ಇಂದು ವಿಶ್ವ ಸೊಳ್ಳೆ ದಿನ – ಜಾಗೃತಿ ಮತ್ತು ಆರೋಗ್ಯ ರಕ್ಷಣೆಯತ್ತ ಒಂದು ಹೆಜ್ಜೆ

0

ಪ್ರತಿ ವರ್ಷ ಆ: 20 ರಂದು ಜಗತ್ತಿನಾದ್ಯಂತ ‘ವಿಶ್ವ ಸೊಳ್ಳೆ ದಿನ’ವನ್ನು ಆಚರಿಸಲಾಗುತ್ತದೆ. ಅತ್ಯಂತ ಚಿಕ್ಕ ಕೀಟವಾಗಿದ್ದರೂ, ಮಾನವನ ಆರೋಗ್ಯಕ್ಕೆ ಮಾರಕವಾಗಬಲ್ಲ ರೋಗಗಳನ್ನು ಹರಡುವಲ್ಲಿ ಸೊಳ್ಳೆಗಳ ಪಾತ್ರ ದೊಡ್ಡದು. ಸೊಳ್ಳೆಗಳಿಂದ ಹರಡುವ ಅಪಾಯಕಾರಿ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

1897 ರ ಆಗಸ್ಟ್ 20 ರಂದು ಬ್ರಿಟಿಷ್ ವೈದ್ಯರಾದ ಡಾ. ರೊನಾಲ್ಡ್ ರಾಸ್
ಹೆಣ್ಣು ಅನಾಫಿಲಿಸ್ ಸೊಳ್ಳೆಗಳು ಮಾನವರಲ್ಲಿ ಮಲೇರಿಯಾ ರೋಗವನ್ನು ಹರಡುತ್ತವೆ ಎಂಬುದನ್ನು ಕಂಡುಹಿಡಿದರು. ಈ ಮಹತ್ವದ ಸಂಶೋಧನೆಯ ನೆನಪಿಗಾಗಿ ಪ್ರತಿ ವರ್ಷ ಈ ದಿನವನ್ನು ವಿಶ್ವ ಸೊಳ್ಳೆ ದಿನವಾಗಿ ಆಚರಿಸಲಾಗುತ್ತಿದೆ. ಈ ಸಂಶೋಧನೆಗಾಗಿ ಅವರಿಗೆ 1902 ರಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೊಳ್ಳೆಗಳಿಂದ ಹರಡುವ ಪ್ರಮುಖ ರೋಗಗಳು

ಮಲೇರಿಯಾ, ಅನಾಫಿಲಿಸ್ ಸೊಳ್ಳೆಯಿಂದ ಹರಡುತ್ತದೆ. ಜ್ವರ, ಚಳಿ ಮತ್ತು ತಲೆನೋವು ಇದರ ಮುಖ್ಯ ಲಕ್ಷಣಗಳು.
ಡೆಂಗ್ಯೂ, ಈಡಿಸ್ ಸೊಳ್ಳೆಗಳಿಂದ ಹರಡುವ ವೈರಲ್ ರೋಗ. ತೀವ್ರ ಜ್ವರ, ಮೈಕೈ ನೋವು ಮತ್ತು ರಕ್ತದ ಕಿರುತಟ್ಟೆಗಳ ಸಂಖ್ಯೆ ಕಡಿಮೆಯಾಗುವುದು ಇದರ ಲಕ್ಷಣ.
ಚಿಕೂನ್‌ಗುನ್ಯಾ, ಇದು ಕೂಡ ಈಡಿಸ್ ಸೊಳ್ಳೆಯಿಂದ ಹರಡುತ್ತದೆ. ತೀವ್ರವಾದ ಕೀಲು ನೋವು ಇದರ ಪ್ರಮುಖ ಲಕ್ಷಣ.
ಆನೆಕಾಲು ,ಕ್ಯೂಲೆಕ್ಸ್ ಸೊಳ್ಳೆಗಳ ಮೂಲಕ ಹರಡುವ ಈ ರೋಗವು ಕಾಲುಗಳಲ್ಲಿ ತೀವ್ರ ಊತವನ್ನು ಉಂಟುಮಾಡುತ್ತದೆ.
ಜಿಕಾ ಮತ್ತು ಹಳದಿ ಜ್ವರ ಇವೂ ಕೂಡ ಈಡಿಸ್ ತಳಿಯ ಸೊಳ್ಳೆಗಳಿಂದ ಹರಡುವ ಅಪಾಯಕಾರಿ ರೋಗಗಳು.

ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವುದು ಬಹಳ ಅಗತ್ಯವಾಗಿದೆ. ಸೊಳ್ಳೆಗಳು ಹೆಚ್ಚಾಗಿ ನಿಂತ ನೀರಿನಲ್ಲಿ ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಸೊಳ್ಳೆಗಳ ನಿಯಂತ್ರಣಕ್ಕೆ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ.

ಮನೆಯ ಸುತ್ತಮುತ್ತ, ಹಳೆಯ ಟೈರ್‌ಗಳು, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಕಪ್‌ಗಳು ಮತ್ತು ಪಾರ್ಟ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
ನೀರಿನ ಟ್ಯಾಂಕ್, ಏರ್ ಕೂಲರ್ ಮತ್ತು ಹೂವಿನ ಕುಂಡಗಳ ನೀರನ್ನು ವಾರಕ್ಕೊಮ್ಮೆಯಾದರೂ ಬದಲಾಯಿಸಿ ಶುಚಿಗೊಳಿಸಿ. ಮಲಗುವಾಗ ಸೊಳ್ಳೆಪರದೆ ಬಳಸುವುದು ಅತ್ಯಂತ ಸುರಕ್ಷಿತ. ಸಂಜೆ ಮತ್ತು ಬೆಳಗಿನ ಜಾವ ಸೊಳ್ಳೆಗಳ ಕಾಟ ಹೆಚ್ಚಿರುವುದರಿಂದ ಪೂರ್ಣ ಶರೀರವನ್ನು ಮುಚ್ಚುವ ಬಟ್ಟೆಗಳನ್ನು ಧರಿಸಿ.
ಕಿಟಕಿಗಳಿಗೆ ಜಾಲರಿಗಳನ್ನು ಅಳವಡಿಸುವುದು ಮತ್ತು ಅಗತ್ಯವಿದ್ದರೆ ಸೊಳ್ಳೆ ನಿವಾರಕ ಲೋಷನ್ ಅಥವಾ ಕಾಯಿಲ್ ಬಳಸುವುದು ಸೂಕ್ತ.

ಸೊಳ್ಳೆಗಳಿಂದ ಬರುವ ರೋಗಗಳನ್ನು ತಡೆಗಟ್ಟುವುದು ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯ.
“ಪರಿಸರದ ನೈರ್ಮಲ್ಯವೇ ಆರೋಗ್ಯಕರ ಜೀವನಕ್ಕೆ ಅಡಿಪಾಯ.” ಈ ವಿಶ್ವ ಸೊಳ್ಳೆ ದಿನದಂದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡೋಣ ಏನಂತಿರಿ ?

LEAVE A REPLY

Please enter your comment!
Please enter your name here