






ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ಆಶ್ರಯದಲ್ಲಿ 44ನೇ ವರ್ಷದ ಶ್ರೀ ಗಣೇಶೋತ್ಸವ ಸೆ.14ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಹೊಸವಕ್ಲು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 6ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ ಅವರ ಅಧ್ಯಕ್ಷತೆಯಲ್ಲಿ ಶ್ರೀ ಗಣಪತಿ ದೇವರ ಪ್ರತಿಷ್ಠೆ ನಡೆಯಲಿದೆ. ಬೆಳಗ್ಗೆ 8ರಿಂದ ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ ಪಡುಬೆಟ್ಟು, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ನೆಲ್ಯಾಡಿ-ಕೌಕ್ರಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 8.15ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಸೀಯಾಳಾಭಿಷೇಕ, 8.30ರಿಂದ ಗಣಹೋಮ ನಡೆಯಲಿದೆ. ಬೆಳಗ್ಗೆ 8ರಿಂದ ಶ್ರೀ ಶಬರೀಶ ಕಲಾಮಂದಿರದಲ್ಲಿ ಛದ್ಮವೇಷ ಸ್ಪರ್ಧೆ, ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ.


ಧರ್ಮಜಾಗೃತಿ ಸಭೆ:
ಬೆಳಗ್ಗೆ 10.45ರಿಂದ ಧರ್ಮಜಾಗೃತಿ ಸಭೆ ನಡೆಯಲಿದ್ದು ದೈವನರ್ತಕ, ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ| ರವೀಶ್ ಪಡುಮಲೆ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್‌ಕುಮಾರ್ ಪಾಲೇರಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ| ಹೇಮಂತ್ ರೈ ಮನವಳಿಕೆಗುತ್ತು, ಶ್ರೀ ಕ್ಷೇ.ಧ.ಗ್ರಾ.ಯೋಜನೆ ದ.ಕ.ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಶ್ರೀ ಗಣಪತಿ ದೇವರಿಗೆ ಮಹಾರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸುರೇಖಾ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ ನಡೆಯಲಿದೆ. ಅಪರಾಹ್ನ 3ರಿಂದ ಶ್ರೀ ಗಣಪತಿ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.













