ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಘಮಘಮಿಸಿದ ಆಟಿಡೊಂಜಿ ಗೌಜಿ: ಆಟಿ ತಿಂಗಳಿಗೆ ವಿಶೇಷ ಸಾಂಸ್ಕೃತಿಕ, ಪ್ರಾಕೃತಿಕ ಮಹತ್ವವಿದೆ-ದಿನೇಶ್ ರಾಯಿ

0

ಯಾವುದೇ ಫಲಾಫೇಕ್ಷೆಯಿಲ್ಲದೆ ಮದ್ದು ಕೊಡುತ್ತಾ ಬಂದಿದ್ದೇನೆ-ಬಾಲಕೃಷ್ಣ ರೈ
ತುಳುನಾಡಿನ ವೈಶಿಷ್ಟ್ಯಗಳನ್ನು ಅರಿತು ಮುನ್ನೆಡೆಯುವಂತಾಗಬೇಕು-ಜಯಂತ್ ನಡುಬೈಲು
ಭವಿಷ್ಯ ಇರುವುದು ಕೃಷಿಯಲ್ಲೇ-ವಿಜಯಕುಮಾರ್ ಸೊರಕೆ
ಓರ್ವ ಯಕ್ಷಗಾನ ಕಲಾವಿದನಾಗಿ ಗುರುತಿಸಿಕೊಂಡಿದ್ದೇನೆ-ದಾಸಪ್ಪ ರೈ
ಎಲ್ಲಿ ನೆಲೆಸಿದರೂ ತಾನು ಅಕ್ಷಯ ಕಾಲೇಜಿನ ವಿದ್ಯಾರ್ಥಿ ಹೆಮ್ಮೆಯಿರಲಿ-ಕೋಟಿ ಪರವ

ಪುತ್ತೂರು:ತುಳುನಾಡಿನಲ್ಲಿ ಆಟಿ ತಿಂಗಳಿಗೆ ವಿಶೇಷ ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಮಹತ್ವವಿದೆ. ಆಟಿ ತಿಂಗಳು ಅನಿಷ್ಟ ತಿಂಗಳವಲ್ಲ ಅದು ಕಪ್ಪು ತಿಂಗಳು. ಪ್ರಕೃತಿಯೊಂದಿಗೆ ಬೆಸೆದ ತುಳುನಾಡಿನ ಸಂಪ್ರದಾಯ ಹಾಗೂ ಆಚರಣೆಗಳನ್ನು ಈ ತಿಂಗಳಲ್ಲಿ ಸ್ಮರಿಸಲಾಗುತ್ತದೆ. ಆಟಿ ಕಳಂಜದಂತಹ ಜನಪದ ಆಚರಣೆಗಳು ದುಷ್ಟಶಕ್ತಿಗಳನ್ನು ದೂರವಿರಿಸಿ ಮನೆಮಂದಿಗೆ ಆರೋಗ್ಯ ಹಾಗೂ ಸಮೃದ್ಧಿಯನ್ನು ತರುತ್ತವೆ ಎಂಬ ನಂಬಿಕೆಯಿದೆ ಎಂದು ತುಳು ಜನಪದ ಅಧ್ಯಯನಗಾರರಾದ ದಿನೇಶ್ ರಾಯಿ ಸುವರ್ಣರವರು ಹೇಳಿದರು.

ಆ.12 ರಂದು ಸಂಪ್ಯದಲ್ಲಿನ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಾದ ಅಕ್ಷಯ ಪದವಿ ಕಾಲೇಜು ಹಾಗೂ ಅಕ್ಷಯ ಪದವಿ ಪೂರ್ವ ಕಾಲೇಜಿನ ಜಂಟಿ ಸಹಯೋಗದಲ್ಲಿ ಕಾಲೇಜಿನ ಲಲಿತಾ ಕಲಾ ಸಂಘ ಹಾಗೂ ಐಕ್ಯೂಎಸಿ ನೇತೃತ್ವದಲ್ಲಿ “ಅಕ್ಷಯಡ್ ಆಟಿಡೊಂಜಿ ಗೌಜಿ” ಕಾರ್ಯಕ್ರಮದಲ್ಲಿ ಅವರು ಹಿಂಗಾರ ಅರಳಿಸಿ, ಕಳಸಕ್ಕೆ ಅಕ್ಕಿ ತುಂಬಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮಗೆ 95 ಅಂಕ ಗಳಿಸಿಯೂ ನೂರು ಸಿಗಲಿಲ್ಲ ಎಂಬ ಬೇಸರದಿಂದ ಆತ್ಮಹತ್ಯೆಗೈದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಅದೇ ವಿದ್ಯಾರ್ಥಿಗಳಿಗೆ ಮನಸ್ಸಿನಲ್ಲಿ ಗಟ್ಟಿತನ ಕೊಡುವ ವ್ಯವಸ್ಥೆ ನಮ್ಮದಾಗಬೇಕಿದೆ. ಆಟಿ ಕಳೆಂಜ ಮನೆಗೆ ಬಂದು ಮಾರಿ ತೊಲಗಿಸುತ್ತೇನೆ ಎಂದಾಗ ನಮ್ಮ ಮನಸ್ಸಿನಲ್ಲಿ ಗಟ್ಟಿತನದ ಭಾವನೆ ಮೂಡುತ್ತದೆ ಎಂದರು.

ಯಾವುದೇ ಫಲಾಫೇಕ್ಷೆಯಿಲ್ಲದೆ ಮದ್ದು ಕೊಡುತ್ತಾ ಬಂದಿದ್ದೇನೆ-ಬಾಲಕೃಷ್ಣ ರೈ:
ಮುಖ್ಯ ಅತಿಥಿ, ಹಿರಿಯರಾದ ಮಲಾರಬೀಡುವಿನ ನಾಟಿವೈದ್ಯ ಬಾಲಕೃಷ್ಣ ರೈ ಮಲಾರಬೀಡುರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಾನೇನು ಕಾಲೇಜು ವಿದ್ಯಾಭ್ಯಾಸ ಓದಿದವನಲ್ಲ. ತನ್ನ ಸಣ್ಣ ಹರೆಯದಲ್ಲಿ ತನ್ನ ತಂದೆಯೊಟ್ಟಿಗೆ ಹಳ್ಳಿ ಮದ್ದನ್ನು ಕಲಿಯುವ ಮೂಲಕ ಯಾವುದೇ ಫಲಾಫೇಕ್ಷೆಯಿಲ್ಲದೆ ಮದ್ದು ಕೊಡುತ್ತಾ ಬಂದಿದ್ದೇನೆ. ಆಟಿಯು ಕರ್ಕಾಟಕ ಮಾಸ ಹಾಗೂ ಸಿಂಹ ಮಾಸದ ನಡುವೆ ಬರುತ್ತದೆ. ಹಿರಿಯರ ತಿನಸುಗಳು, ಆಟಿ ಕಳೆಂಜ, ಆಟಿ ಕಷಾಯ ಆಟಿಯ ಪ್ರಾಮುಖ್ಯತೆ ಹೆಚ್ಚಿಸುತ್ತದೆ ಎಂದರು.

ತುಳುನಾಡಿನ ವೈಶಿಷ್ಟ್ಯಗಳನ್ನು ಅರಿತು ಮುನ್ನೆಡೆಯುವಂತಾಗಬೇಕು-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಇಂದಿನ ತಿನಸುಗಳು ಹಾಗೂ ಹಿರಿಯರ ಆಟಿ ತಿನಿಸುಗಳಲ್ಲಿ ವೈವಿಧ್ಯತೆಯೊಂದಿಗೆ ದೇಹವನ್ನು ಸದೃಢಗೊಳಿಸುವ ಮದ್ದನ್ನು ಹೊಂದಿದೆ ಮಾತ್ರವಲ್ಲ ಈ ಬಗ್ಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಲುಪಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ. ಹಿಂದಿನ ಹಿರಿಯರ ಕೃಷಿ ಬದುಕಿನಲ್ಲಿ ಉಪಯೋಗಿಸುತ್ತಿದ್ದ ಕೃಷಿ ಪರಿಕರಗಳಿಗೆ ಅಗಾಧ ಅರ್ಥವಿದೆ. ಕಾಲ ಬದಲಾವಣೆ ಆದಂತೆ ಮನುಷ್ಯ ಕೂಡ ಬದಲಾವಣೆಯದತ್ತ ಒಗ್ಗಿಕೊಂಡಿದ್ದಾನೆ. ತುಳುನಾಡಿನ ದೇವರಾಧನೆ, ದೈವರಾಧನೆ ಯಾವುದೇ ಇರಲಿ, ತುಳುನಾಡಿನ ವೈಶಿಷ್ಟ್ಯಗಳನ್ನು ಮನುಷ್ಯ ಅರಿತು ಮುನ್ನೆಡೆಯುವಂತಾಗಬೇಕು ಎಂದರು.

ಭವಿಷ್ಯ ಇರುವುದು ಕೃಷಿಯಲ್ಲೇ-ವಿಜಯಕುಮಾರ್ ಸೊರಕೆ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಸೊರಕೆ ಮಾತನಾಡಿ, ಅಕ್ಷಯ ಕಾಲೇಜಿನ ಹೆಸರು ಪುತ್ತೂರು ಹಾಗೂ ಆಸುಪಾಸಿನಲ್ಲಿ ಶೈಕ್ಷಣಿಕ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದೆ. ಶಾಲೆ-ಕಾಲೇಜು ಆರಂಭಿಸಿ ಮುನ್ನೆಡೆಸುವುದು ಅಷ್ಟೊಂದು ಸುಲಭವಲ್ಲ ಎಂದು ನಾನು ಭಾವಿಸಿದ್ದೇನೆ. ಆದರೆ ಜಯಂತ್ ನಡುಬೈಲುರವರು ಹಿಂದಿನ ಕಷ್ಟದ ದಿನಗಳೊಂದಿಗೆ ಕೋಳಿ ಉದ್ಯಮವನ್ನು ಆರಂಭಿಸಿ ನೂರಾರು ಮಂದಿಗೆ ಉದ್ಯೋಗ ದೊರಕಿಸಿಕೊಟ್ಟು ಇದೀಗ ನನ್ನ ಆಸರೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಬೇಕು ಎನ್ನುವ ಆದಮ್ಯ ಕನಸು ಜಯಂತ್ ರವರದ್ದಾಗಿದೆ. ಬೆಂಗಳೂರಿನ ಐಟಿ ಬಿಟಿಯಲ್ಲಿ ಕೆಲಸ ಮಾಡುವವರು ಇಂದು ಕೃಷಿಯತ್ತ ಒಲವು ತೋರಿಸುವ ಮೂಲಕ ಐಟಿ ಬಿಟಿಗೆ ಗುಡ್ ಬೈ ಎನ್ನುತ್ತಿದ್ದಾರೆ. ಯಾಕೆಂದರೆ ಮುಂದೆ ಭವಿಷ್ಯ ಇರುವುದು ಕೃಷಿಯಲ್ಲೇ ಎಂದಾಗಿದೆ ಎಂದರು.

ಓರ್ವ ಯಕ್ಷಗಾನ ಕಲಾವಿದನಾಗಿ ಗುರುತಿಸಿಕೊಂಡಿದ್ದೇನೆ-ದಾಸಪ್ಪ ರೈ:
ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್ ದಾಸಪ್ಪ ರೈ ಮಾತನಾಡಿ, 1965ರಿಂದ ತಾನು ಯಕ್ಷಗಾನ ಕ್ಷೇತ್ರಕ್ಕೆ ಸೇರಿದೆ. ಕುತ್ಯಾಲದವನಾದ ನಾನು ಕಳೆದ 40 ವರ್ಷಗಳಿಂದ ಯಕ್ಷಗಾನ ಕಲಾವಿದನಾಗಿ ಗುರುತಿಸಿಕೊಂಡಿದ್ದೇನೆ. ಕಟೀಲು ಮೇಳ, ಮಂಗಳಾದೇವಿ ಮೇಳ ಹೀಗೆ ಹಲವು ಯಕ್ಷಗಾನ ಮೇಳದಲ್ಲಿ ಸೇವೆ ಮಾಡಿ ಬಳಿಕ ತನ್ನ ಸ್ವಂತ ಮೇಳದಲ್ಲಿ ಸೇವೆ ನೀಡಿದ ಅನುಭವ ನನಗಿದೆ. ನಾನು ಸುಖದಿಂದ ಬಂದವನು ಅಲ್ಲ, ಕಷ್ಟದಿಂದ ಬಂದ ಕಲಾವಿದನಾಗಿದ್ದು ಜನರ ನೆನಪಿನಲ್ಲಿ ಓರ್ವ ಕಲಾವಿದನಾಗಿ ಉಳಿದಿದ್ದೇನೆ ಎಂಬ ಖುಶಿ ಇದೆ ಎಂದರು.

ಎಲ್ಲಿ ನೆಲೆಸಿದರೂ ತಾನು ಅಕ್ಷಯ ಕಾಲೇಜಿನ ವಿದ್ಯಾರ್ಥಿ ಹೆಮ್ಮೆಯಿರಲಿ-ಕೋಟಿ ಪರವ:
ಹಿರಿಯ ದೈವ ನರ್ತಕ ಕೋಟಿ ಪರವ ಮಾತನಾಡಿ, ವಿದ್ಯಾರ್ಥಿಗಳ ಪಾಲಿಗೆ ಅಕ್ಷಯ ಪಾತ್ರೆಯಂತಿರುವ ಈ ಅಕ್ಷಯ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಮೂಲೆ ಮೂಲೆಯಲ್ಲೂ ನೆಲೆಸಿದರೂ ತಾನು ಪುತ್ತೂರಿನ ಅಕ್ಷಯ ಕಾಲೇಜಿನ ವಿದ್ಯಾರ್ಥಿ ಅನ್ನುವ ಹೆಮ್ಮೆಯನ್ನು ಪ್ರಚುರಪಡಿಸಬೇಕು. ಹಿಂದಿನ ಹಿರಿಯರು ಸೇವಿಸುತ್ತಿದ್ದ ತಿನಸುಗಳಿಗೆ ದೇಹವನ್ನು ಸದೃಢಗೊಳಿಸುವ ಪವರ್ ಇತ್ತು. ಆಟಿ ಆಮಾವಾಸ್ಯೆ ಪಾಲೆ ಮರದ ಕಷಾಯ ಶರೀರಕ್ಕೆ ಶಕ್ತಿ ನೀಡುತ್ತದೆ ಎಂದರು.

ಗೌರವ:
ಅಕ್ಷಯ ಕಾಲೇಜು ಆಡಳಿತ ಸಮಿತಿಯ ಸದಸ್ಯರಾದ ನಾರಾಯಣನ್ ಪಿ.ವಿ, ಪ್ರೊ|ಝೇವಿಯರ್ ಡಿ’ಸೋಜ, ರೋಟರಿ ಜಿಲ್ಲೆ 3181 ಇದರ 2028-29ನೇ ಸಾಲಿನ ಜಿಲ್ಲಾ ಗವರ್ನರ್ ಡಾ.ಸೂರ್ಯನಾರಾಯಣ ಕೆ, ನರಿಮೊಗರು ಶ್ರೀ ಬ್ರಹ್ಮಬೈದರ್ಕಳ ಗರಡಿಯ ವೇದನಾಥ ಸುವರ್ಣ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಉಪಾಧ್ಯಕ್ಷ ಜಿನ್ನಪ್ಪ ಪೂಜಾರಿ ಮುರ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರವಿಕುಮಾರ್ ರೈ ಕೆದಂಬಾಡಿ ಮಠ, ಕಾರ್ಯದರ್ಶಿ ಜಯಂತ್ ಬಾಯಾರ್, ಕೋಶಾಧಿಕಾರಿ ಪ್ರಕಾಶ್ ರೈ ಮನವಳಿಕೆ, ನಿವೃತ್ತ ಫಾರೆಸ್ಟ್ ಆಫೀಸರ್ ಕೆ.ಕೃಷ್ಣಪ್ಪರವರನ್ನು ಗೌರವಿಸಲಾಯಿತು.

ಬಹುಮಾನ ವಿತರಣೆ:
ಕಾಲೇಜಿನ ಲಲಿತಾ ಕಲಾ ಸಂಘ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ಆಟಿಡೊಂಜಿ ಗೌಜಿ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಆಟಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕಿ ದೀಕ್ಷಾ ರೈ ವಿಜೇತರ ಹೆಸರನ್ನು ವಾಚಿಸಿದರು.

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಅಕ್ಷಯ ಪದವಿ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಅಕ್ಷಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅಭಿಲಾಷ್ ಕ್ಷತ್ರೀಯ, ಅಕ್ಷಯ ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೂರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಕ್ಷಯ ಪದವಿ ಕಾಲೇಜು ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಸ್ವಾಗತಿಸಿ, ಉಪ ಪ್ರಾಂಶುಪಾಲ ರಕ್ಷಣ್ ಟಿ.ಆರ್ ವಂದಿಸಿದರು.

ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣನ್ ಪಿ.ವಿ, ಉಪನ್ಯಾಸಕರಾದ ಅಶೋಕ್ ರೈ, ಭರತ್ ಓತ್ಲಾಜೆ, ಗಂಧರ್ವ, ರಾಕೇಶ್, ಲಲಿತ ಕಲಾ ಸಂಘದ ಸಂಯೋಜಕಿ ರಶ್ಮಿತಾ, ಉಪನ್ಯಾಸಕಿ ಕವಿತಾರವರು ಬಚ್ಚಿರೆ ಬಜ್ಜೆಯಿ ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಅತಿಥಿಗಳ ಹಾಗೂ ಸನ್ಮಾನಿತರ ಪರಿಚಯವನ್ನು ಅಕ್ಷಯ ಕೆರಿಯರ್ ಅಕಾಡೆಮಿಯ ಉಪನ್ಯಾಸಕ ಭರತ್ ಓತ್ಲಾಜೆ, ಲಲಿತಾ ಕಲಾ ಸಂಘದ ಸಂಯೋಜಕಿ ಶ್ರೀಮತಿ ರಶ್ಮಿತಾ ಎಸ್, ಗ್ರಂಥಪಾಲಕಿ ಪ್ರಭಾವತಿ, ಹರಿಶ್ಚಂದ್ರ, ಯಕ್ಷಿತಾ, ಅಕ್ಷಯ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಪರಿಮಳಾ ರಾವ್‌ರವರು ನೀಡಿದರು. ಸಭಾ ಕಾರ್ಯಕ್ರಮವನ್ನು ಉಪನ್ಯಾಸಕಿ ಅಧೀಕ್ಷಾ, ವಿದ್ಯಾರ್ಥಿನಿ ನಿಶ್ಮಿತಾ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಪನ್ಯಾಸಕ ಹರಿಶ್ಚಂದ್ರ, ವಿದ್ಯಾರ್ಥಿನಿಯರಾದ ಪ್ರಥ್ವಿ, ಗ್ರೀಶ್ಮಾ, ದೀಕ್ಷಾರವರು ನಿರ್ವಹಿಸಿದರು.

ಎಲ್ಲವೂ ತುಳುಮಯ..
ಕೆರೆಯ ನೀರು ಮಗಿಪುನ ಮರಾಯಿ, ಮುಡಿ ಕಳಸ, ನೊಗ, ಬಾರ್ ಅಡಿಪುನ ಉಜ್ಜೆರ್, ಅಕ್ಕಿ ಸೇರು(ಚೆಂಬುದ ಬಳ್ಳ), ಅಕ್ಕಿ ಕಳಸ, ಕುರ್ವೆ, ಕುಡುಪು, ಮುಟ್ಟಳೆ, ಹೂವಿನ ಚಟ್ಟಿ, ಲಾಂಟನ್, ಕನೆ ಪಲಾಯಿ ಹೀಗೆ ಹಲವು ಹಿಂದಿನ ಪರಿಕರಗಳನ್ನು ಸಾಲಾಗಿ ಜೋಡಿಸಲಾಗಿತ್ತು ಜೊತೆಗೆ ವೇದಿಕೆಯನ್ನು ತೆಂಗಿನ ಗರಿಗಳಿಂದ ಸಿಂಗರಿಸಲಾಗಿತ್ತು. ಅಲ್ಲದೆ ಕಾರ್ಯಕ್ರಮದ ಆರಂಭದಿಂದ ಹಿಡಿದು ಸ್ವಾಗತ, ಅತಿಥಿಗಳ ಭಾಷಣ, ಕಾರ್ಯಕ್ರಮ ನಿರೂಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲವೂ ತುಳುಮಯದಿಂದ ಕೂಡಿರುವುದು ವಿಶೇಷವಾಗಿದೆ.

80ಕ್ಕೂ ಮಿಕ್ಕಿ ಆಟಿದ ತಮ್ಮನ..
ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಒಟ್ಟಾಗಿ ಸೇಮಿಗೆ ರಸಾಯನ, ರಾಗಿ ಮಣ್ಣಿ, ಪತ್ರೋಡೆ, ಪತ್ರೋಡೆ ಗಸಿ, ತೇಟ್ಲ, ಬೇವು ದಂಟ್‌ದ ಗಸಿ, ತಜಂಕ್ ಉಪ್ಪುಕರಿ, ತಜಂಕ್ ತೊಪ್ಪು, ಕಣಿಲೆ ಪೆಲತ್ತರಿ ಗಸಿ, ಕಣಿಲೆ ಉಪ್ಪುಕರಿ, ಕಣಿಲೆ ದೋಸೆ, ಮಂಜಲ್ದ ಇರೆತ್ತ ಅಡ್ಯ, ತೌತೆ ಪೆಲತ್ತರಿ ಸಾರ್, ಉಪ್ಪಡ್ ಪಚ್ಚಿಲ್, ಸಾಂಬ್ರಾಣಿ ಪೋಡಿ, ಸಾಂಬ್ರಾಣಿ ಚಟ್ನಿ, ಪೂಂಬೆ ಪೋಡಿ, ಬಾರೆ ಕಾಯಿ ಗಸಿ, ಕುಡುತ ಸಾರ್, ಪೆಲಕಾಯಿದ ಗಟ್ಟಿ, ತುರೆತ ಪಾಯಸ, ಆಟಿ ಪಾಯಸ, ಕುಕ್ಕುದ ಪಾಯಸ, ಕಡ್ಲೆ ಬಲ್ಯಾರ್ ಆಜಾಯಿಮ, ನೀರ್ ಪುಂಡಿ ಹೀಗೆ ಸುಮಾರು 80ಕ್ಕೂ ಮಿಕ್ಕಿ ಘಮಘಮಿಸಿದ ಖಾದ್ಯಗಳು ಆಟಿದ ತಮ್ಮನದಲ್ಲಿ ಗಮನ ಸೆಳೆದವು.

ಸನ್ಮಾನ..

ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ದಾಸಪ್ಪ ರೈ, ಹಿರಿಯ ದೈವ ನರ್ತಕ ಕೋಟಿ ಪರವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕರಾದ ವಿಜಯಕುಮಾರ್ ಸೊರಕೆ, ನಾಟಿ ವೈದ್ಯೆ ಕಮಲರವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here