ದರ್ಬೆ ಘಟನೆ : ಕೊಲೆ ಯತ್ನ ಪ್ರಕರಣವನ್ನು ಪೊಲೀಸರು ಮರುಪರಿಶೀಲಿಸಿ ನಿಷ್ಪಕ್ಷಪಾತ ನಿಲುವು ತೆಗೆದುಕೊಳ್ಳುವಂತೆ ರಾಜೇಶ್ ಬನ್ನೂರು ಆಗ್ರಹ

0

ಪುತ್ತೂರು: ದರ್ಬೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಅಂಜನಾ ಪೈ ಹಾಗೂ ಅವರ ಪುತ್ರ ಸುದರ್ಶನ ಪೈ ವಿರುದ್ಧ ದಾಖಲಿಸಿರುವ ಐಪಿಸಿ 307 (ಕೊಲೆ ಯತ್ನ) ಪ್ರಕರಣವನ್ನು ಮರುಪರಿಶೀಲಿಸಿ, ಘಟನೆಗೆ ವಾಸ್ತವವಾಗಿ ಅನ್ವಯಿಸುವ ಕಾನೂನು ಸೆಕ್ಷನ್ ದಾಖಲಿಸಬೇಕು ಎಂದು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಆಗ್ರಹಿಸಿದರು.


ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಬೆ ಘಟನೆಯಲ್ಲಿ ಪೊಲೀಸ್ ಇಲಾಖೆ ಏಕಪಕ್ಷೀಯವಾಗಿ 307 ಸೆಕ್ಷನ್ ದಾಖಲಿಸಿರುವುದರಿಂದ ಗೊಂದಲ ಉಂಟಾಗಿದೆ ಎಂದು ಆರೋಪಿಸಿದರು. ಘಟನೆ ನಡೆದ ದಿನ ರಾತ್ರಿ ಸುಮಾರು 1 ಗಂಟೆಯವರೆಗೂ ತಾವು ಪೊಲೀಸ್ ಠಾಣೆಯಲ್ಲಿ ಇದ್ದು, ಸಂಬಂಧಪಟ್ಟ ಡಿಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ಗಳೊಂದಿಗೆ ಮಾತನಾಡಿದ್ದಾಗಿ ತಿಳಿಸಿದ ಅವರು, ಆರೋಪಿಗಳ ವಿರುದ್ಧ ಯಾವ ಸೆಕ್ಷನ್ ದಾಖಲಿಸಬೇಕು ಎಂಬ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಆಗ ತಿಳಿಸಲಾಗಿತ್ತು. ಬಳಿಕ 307 ಸೆಕ್ಷನ್ ದಾಖಲಿಸಲಾಗಿದೆ ಎಂದರು. ಕೇವಲ ಮಾತಿನ ಚಕಮಕಿ ಅಥವಾ ಗಲಾಟೆಯ ಹಿನ್ನೆಲೆಯಲ್ಲಿ 307 ಸೆಕ್ಷನ್ ದಾಖಲಿಸುವುದು ಸರಿಯಲ್ಲ. ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ಅನ್ವಯಿಸುವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬೇಕು. ಅದೇ ವೇಳೆ ನಿಜವಾಗಿ ಹಲ್ಲೆ ನಡೆಸಿದವರ ವಿರುದ್ಧವೂ ಸಮಾನವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.


ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸಿದವರ ವಿರುದ್ಧವೂ ಸೂಕ್ತ ಪ್ರಕರಣ ದಾಖಲಿಸಿ:
ದರ್ಬೆ ಘಟನೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವಿದ್ದು, ಅಂಜನಾ ಪೈ ಅವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕೈ ಹಾಗೂ ಕಾಲಿಗೆ ಶಸ್ತ್ರಚಿಕಿತ್ಸೆ ನಡೆದಿರುವ ಸಂದರ್ಭದಲ್ಲಿ ಇದನ್ನು ಸಣ್ಣ ಘಟನೆ ಎಂದು ಪರಿಗಣಿಸುವುದು ಸರಿಯಲ್ಲ ಎಂದು ರಾಜೇಶ್ ಬನ್ನೂರು ಹೇಳಿದರು. ಪೊಲೀಸ್ ಜೀಪ್‌ನೊಳಗೆ ನುಗ್ಗಿ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿರುವವರ ವಿರುದ್ಧವೂ ಸೂಕ್ತ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ರಾಜೇಶ್ ಬನ್ನೂರು ಆಗ್ರಹಿಸಿದ ರಾಜೇಶ್ ಬನ್ನೂರು ಅವರು ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದ ಬಗ್ಗೆ ಹಾಗೂ ಗಲಾಟೆಗೆ ಕಾರಣವಾದ ಪರಿಸ್ಥಿತಿಯ ಕುರಿತು ಸಮಗ್ರ ತನಿಖೆ ನಡೆಸಬೇಕು. ರೂ100ರ ವಿಚಾರದಿಂದ ಆರಂಭವಾದ ಘಟನೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣವೇನು, ಯಾರಿಂದ ಜನರನ್ನು ಸ್ಥಳಕ್ಕೆ ಕರೆಸಲಾಯಿತು ಎಂಬುದನ್ನೂ ಪೊಲೀಸರು ತನಿಖೆ ಮಾಡಬೇಕು ಎಂದು ಅವರು ಹೇಳಿದರು.


ವಾಮನ ಪೈ ಕುಟುಂಬದ ಹೆಸರನ್ನು ರಾಜಕೀಯ ಉದ್ದೇಶಕ್ಕೆ ಬಳಸಿದಿರಿ:
ವಾಮನ ಪೈ ಕುಟುಂಬದ ಹೆಸರನ್ನು ರಾಜಕೀಯ ಉದ್ದೇಶಕ್ಕೆ ಬಳಸಬಾರದು ಎಂದು ರಾಜೇಶ್ ಬನ್ನೂರು ಎಚ್ಚರಿಕೆ ನೀಡಿದರು. ಕುಟುಂಬದ ಗೌರವಕ್ಕೆ ಧಕ್ಕೆ ತರುವಂತಹ ರಾಜಕೀಯ ಹೇಳಿಕೆಗಳನ್ನು ಸರಿಯಲ್ಲ ಎಂದ ಅವರು 2023ರಲ್ಲಿ ಕರ್ನಾಟಕ ರಾಜ್ಯದ ಎಲೆಕ್ಷನ್ ಸಂಬಂಧ ಯಾರು ಪುತ್ತೂರಿನ ಕ್ಯಾಂಡಿಡೇಟ್ ಆಗಬೇಕು ಅಂತ ಹೇಳಿ ಕಾಂಗ್ರೆಸ್‌ನವರು ನಿಶ್ಚಯ ಮಾಡಿದಾಗ, ಪುತ್ತೂರಿನ ಹಿರಿಯ ಕಾಂಗ್ರೆಸ್ಸಿಗರು ಗುರುತಿಸಿಕೊಂಡಂತಹ ಸುಮಾರು 10 ಜನ ಹಿರಿಯ ಕಾಂಗ್ರೆಸ್ಸಿಗರು 2 ಲಕ್ಷ ರೂಪಾಯಿಯನ್ನು ಕಾಂಗ್ರೆಸ್‌ಗೆ ಕಟ್ಟಿ, ನಮಗೆ ಫಾರ್ಮನ್ನು ಕೊಡಬೇಕು ಅಂತ ಕೇಳಿ ತಗೊಂಡಿದ್ದರು. ಆದರೆ ಅವರು ಟಿಕೆಟ್ ಕೊಟ್ಟದ್ದು ಬಿಜೆಪಿಯಲ್ಲಿ ಇದ್ದವರಿಗೆ. ಆದ್ದರಿಂದ ಏನೆನೋ ಹೇಳಿಕೆ ಕೊಡುವ ಮೊದಲು ಯೋಚನೆ ಮಾಡಿ ಮಾತಾಡಬೇಕು ಎಂದು ರಾಜೇಶ್ ಬನ್ನೂರು ಹೇಳಿದರು.


ಕಾನೂನು ಬದ್ದ ಹೋರಾಟ ಮುಂದುವರಿಕೆ:
ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೂ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಬಿಜೆಪಿಯ ನಿಲುವಾಗಿದೆ. ಪೊಲೀಸ್ ಇಲಾಖೆಯ ಕ್ರಮಗಳಲ್ಲಿ ಪಕ್ಷಪಾತವಿದೆ ಎಂದು ಆರೋಪಿಸಿದ ಅವರು, ಆಡಳಿತ ವ್ಯವಸ್ಥೆ ಈ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಸಂಘಟನೆಗಳು ಕಾನೂನುಬದ್ಧವಾಗಿ ಹೋರಾಟ ಮುಂದುವರಿಸಲಿವೆ ಎಂದು ರಾಜೇಶ್ ಬನ್ನೂರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಾಧ್ಯಮ ಪ್ರಮುಖ್ ಮಹೇಶ್ ಕೇರಿ, ನಗರ ಮಾಧ್ಯಮ ಪ್ರಮುಖ್ ಸತೀಶ್ ನಾೖಕ್‌ ಪರ್ಲಡ್ಕ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್ ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಉಪಸ್ಥಿತರಿದ್ದರು.


ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಬೆಂಬಲ:
ಆ.31ರಂದು ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ನಡೆಯಲಿರುವ `ಪುತ್ತೂರು ಚಲೋ’ ಕಾರ್ಯಕ್ರಮಕ್ಕೆ ಬಿಜೆಪಿ ಪುತ್ತೂರು ಸಂಪೂರ್ಣ ಬೆಂಬಲ ನೀಡಲಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನ್ಯಾಯಕ್ಕಾಗಿ ನಡೆಯುವ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂದು ರಾಜೇಶ್ ಬನ್ನೂರು ಹೇಳಿದರು.

LEAVE A REPLY

Please enter your comment!
Please enter your name here