






ಉಪ್ಪಿನಂಗಡಿ: ಮಾನವನು ತನ್ನ ದೈನಂದಿನ ಜೀವನದಲ್ಲಿ ಪೌಷ್ಟಿಕ ಆಹಾರ ಸೇವನೆಯೊಂದಿಗೆ ಉತ್ತಮ ನಿದ್ರೆ, ನಿಯಮಿತ ವ್ಯಾಯಾಮ, ಓದು ಹಾಗೂ ಪುನರಾವರ್ತನಾ ಅಭ್ಯಾಸಗಳನ್ನು ರೂಢಿಸಿಕೊಂಡಾಗ ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನಸ್ಸು ನೆಲೆಸಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಜೆ.ಸಿ. ಡಾ. ಶಿವರಾಮ ಪನ್ಯ ಉಪ್ಪಿನಂಗಡಿ ಹೇಳಿದರು.



ಅವರು ಉಪ್ಪಿನಂಗಡಿ ಜೆಸಿಐ ಸಪ್ತಾಹದ ಅಂಗವಾಗಿ ಸರ್ವೋದಯ ಪ್ರೌಢಶಾಲೆ, ಪೆರಿಯಡ್ಕ, ಉಪ್ಪಿನಂಗಡಿಯಲ್ಲಿ ಹಮ್ಮಿಕೊಂಡಿದ್ದ ‘ಆಹಾರ, ಆರೋಗ್ಯ ಮತ್ತು ಓದು’ ಎಂಬ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡುವುದರೊಂದಿಗೆ ಪ್ರತಿದಿನ ಸಾಕಷ್ಟು ನೀರು ಕುಡಿಯುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು, ಸರಿಯಾದ ಸಮಯಕ್ಕೆ ಮಲಗುವುದು ಹಾಗೂ ಓದಿಗೆ ಸೂಕ್ತ ಸಮಯ ಮೀಸಲಿಡುವುದು ಆರೋಗ್ಯಕರ ಜೀವನದ ಪ್ರಮುಖ ಅಂಶಗಳಾಗಿವೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳ ವಿವಿಧ ಪ್ರಶ್ನೆಗಳನ್ನು ಆಲಿಸಿ, ಅವುಗಳಿಗೆ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಉತ್ತರ ನೀಡಿದರು.



ಉಪ್ಪಿನಂಗಡಿ ಜೆಸಿಐ ಅಧ್ಯಕ್ಷ ಜೆ.ಸಿ. ಅವನೀಶ ಮಾತನಾಡಿ, ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿ ಹಾಗು ವೈದ್ಯರೂ ಆಗಿರುವ ಡಾ. ಶಿವರಾಮ ಪನ್ಯ ಇವರ ಸಲಹೆಗಳನ್ನು ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಬಿ.ಟಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಆಹಾರ ಮತ್ತು ಸಮರ್ಪಕ ಆರೋಗ್ಯವಿದ್ದಾಗ ಓದಿನ ಕಡೆಗೆ ಆಸಕ್ತಿ ಹೆಚ್ಚುತ್ತದೆ. ಆದ್ದರಿಂದ ಕಾರ್ಯಾಗಾರದಲ್ಲಿ ನೀಡಿದ ಮಾಹಿತಿಯನ್ನು ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಅನುಸರಿಸಬೇಕು ಎಂದು ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಪಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪ್ಪಿನಂಗಡಿ ಜೆಸಿಐ ಅಧ್ಯಕ್ಷ ಅವನೀಶ ವಂದಿಸಿದರು. ವಿಜ್ಞಾನ ಶಿಕ್ಷಕಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಮೋಹನ್ ಹೆಚ್., ಭವ್ಯ ವೈ., ಸಂಧ್ಯಾ ವೈ.ಎಂ. ಹಾಗೂ ಡೊಂಬಯ್ಯ ಸಹಕರಿಸಿದರು.










