







ಮಹಮ್ಮದ್ ಕುಕ್ಕುವಳ್ಳಿ


ಸ್ವಾತಂತ್ರ್ಯದಿನಾಚರಣೆಯ ಆಗಸ್ಟ್ 15 ಕೇವಲ ಕ್ಯಾಲೆಂಡರ್‌ನ ಒಂದು ದಿನಾಂಕವಲ್ಲ, ಅದು ಕೋಟ್ಯಂತರ ಭಾರತೀಯರ ತ್ಯಾಗ, ಸಮರ್ಪಣೆ ಮತ್ತು ಸ್ವಾಭಿಮಾನದ ಜ್ವಲಂತ ಸಂಕೇತ. ನಾವಿಂದು ಅನುಭವಿಸುತ್ತಿರುವ ಸ್ವತಂತ್ರ ಬದುಕು ಸುಲಭವಾಗಿ ಸಿಕ್ಕಿದ್ದಲ್ಲ. ಇದರ ಹಿಂದೆ ಲಕ್ಷಾಂತರ ಹೋರಾಟಗಾರರ ರಕ್ತದ ಹನಿಗಳು, ಸಾವಿರಾರು ತಾಯಂದಿರ ಕಣ್ಣೀರು ಮತ್ತು ನಿಸ್ವಾರ್ಥ ಬಲಿದಾನವಿದೆ. ಅಪ್ರತಿಮ ದೇಶಭಕ್ತರ ಕನಸಿನ ಫಲವೇ ಇಂದಿನ ಸ್ವತಂತ್ರ ಭಾರತ.



ಸ್ವಾತಂತ್ರ್ಯ ಎಂದರೆ ಕೇವಲ ವರ್ಷಕ್ಕೊಮ್ಮೆ ತ್ರಿವರ್ಣ ಧ್ವಜ ಹಾರಿಸಿ, ಸಿಹಿ ಹಂಚಿ ಸಂಭ್ರಮಿಸುವುದಷ್ಟೇ ಅಲ್ಲ. ಆ ತ್ರಿವರ್ಣದಲ್ಲಿರುವ ಕೇಸರಿ ಬಣ್ಣದ ತ್ಯಾಗ, ಬಿಳಿ ಬಣ್ಣದ ಶಾಂತಿ, ಹಸಿರು ಬಣ್ಣದ ಸಮೃದ್ಧಿ ಹಾಗೂ ಮಧ್ಯದ ಅಶೋಕ ಚಕ್ರ ಸಾರುವ ಧರ್ಮ ಮತ್ತು ನಿರಂತರ ಪ್ರಗತಿಯ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದಾಗಿದೆ. ದೇಶಭಕ್ತಿ ಕೇವಲ ಗಡಿಯಲ್ಲಿ ನಿಂತು ಕಾಯುವ ಸೈನಿಕರದ್ದು ಮಾತ್ರವಲ್ಲ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನಾಗರಿಕನಲ್ಲಿ, ನಾಡಿಗೆ ಅನ್ನ ನೀಡುವ ರೈತನ ಕಾಯಕದಲ್ಲಿ, ಸಮಾಜಕ್ಕೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಶಿಕ್ಷಕರಲ್ಲಿ, ಭ್ರಷ್ಟಾಚಾರವನ್ನು ಧಿಕ್ಕರಿಸಿ ಸತ್ಯದ ಪರ ನಿಲ್ಲುವ ಪ್ರತಿಯೊಬ್ಬ ಯುವಕನ ಮನಸ್ಸಿನಲ್ಲಿ ನಿಜವಾದ ಸ್ವಾತಂತ್ರ್ಯ ಅಡಗಿದೆ. ಜಾತಿ, ಮತ, ಪಂಥ ಮತ್ತು ಭಾಷೆಗಳ ಗಡಿಗಳನ್ನು ಮೀರಿ, ನಾವೆಲ್ಲರೂ ಮೊದಲು ಭಾರತೀಯರು' ಎಂಬ ಒಗ್ಗಟ್ಟಿನ ಭಾವನೆಯನ್ನು ಗಟ್ಟಿಗೊಳಿಸಬೇಕಿದೆ. ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ರಕ್ಷಿಸುವುದು ಮತ್ತು ಈ ದೇಶವನ್ನು ಜಗತ್ತಿನಲ್ಲೇ ಶ್ರೇಷ್ಠ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮೆಲ್ಲರ ಹೊಣೆ.ದೇಶ ನನಗೇನು ಕೊಟ್ಟಿತು ಎನ್ನುವುದಕ್ಕಿಂತ, ದೇಶಕ್ಕಾಗಿ ನಾನೇನು ಮಾಡಿದೆ’ ಎಂಬ ಪ್ರಜ್ಞೆ ನಮ್ಮದಾಗಲಿ. ಜೈ ಹಿಂದ್! ಜೈ ಭಾರತ್!










