ಆನಡ್ಕದಲ್ಲಿ 3 ತಿಂಗಳ ಹೊಲಿಗೆ ತರಬೇತಿ ಉದ್ಘಾಟನೆ

0

ಪುತ್ತೂರು: ಮಹಿಳೆಯರು ಸ್ವಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ನಡೆಸಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಅವರ ಕುಟುಂಬದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ವಕೀಲರಾದ ಶಾಮ್ ಭಟ್ ಹೇಳಿದರು.

​ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್  ಪುತ್ತೂರು ತಾಲೂಕಿನ ಕೆಮ್ಮಿಂಜೆ ವಲಯದ ಶಾಂತಿಗೋಡು ಕಾರ್ಯಕ್ಷೇತ್ರದ ಆನಡ್ಕದಲ್ಲಿ ಹಮ್ಮಿಕೊಳ್ಳಲಾದ 3 ತಿಂಗಳ ಹೊಲಿಗೆ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುತ್ತೂರು ತಾಲೂಕು ಕೃಷಿ ಮೇಲ್ವಿಚಾರಕರಾದ ಹರೀಶ್ ಅವರು ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿ ಮಾಡುವುದೇ ಜ್ಞಾನವಿಕಾಸ ಕಾರ್ಯಕ್ರಮದ ಮೂಲ ಆಶಯ. ಮಾತೃಶ್ರೀ ಅಮ್ಮನವರ ಈ ಆಶಯದಂತೆ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಇಂದು ಅನೇಕ ಮಹಿಳೆಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗಿದೆ ಎಂದು ತಿಳಿಸಿದರು.

​ಆನಡ್ಕ ಶಾಲೆಯ ಮುಖ್ಯಗುರುಗಳಾದ ಹರಿಣಾಕ್ಷಿ ಮೇಡಂ ಮಾತನಾಡಿ, ಮಹಿಳೆಯರಿಗೆ ಸ್ವಉದ್ಯೋಗಕ್ಕೆ ಅವಕಾಶಗಳು ಕಡಿಮೆ. ಆದರೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ ಖಂಡಿತವಾಗಿಯೂ ಯಶಸ್ಸು ಗಳಿಸಬಹುದು. ಮಹಿಳೆಯರು ಅವಕಾಶವಂಚಿತರಾಗಬಾರದು ಎಂಬ ಉದ್ದೇಶದಿಂದ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಈ ತರಬೇತಿ ಆಯೋಜಿಸಲಾಗಿದ್ದು, ಇದನ್ನು ಪ್ರತಿಯೊಬ್ಬರೂ ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಶುಭಹಾರೈಸಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಚಂದ್ರಶೇಖರ್ ವಹಿಸಿದ್ದರು.

​ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಕೆಮ್ಮಿಂಜೆ ವಲಯಾಧ್ಯಕ್ಷರಾದ ಅಶೋಕ್ ಕುಮಾರ್, ಪುತ್ತೂರು ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಸುಧಾಕರ್ ಕುಲಾಲ್, ಕೆಮ್ಮಿಂಜೆ ವಲಯಾಧ್ಯಕ್ಷರಾದ ಸುಂದರ ಬಲ್ಯಾಯ, ಹೊಲಿಗೆ ತರಬೇತುದಾರೆ ವಸಂತಿ, ಟೈಲರಿಂಗ್ ತರಬೇತಿ ಪಡೆಯುವ ಪ್ರಶಿಕ್ಷಣಾರ್ಥಿಗಳು, ಕೇಂದ್ರ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

​ಸೇವಾ ಪ್ರತಿನಿಧಿ ಮೋಕ್ಷಿತ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಲಯ ಮೇಲ್ವಿಚಾರಕರಾದ ಗಿರೀಶ್ ವಂದಿಸಿದರು.

LEAVE A REPLY

Please enter your comment!
Please enter your name here