41ರ ಸಂಭ್ರಮದಲ್ಲಿ ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ

0

ಗಣೇಶನ ಬಾಹ್ಯರೂಪದ ಅರ್ಥವನ್ನು ಜೀವನದಲ್ಲಿ ಅಳವಡಿಸಿ- ಸ್ವಸ್ತಿಕ್ ಕನ್ಯಾಡಿ

ಪುತ್ತೂರು: ಬೆಟ್ಟಂಪಾಡಿ ಶ್ರೀ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ 41ನೇ ವರ್ಷದ ಶ್ರೀಗಣೇಶೋತ್ಸವ ಕಾರ್ಯಕ್ರಮ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.14 ಮತ್ತು 15ರಂದು ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರಗಿತು.

ಸೆ.14ರಂದು ಬೆಳಿಗ್ಗೆ ಪುರೋಹಿತರಾದ ರಾಜೇಶ್ ಭಟ್ ಪುತ್ತೂರು ನೇತೃತ್ವದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. ಬೆಟ್ಟಂಪಾಡಿ ಶ್ರೀದುರ್ಗಾ ಕ್ಲಿನಿಕ್‌ನ ಡಾ.ಶ್ರೀಕೃಷ್ಣ ಭಟ್ ಕಜೆಮೂಲೆರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿ ಬಾಲಗಂಗಾಧರ ತಿಲಕ್‌ರವರು ಆರಂಭಿಸಿದ ಗಣೇಶೊತ್ಸವ ಕಾರ್ಯಕ್ರಮ ಬೆಟ್ಟಂಪಾಡಿಯಲ್ಲಿ 40 ವರ್ಷಗಳಿಂದ ನಡೆಯುತ್ತಿದೆ. ಮುಂದೆಯೂ ಇದು ನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು.

ಬಳಿಕ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, ಗಣಪತಿ ಹೋಮ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಣೇಶ ಪ್ರಸಾದ-ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀಮಹಾಗಣಪತಿ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸೆ.15ರಂದು ಪೂರ್ವಾಹ್ನ 9ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ಸಭೆ:
ಸೆ.14ರಂದು ಬೆಳಿಗ್ಗೆ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಿತು. ಪತ್ರಕರ್ತರು ಹಾಗೂ ಯುವವಾಗ್ಮಿ ಸ್ವಸ್ತಿಕ್ ಕನ್ಯಾಡಿ ಧಾರ್ಮಿಕ ಉಪನ್ಯಾಸ ನೀಡಿ ಕಳೆದ 40 ವರ್ಷಗಳಿಂದ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಷಯ. ಯುವಕರು ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು. ಇದರಿಂದ ಸಂಘಟನೆ ಬಲವಾಗುತ್ತದೆ. ಗಣೇಶನ ಬಾಹ್ಯವಾದ ಲಕ್ಷಣಗಳು ವಿವಿಧ ಅರ್ಥವನ್ನು ನೀಡುತ್ತದೆ. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದರು. ಪ್ರಸ್ತುತ ಝೆನ್ ಜೀಗಳು ವ್ಯವಸ್ಥೆಗೆ ಸ್ಪಂದಿಸುತ್ತಿದ್ದಾರೆ. ಝೆನ್ ಝೀಗಳು ಉದ್ಯಮದಲ್ಲಿ ತೊಡಗಿಸಕೊಳ್ಳಬೇಕು. ಪ್ರಧಾನಿಯವರ ವಿಕಸಿತ ಭಾರತಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ನಮ್ಮ ಸಂಸ್ಕೃತಿಯ ರಕ್ಷಣೆಯ ಪ್ರತೀಕ: ಲಿಂಗಮ್ಮ
ನಿವೃತ್ತ ಮುಖ್ಯಶಿಕ್ಷಕಿ ಲಿಂಗಮ್ಮ ಮಾತನಾಡಿ ತಿಲಕ್‌ರವರು ಜನರನ್ನು ಒಗ್ಗೂಡಿಸಲು ಗಣೇಶೋತ್ಸವ ಆರಂಭಿಸಿದರು. ಇದು ನಮ್ಮ ಸಂಸ್ಕೃತಿಯ ರಕ್ಷಣೆಯ ಪ್ರತೀಕವಾಗಿದೆ. ಹಬ್ಬ ಆಚರಿಸಿದಾಗ ಅದರ ಮೂಲ ಉದ್ಧೇಶ ಮರೆಯಬಾರದು ಎಂದರು.

ದೇಶದ ಸಾಮರಸ್ಯ ಹಾಗೂ ಒಗ್ಗೂಡುವಿಕೆ ಇದೆ: ರವಿನಾರಾಯಣ ಭಟ್ ಎಮ್.
ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಸಂಚಾಲಕ ರವಿನಾರಾಯಣ ಭಟ್ ಎಮ್. ಮಾತನಾಡಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ದೇಶದ ಸಾಮರಸ್ಯ ಹಾಗೂ ಒಗ್ಗೂಡುವಿಕೆ ಇದೆ. ಗಣಪತಿಯ ಆರಾಧನೆಯ ಬಾಹ್ಯರೂಪದ ಅರ್ಥವನ್ನು ತಮ್ಮ ಜೀವನದಲ್ಲಿ ಅಳವಡಿಸಬೇಕು. ಸಾಮಾಜಿಕ ಸಾಮರಸ್ಯ ಇದ್ದರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿ ಕೃತಜ್ಞತೆ ತಿಳಿಸಿದರು.

ಹಿಂದೂ ಆಗಿ ನಮ್ಮ ಕಾರ್ಯ ಮಾಡಬೇಕು- ರಜತ್ ಬಲ್ಲಾಳ್
ಪುತ್ತೂರು ದಿ ವೆಬ್ ಪೀಪಲ್‌ನ ಸಾಫ್ಟ್ವೇರ್ ಇಂಜಿನಿಯರ್ ರಜತ್ ಬಲ್ಲಾಳ್ ಬೆಟ್ಟಂಪಾಡಿ ಬೀಡು ಮಾತನಾಡಿ 41ನೇ ಗಣೇಶೋತ್ಸವ ನನ್ನ ಹೃದಯದಲ್ಲಿ ಇದೆ. ನಾನು ಅತ್ಯಂತ ಕಿರಿಯ ವ್ಯಕ್ತಿ. ನಾವು ಹಿಂದೂ ಆಗಿ ನಮ್ಮ ಕಾರ್ಯ ಮಾಡಬೇಕು. ಇದು ಸನಾತನ ಧರ್ಮಕ್ಕೆ ನಮ್ಮ ಕೊಡುಗೆಯಾಗಿದೆ. ದೇಶ, ಧರ್ಮ, ಸೇವೆ ನಿರಂತರವಾಗಿರಬೇಕು. ಹುಟ್ಟು ಸಾವಿನ ಮಧ್ಯೆ ಮಾಡಿದ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಉಳಿಯುವಂತಾಗಬೇಕು ಎಂದರು.

ನಮ್ಮ ಸಂಪ್ರದಾಯ ಸಂಸ್ಕೃತಿ ಮರೆಯಬಾರದು: ವಿನೋದ್‌ರಾಜ್ ಕಜೆ
ಬೆಂಗಳೂರು ಕಲಾನಿರ್ದೇಶಕ ವಿನೋದ್‌ರಾಜ್ ಕಜೆ ಮಾತನಾಡಿ ನಾನು ಸಣ್ಣವನಿರುವಾಗ ಇಲ್ಲಿನ ಗಣೇಶೋತ್ಸವ ಕಾರ್ಯಕ್ರಮದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ನಮ್ಮ ಸಂಪ್ರದಾಯ ಸಂಸ್ಕೃತಿ ಮರೆಯಬಾರದು ಎಂದರು.

ಬ್ರಹ್ಮಕಲಶ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿ: ವಿನೋದ್ ಕುಮಾರ್ ಬಳ್ಳಾಲ್
ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಳ್ಳಾಲ್ ಬೆಟ್ಟಂಪಾಡಿ ಬೀಡು ಮಾತನಾಡಿ ಇಲ್ಲಿನ ಯುವಕರು ಗಣೇಶೋತ್ಸವದಲ್ಲಿ ಕಾರ್ಯಕರ್ತರಾಗಿದ್ದಾರೆ. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಾಗ ನಮ್ಮ ಇಷ್ಟಾರ್ಥಗಳು ಈಡೇರುತ್ತದೆ. ಎಲ್ಲರೂ ಬ್ರಹ್ಮಕಲಶ ಕಾರ್ಯಕ್ಕೆ ಸಹಕಾರ ನೀಡಿ ಎಂದರು.

ಶಿವಸೈನಿಕರಾಗಿ ದೇವರ ಕೆಲಸದಲ್ಲಿ ಭಾಗಿಯಾಗೋಣ: ವಸಂತಕೃಷ್ಣ ಕೋನಡ್ಕ
ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ ಮಾತನಾಡಿ ದೇವಾಲಯದ ಬ್ರಹ್ಮಕಲಶ ಕಾರ್ಯಕ್ಕೆ ನಾವು ಅಣಿಯಾಗುತ್ತಿದ್ದೇವೆ. ಪೂರ್ವಭಾವಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ನಮ್ಮೊಂದಿಗೆ ನೀವಿರಬೇಕು. ನಾವೆಲ್ಲರೂ ಶಿವಸೈನಿಕರಾಗಿ ದೇವರ ಕೆಲಸದಲ್ಲಿ ಭಾಗಿಯಾಗೋಣ ಎಂದರು.

ಪ್ರತಿಭೆ ಅನಾವರಣಗೊಳಿಸಲು ವೇದಿಕೆಯಾಗಿದೆ- ಮನಮೋಹನ ರೈ ಚೆಲ್ಯಡ್ಕ
ಅಧ್ಯಕ್ಷತೆ ವಹಿಸಿದ್ದ ಮನಮೋಹನ ರೈ ಚೆಲ್ಯಡ್ಕ ಮಾತನಾಡಿ ಗಣೇಶೋತ್ಸವ ಕಾರ್ಯಕ್ರಮದ ವೇದಿಕೆ ಪ್ರತಿಭೆ ಅನಾವರಣಗೊಳಿಸಲು ವೇದಿಕೆಯಾಗಿದೆ. ಬೆಟ್ಟಪಾಡಿ ದೇವಾಲಯದಲ್ಲಿ ಮುಂದಿನ ವರ್ಷ ಬ್ರಹ್ಮಕಲಶ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಪ್ರಾರ್ಥನೆ ಮಾಡಿ ಮುಂದುವರೆದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಿ ಎಂದರು.

ಒಳ್ಳೆಯ ಮನಸ್ಸು ಮತ್ತು ಆರ್ಥಿಕವಾಗಿ ತೊಡಗಿಸುತ್ತಿದ್ದಾರೆ: ಉಮೇಶ್ ಮಿತ್ತಡ್ಕ
ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಮಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಧಾರ್ಮಿಕವಾಗಿ ಯುವಕರನ್ನು ಸಂಘಟನೆ ಮಾಡಲು ಗಣೇಶೋತ್ಸವ ಆರಂಭವಾಯಿತು. ತಿಲಕ್‌ರವರು ಆರಂಭಿಸಿದ ಗಣೇಶೋತ್ಸವ ಬಳಿಕ ನಿರಂತರವಾಗಿ ಮುಂದುವರಿಯುತು. 40 ವರ್ಷಗಳ ಧ್ಯೇಯ ಉದ್ಧೇಶ ಈಗಲೂ ನಡೆಯುತ್ತಿದ್ದು ಎಲ್ಲರೂ ಒಳ್ಳೆಯ ಮನಸ್ಸು ಮತ್ತು ಆರ್ಥಿಕವಾಗಿ ತೊಡಗಿಸುತ್ತಿದ್ದಾರೆ ಎಂದು ಹೇಳಿ ಸ್ವಾಗತಿಸಿದರು.

ಬೆಟ್ಟಂಪಾಡಿ ಪ್ರಗತಿ ಆಗ್ರೋ ಮಾಲಕ ಮನೋಜ್ ಗೌಡ ಅಜ್ಜಿಕಲ್ಲು, ಉದ್ಯಮಿ ಸಂತೋಷ್ ಕಣಿಯೂರು, ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಮೊಕ್ತೇಸರ ವಿನೋದ್ ಕುಮಾರ್ ರೈ ಬೆಟ್ಟಂಪಾಡಿ ಗುತ್ತು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಕೋರ್ಮಂಡ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಕಕ್ಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಣತಿ ಬಳ್ಳಾಲ್ ಬೀಡು ಪ್ರಾರ್ಥಿಸಿ, ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಜಗದೀಶ್ ಗೌಡ ಪಾರ ವಂದಿಸಿದರು. ಮಾಜಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಗಣೇಶೋತ್ಸವ ಸಮಿತಿ ಕಾರ್ಯಕರ್ತರು, ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಸೆ.16ರಂದು ಸಂಜೆ ಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಪುತ್ತೂರು ಶಾಸಕ ಹಾಗೂ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಹಾಗೂ ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ, ಯು.ಆರ್. ಪ್ರಾಪರ್ಟಿಸ್ ಮಾಲಕ ಉಜ್ವಲ್ ಪ್ರಭು, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರ ಟ್ರಸ್ಟ್ ನ ಅರುಣ್ ಕುಮಾರ್ ಪುತ್ತಿಲ, ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಸಹಿತ ಹಲವು ಮುಖಂಡರು ಆಗಮಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ:
ಸೆ.14ರಂದು ಸಂಜೆ 6.30ರಿಂದ ವಿದುಷಿ ಗೌತಮಿ ಅನುದೀಪ್ ಮತ್ತು ಶಿಷ್ಯವೃಂದದವರಿAದ ಭರತನಾಟ್ಯ, ರಾತ್ರಿ 9ರಿಂದ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯದ, ಭಕ್ತಿಪ್ರಧಾನ, ಹಾಸ್ಯ, ಸಾಮಾಜಿಕ ತುಳುನಾಟಕ “ನಂಬಿಕೆದಾಯೆ” ನಡೆಯಿತು.

ವೈಭವದ ಶೋಭಾಯಾತ್ರೆ ಸೆ.15ರಂದು ಸಂಜೆ ಶ್ರೀಗಣೇಶ ದೇವರ ವೈಭವದ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಮಿತ್ತಡ್ಕ ಕೇಸರಿ ಮಿತ್ರವೃಂದದ ಮಕ್ಕಳ ಕುಣಿತ ಭಜನಾ ತಂಡದಿಂದ ಭಜನೆ, ರೆಂಜ ಮಣಿಕಂಠ ಚೆಂಡೆ ಮೇಳದಿಂದ ಸಿಂಗಾರಿ ಮೇಳ, ರೆಂಜ ಟೈಗರ್ಸ್ ಮತ್ತು ವಿಶ್ವಹಿಂದೂ ಪರಿಷತ್ ಘಟಕ ಬೆಟ್ಟಂಪಾಡಿ ಇವರಿಂದ ಆಕರ್ಷಕ ಟ್ಯಾಬ್ಲೋ ಪ್ರದರ್ಶನ, ಗೊಂಬೆ ಕುಣಿತ, ಕೇರಳದ ನೃತ್ಯ ತಂಡದ ಪ್ರದರ್ಶನ ನಡೆಯಿತು. ರಾತ್ರಿ ಚೆಲ್ಯಡ್ಕದ ಪುಣ್ಯನದಿಯಲ್ಲಿ ಶ್ರೀಗಣೇಶ ಸ್ವಾಮಿಯ ವಿಗ್ರಹದ ಜಲಸ್ತಂಭನ ಮಹೋತ್ಸವ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಇರ್ದೆ ಪಿಜೆ ಪೆಟ್ರೋಲಿಯಂ ಮಾಲಕರಾದ ಕೃಷ್ಣನಾಯ್ಕರವರ ಪ್ರಾಯೋಜಕತ್ವದಲ್ಲಿ ಉಪಹಾರ ಸೇವೆ ನಡೆಯಿತು.

ಗಣೇಶೋತ್ಸವ ಸಮಿತಿಯಿಂದ ರೂ.1,11,111 ದೇಣಿಗೆ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ 2027ರ ಫೆಬ್ರವರಿಯಲ್ಲಿ ನಡೆಯಲಿದ್ದು ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ರೂ.1,11,111 ದೇಣಿಗೆಯ ಚೆಕ್‌ನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here