ಪೂರ್ವಕವಾಗಿ ಮಣ್ಣಿನಲ್ಲಿ ದಫನ ಮಾಡಬೇಕು.

LEAVE A REPLY

Please enter your comment!
Please enter your name here