







ಪುತ್ತೂರು: ಮಹಿಳೆಯರು ಸ್ವಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ನಡೆಸಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಅವರ ಕುಟುಂಬದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ವಕೀಲರಾದ ಶಾಮ್ ಭಟ್ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ತಾಲೂಕಿನ ಕೆಮ್ಮಿಂಜೆ ವಲಯದ ಶಾಂತಿಗೋಡು ಕಾರ್ಯಕ್ಷೇತ್ರದ ಆನಡ್ಕದಲ್ಲಿ ಹಮ್ಮಿಕೊಳ್ಳಲಾದ 3 ತಿಂಗಳ ಹೊಲಿಗೆ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.



ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುತ್ತೂರು ತಾಲೂಕು ಕೃಷಿ ಮೇಲ್ವಿಚಾರಕರಾದ ಹರೀಶ್ ಅವರು ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿ ಮಾಡುವುದೇ ಜ್ಞಾನವಿಕಾಸ ಕಾರ್ಯಕ್ರಮದ ಮೂಲ ಆಶಯ. ಮಾತೃಶ್ರೀ ಅಮ್ಮನವರ ಈ ಆಶಯದಂತೆ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಇಂದು ಅನೇಕ ಮಹಿಳೆಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಆನಡ್ಕ ಶಾಲೆಯ ಮುಖ್ಯಗುರುಗಳಾದ ಹರಿಣಾಕ್ಷಿ ಮೇಡಂ ಮಾತನಾಡಿ, ಮಹಿಳೆಯರಿಗೆ ಸ್ವಉದ್ಯೋಗಕ್ಕೆ ಅವಕಾಶಗಳು ಕಡಿಮೆ. ಆದರೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ ಖಂಡಿತವಾಗಿಯೂ ಯಶಸ್ಸು ಗಳಿಸಬಹುದು. ಮಹಿಳೆಯರು ಅವಕಾಶವಂಚಿತರಾಗಬಾರದು ಎಂಬ ಉದ್ದೇಶದಿಂದ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಈ ತರಬೇತಿ ಆಯೋಜಿಸಲಾಗಿದ್ದು, ಇದನ್ನು ಪ್ರತಿಯೊಬ್ಬರೂ ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಚಂದ್ರಶೇಖರ್ ವಹಿಸಿದ್ದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಕೆಮ್ಮಿಂಜೆ ವಲಯಾಧ್ಯಕ್ಷರಾದ ಅಶೋಕ್ ಕುಮಾರ್, ಪುತ್ತೂರು ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಸುಧಾಕರ್ ಕುಲಾಲ್, ಕೆಮ್ಮಿಂಜೆ ವಲಯಾಧ್ಯಕ್ಷರಾದ ಸುಂದರ ಬಲ್ಯಾಯ, ಹೊಲಿಗೆ ತರಬೇತುದಾರೆ ವಸಂತಿ, ಟೈಲರಿಂಗ್ ತರಬೇತಿ ಪಡೆಯುವ ಪ್ರಶಿಕ್ಷಣಾರ್ಥಿಗಳು, ಕೇಂದ್ರ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಮೋಕ್ಷಿತ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಲಯ ಮೇಲ್ವಿಚಾರಕರಾದ ಗಿರೀಶ್ ವಂದಿಸಿದರು.










