ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

334.58 ಕೋ.ರೂ. ವ್ಯವಹಾರ, 1,43,38,390 ರೂ. ನಿವ್ವಳ ಲಾಭ, ಶೇ.10 ಡಿವಿಡೆಂಡ್

ಪುತ್ತೂರು: ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ಮಹಾಸಭೆ ಸೆ.19ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಬಿ. ಪದ್ಮನಾಭ ಬೋರ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ 1935ರಲ್ಲಿ ಸ್ಥಾಪನೆಯಾದ ಸಂಘವು ಪ್ರಸ್ತುತ 91ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. 9 ವರ್ಷ ಕಳೆದು ಶತಮಾನತ್ಸವ ಆಚರಿಸಲಿದೆ. ಪಾಣಾಜೆ ಮತ್ತು ನಿಡ್ಪಳ್ಳಿ ಗ್ರಾಮಗಳನ್ನು ಹೊಂದಿರುವ ಸಂಘವು 3250 “ಎ” ತರಗತಿ ಸದಸ್ಯರನ್ನು ಹೊಂದಿದ್ದು ವರ್ಷಾಂತ್ಯಕ್ಕೆ 3,91,84,836 ರೂ. ಪಾಲು ಬಂಡವಾಳ ಮತ್ತು 45,21,05,569.21 ರೂ. ಠೇವಣಿ ಹೊಂದಿರುತ್ತದೆ. ವರ್ಷಾಂತ್ಯಕ್ಕೆ 3,55,66,917.68 ರೂ. ನಿಧಿಗಳಿದ್ದು 3,03,43,944 ರೂ. ಸುಸ್ತಿ ಸಾಲ ಇರುತ್ತದೆ. ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ 17,33,17,101.78 ರೂ. ಹೂಡಿಕೆ ಮಾಡಲಾಗಿದೆ. ವರದಿ ಸಾಲಿನಲ್ಲಿ ರೂ. 8,92,355.58 ವ್ಯಾಪಾರ ಲಾಭ ಮತ್ತು ರೂ. 1,43,38,390 ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 10 ಡಿವಿಡೆಂಡ್ ನೀಡಲಾಗುವುದು. ಪತ್ತು ಮತ್ತು ಪತ್ತೇತರ ವ್ಯವಹಾರವನ್ನು ನಡೆಸಿ ಸದಸ್ಯರಿಗೆ ಗರಿಷ್ಠ ಸೇವೆ ನೀಡುತ್ತಿದೆ ಎಂದರು.


ಹಲವು ವರ್ಷದ ಹಿಂದೆ ಸಂಘವು ಒಂದೂವರೆ ಕೋಟಿ ರೂ. ನಷ್ಟ ಅನುಭವಿಸಿತು. ದೈವ ದೇವರ ಪವಾಡ ಎಂಬAತೆ ಸಂಸ್ಥೆ ಮತ್ತೆ ಅಭಿವೃದ್ಧಿ ಪಥದತ್ತ ಸಾಗಿದೆ. ಸಂಘವು ಇಷ್ಟೊಂದು ಲಾಭ ಗಳಿಸಲು ಸದಸ್ಯರೇ ಕಾರಣ. ಸಾಲ ವಸೂಲಾತಿಗೆ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಸಿಬ್ಬಂದಿಗಳು ಕೂಡ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯಕ್ಷಮತೆ ಹೆಚ್ಚಿಸಲು ಅವರಿಗೆ ತರಬೇತಿ ನೀಡಿದ್ದೇವೆ. ನಿರ್ದೇಶಕರು ಕೂಡ ತಮ್ಮ ಅಮೂಲ್ಯ ಸಮಯವನ್ನು ಸಂಘಕ್ಕೆ ನೀಡಿದ್ದಾರೆ. ಕೃಷಿ ಸಾಲವನ್ನು ನಿಗದಿತ ದಿನಾಂಕಕ್ಕೆ ಮರು ಪಾವತಿ ಮಾಡಬೇಕು. ಡ್ಯೂ ಡೇಟ್ ಒಳಗಡೆ ಪಾವತಿ ಮಾಡಿ ಎಂದು ಹೇಳಿದ ಅಧ್ಯಕ್ಷರು ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸಹಕರಿಸಿದ ಎಲ್ಲಾ ಸದಸ್ಯ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯ ನಿರ್ಣಯಗಳ ವಿವರ ನೀಡಿದರು.

ಸದಸ್ಯರ ಪ್ರಶ್ನೆಗಳು :
ಸದಸ್ಯರ ಸಾಲದ ಮರು ಪಾವತಿಯಲ್ಲಿ ಸುಸ್ತಿ ಮೊಬಲಗು ಹೆಚ್ಚಾಗಿದೆ. ಸಾಲ ಪಡೆಯುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಸದಸ್ಯ ಕೃಷ್ಣಪ್ರಕಾಶ್‌ರವರು ಹೇಳಿದರು. ಅಧ್ಯಕ್ಷರು ಮಾತನಾಡಿ ಸಾಲ ಬಾಕಿ ಇರುವುದರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಿ ಇಲ್ಲ ವಾಹನ ಸಾಲದಲ್ಲಿ ರಿಕವರಿ ಮಾಡುವಾಗ ವಿಳಂಬ ಮಾಡಬಾರದು ಎಂದು ಕೃಷ್ಣಪ್ರಕಾಶ್ ಹೇಳಿದರು. ನೋಟೀಸ್ ಮಾಡಿ ವಾಹನ ಏಲಂ ಮಾಡಿ ಸಾಲ ಮರುಪಾವತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದರು. ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಮಾತನಾಡಿ ನಮಗೆ ಸಾಮಾಜಿಕ ಕಟ್ಟುಪಾಡು, ಮಾನವೀಯತೆ ಇರುತ್ತದೆ. ಆದುದರಿಂದ ನಮ್ಮದೇ ಊರಿನಲ್ಲಿ ಏಕಾಏಕಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಮುಂದಿನ 4-5 ತಿಂಗಳಿನಲ್ಲಿ ರಿಕವರಿ ಬಗ್ಗೆ ಕಠಿಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಸಂಘದಲ್ಲಿ “ಎ” ಸದಸ್ಯರು ಹೆಚ್ಚಾಗಿ ಸಂಘ ಪ್ರಗತಿಯಲ್ಲಿದೆ ಎಂದು ಹೇಳಿದ್ದಿರಿ ಆದರೆ ಸಾಲ ಪಡೆಯುವವರು ಕಡಿಮೆ ಆಗಿದ್ದಾರೆ ಇದರಿಂದ ಪ್ರಗತಿ ಆಗಿದೆ ಎಂದು ಹೇಗೆ ಹೇಳಲು ಸಾಧ್ಯ ಎಂದು ಸದಸ್ಯ ವೆಂಕಟರಮಣ ಬೋರ್ಕರ್ ಹೇಳಿದರು. ಅರ್ಹತೆಯುಳ್ಳವರಿಗೆ ಕೃಷಿ ಸಾಲ ನೀಡಿದ್ದೇವೆ ಎಂದು ಅಧ್ಯಕ್ಷರು ಹೇಳಿದರು.

ಕ್ಯಾಂಪ್ಕೋಗೆ ಅಡಿಕೆ ಹಾಕುವಂತೆ ಅಧ್ಯಕ್ಷರು ಹೇಳಿದರು. ಇದಕ್ಕೆ ಸದಸ್ಯ ಆಲಿ ಕುಂಞಯವರು ಮಾತನಾಡಿ ಕ್ಯಾಂಪ್ಕೋದಲ್ಲಿ ಅಡಿಕೆ ಖರೀದಿ ಮಾಡುವವವರು ಸರಿಯಾದ ದರ ನೀಡುವುದಿಲ್ಲ ಎಂದು ಹೇಳಿದರು. ಕ್ಯಾಂಪ್ಕೋದವರು ನಮ್ಮ ಅಡಿಕೆಯ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಅದೇ ಅಡಿಕೆಯನ್ನು ಬೇರೆ ಕಡೆಗೆ ಕೊಂಡು ಹೋದಾಗ ಅಲ್ಲಿ ಗುಣಮಟ್ಟ ಸರಿ ಇರುತ್ತದೆ ಎಂದು ಕೃಪಾ ಶಂಕರ್ ಹೇಳಿದರು. ಕ್ಯಾಂಪ್ಕೋದಲ್ಲಿ ಕಾಲುಮೆಣಸು ದರ ಹೊರಗಿನ ಮಾರುಕಟ್ಟೆ ಗಿಂತ 20 ರೂ. ನಷ್ಟು ವ್ಯತ್ಯಾಸ ಇದೆ ಎಂದು ಸದಸ್ಯರು ಆರೋಪಿಸಿದರು. ದರ ಕಡಿಮೆ ಹಾಕಿದರೆ ಅಲ್ಲಿಗೆ ಯಾರು ಕೊಡುತ್ತಾರೆ? ಅವರು ರೈತರಿಗೆ ನಗು ಮೊಗದ ಸೇವೆ ಕೊಡಬೇಕು. ಈಗ ಖಾಸಗಿ ಮಾರುಕಟ್ಟೆ ಇದೆ. ಹಾಗಾಗಿ ರೈತರಿಗೆ ಉತ್ತಮ ದರ ಕೊಡಬೇಕು ಎಂದು ಸದಸ್ಯ ಕೃಷ್ಣ ಪ್ರಕಾಶ್‌ರವರು ಹೇಳಿದರು. ಕ್ಯಾಂಪ್ಕೋದ ಸಮಸ್ಯೆಗಳ ಬಗ್ಗೆ ನಿರ್ಣಯ ಮಾಡಿ ಕ್ಯಾಂಪ್ಕೋಗೆ ಕಳುಹಿಸೋಣ ಎಂದು ಅಧ್ಯಕ್ಷರು ಹೇಳಿದರು.
ಬೆಳೆ ವಿಮೆಯ ಶೇಕಡವಾರು ಕೊಡುವುದು ಕಡಿಮೆ ಆಗಿದೆ. ಎಂದು ಸದಸ್ಯರು ಆರೋಪಿಸಿದರು. ಈ ಬಾರಿ ಡಿವಿಡೆಂಡ್ ಒಂದು ಶೇ. ಹೆಚ್ಚು ಕೊಡಬೇಕು. 11 ಡಿವಿಡೆಂಡ್ ಕೊಡಿ ಎಂದು ಕೃಷ್ಣಪ್ರಕಾಶ್ ಹೇಳಿದರು. ನಮ್ಮಲ್ಲಿ ಮೀಸಲು ನಿಧಿ 2 ಕೋಟಿಯಷ್ಟು ಮಾತ್ರ ಇದೆ. ನಮ್ಮ ಮೀಸಲು ನಿಧಿ 6 ಕೋಟಿಯಾಗಲಿ ಬಳಿಕ ಡಿವಿಡೆಂಡ್ ಹೆಚ್ಚಳ ಮಾಡೋಣ ಎಂದು ನಿರ್ದೇಶಕ ನಾರಾಯಣ ಪ್ರಕಾಶ್ ಹೇಳಿದರು.
ಪವರ್ ಕಟ್ ಸಮಸ್ಯೆ ಇದೆ. ಇದರಿಂದ ಕೃಷಿಕರಿಗೆ ತೊಂದರೆ ಆಗಿದೆ. ಆಫ್ರಿಕನ್ ಬಸವನ ಹುಳುವಿನಿಂದ ತೋಟಕ್ಕೆ ಸಮಸ್ಯೆ ಆಗಿದೆ ಎಂದು ಸದಸ್ಯ ರಾಮಯ್ಯ ರೈ ಹೇಳಿದರು. ನಿರ್ಣಯ ಮಾಡಿ ಇಲಾಖೆಗೆ ಕಳುಹಿಸೋಣ ಎಂದು ಅಧ್ಯಕ್ಷರು ಹೇಳಿದರು.

ಸಹಾಯಧನ ಹಸ್ತಾಂತರ:
ಅನಾರೋಗ್ಯದಲ್ಲಿರುವ ಸಂಘದ ಸದಸ್ಯರುಗಳಲ್ಲಿ 4 ಕುಟುಂಬವನ್ನು ಗುರುತಿಸಿದ್ದು ಅವರಿಗೆ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು. ಸದಸ್ಯರುಗಳಾದ ರಾಮ ನಾಯ್ಕ ಪಾಣಾಜೆ, ವೇದಾವತಿ ದೇವಸ್ಯ, ಲಾರೆನ್ಸ್ ಡಿಸೋಜ ನಿಡ್ಪಳ್ಳಿ, ಪ್ರಮೋದ್ ನಿಡ್ಪಳ್ಳಿರವರಿಗೆ ಸಹಾಯಧನ ಹಸ್ತಾಂತರಿಸಲಾಯಿತು.

ಸದಸ್ಯರು ವಿವಿಧ ಸಲಹೆ ಸೂಚನೆ ನೀಡಿದರು. ನಿರ್ದೇಶಕರಾದ ಸದಾಶಿವ ರೈ ಎಸ್. ಸೂರಂಬೈಲು, ರಾಧಾಕೃಷ್ಣ ರೈ ಪಟ್ಟೆ, ಕುಮಾರ ನರಸಿಂಹ ಯು. ಬುಳೆನಡ್ಕ, ಹರೀಶ್ ಪೂಜಾರಿ ನೆಲ್ಲಿತ್ತಿಮಾರು, ಪುಷ್ಪಾವತಿ ಅಪಿನಿಮೂಲೆ, ಚಂದ್ರಕಲಾ ಕೊಪ್ಪಳ, ದಯಾನಂದ ಟಿ. ತೂಂಬಡ್ಕ, ಸುಧಾಕರ ಕೆ. ಬ್ರಹ್ಮರಗುಂಡ, ಎಸ್‌ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ವಸಂತ ಎಸ್., ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಿಬ್ಬಂದಿಗಳಾದ ತೃಪ್ತಿ ಬಿ. ಮತ್ತು ಅನುರಾಧ ಕೆ. ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ಕೆ. ಸ್ವಾಗತಿಸಿದರು. ಸಿಬ್ಬಂದಿ ತೃಪ್ತಿ ವಂದಿಸಿದರು. ಲೆಕ್ಕಿಗ ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಎಂ.ಕೃಷ್ಣಕುಮಾರ್, ಚಿತ್ರ ಕುಮಾರ್, ಅನುರಾಧ ಕೆ., ಜಯಶ್ರೀ, ಎ.ರಮೇಶ ನಾಯ್ಕ, ಅವಿನಾಶ್ ಸಿ.ಎಚ್., ಹರೀಶ ಜಿ. ಸಹಕರಿಸಿದರು. ಮಾಜಿ ನಿರ್ದೇಶಕರು, ಸದಸ್ಯರು, ಸಹಕಾರಿ ಬಂಧುಗಳು ಉಪಸ್ಥಿತರಿದ್ದರು. ಅಪರಾಹ್ನ ಶ್ರೀದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ಪಾಣಾಜೆ ಪ್ರಾಯೋಜಕತ್ವದಲ್ಲಿ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು.

ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟುಗೆ ಸನ್ಮಾನ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಸಂಘದ ವತಿಯಿಂದ ಹಾರ, ಪೇಟ, ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಿ. ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಸುಧಾಕರ್ ರೈ ಗಿಳಿಯಾಲು, ನಿರ್ದೇಶಕರಾದ ನಾರಾಯಣ ಪ್ರಕಾಶ್ ಮತ್ತು ನಾಗೇಶ್ ಗೌಡ ಪುಳಿತ್ತಡಿ ಸನ್ಮಾನಿತರ ಬಗ್ಗೆ ಮಾತನಾಡಿದರು. ಲೆಕ್ಕಿಗ ಸಂದೇಶ್ ಬಿ. ಸನ್ಮಾನ ಪತ್ರ ವಾಚಿಸಿದರು.

ಚಿತ್ರ: ಎಕೆ ಫೊಟೊಗ್ರಫಿ


ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿ ಕುಮಾರ್ ರೈ ಬಾಲ್ಯೊಟ್ಟುರವರು 1999ರಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕನಾಗಿ ಸಹಕಾರಿ ರಂಗಕ್ಕೆ ಬಂದೆ. ಬೆಟ್ಟಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷನಾಗಿ ಈ ಎಲ್ಲಾ ಅವಕಾಶ ಬಂತು. ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಸಂಘ ಲಾಭದ ಕಡೆಗೆ ಬಂದಿದ್ದು ರಾಜ್ಯಮಟ್ಟದಲ್ಲೇ ಪ್ರಥಮವಾಗಿ ಲಾಭ ಬಂದ ಸಂಸ್ಥೆಯಾಗಿದೆ. ಸಹಕಾರ ಮಹಾಮಂಡಳ ಚುನಾವಣೆಯಲ್ಲಿ ನನಗೆ 18 ಮತಗಳು ಬಂದು ನಾನು ಜಯಗಳಿಸಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದೇನೆ. ಸಹಕಾರಿ ರಂಗಕ್ಕೆ ಸಮಸ್ಯೆಯಾದಾಗ ನಿಮ್ಮೊಂದಿಗೆ ಸದಾ ನಾನು ಇರುತ್ತೇನೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ನಿವೃತ ಸಿಬ್ಬಂದಿ ಸುಧಾಕರ್ ಭಟ್ ಬಂಟಾಜೆಗೆ ಸನ್ಮಾನ
26 ವರ್ಷಗಳ ಕಾಲ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಧಾಕರ್ ಭಟ್ ಬಂಟಾಜೆರವರನ್ನು ಸಂಘದ ವತಿಯಿಂದ ಚಿನ್ನದ ಉಂಗುರ, ಹಾರ, ಶಾಲು, ಪೇಟ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಧ್ಯಕ್ಷ ಪದ್ಮನಾಭ ಬೋರ್ಕರ್, ನಿರ್ದೇಶಕ ನಾರಾಯಣ ಪ್ರಕಾಶ್, ಸದಸ್ಯ ವೆಂಕಟ್ರಮಣ ಬೋರ್ಕರ್ ಬ್ರಹ್ಮರಗುಂಡ, ಮಾಜಿ ನಿರ್ದೇಶಕ ರಾಧಾಕೃಷ್ಣ ರೈ ಸೇರ್ತಾಜೆ, ಸದಸ್ಯ ಸತ್ಯನಾರಾಯಣ ರೈ ನುಳಿಯಾಲುರವರು, ಸನ್ಮಾನಿತರ ಬಗ್ಗೆ ಮಾತನಾಡಿದರು. ಲೆಕ್ಕಿಗ ಸಂದೇಶ್ ಬಿ. ಸನ್ಮಾನ ಪತ್ರ ವಾಚಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಕರ್ ಭಟ್ ಬಂಟಾಜೆರವರು, ನಿವೃತ್ತಿಗೊಂಡರೂ ಮುಂದೆ ಅಳಿಲು ಸೇವೆ ಮಾಡಲು ಸಿದ್ದನಿದ್ದೇನೆ. ನಾನು ಕಲಿಯಲು ಇನ್ನೂ ತುಂಬಾ ಇದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here