









ಸುಳ್ಯ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದೇವರಾಜ ಅರಸು ವಸತಿ ನಿಲಯದ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಕಾಂತಮಂಗಲದ ಮನಮೋಹನ ಪುತ್ತಿಲ ಅವರ ಗದ್ದೆಯಲ್ಲಿ ಆಯೋಜಿಸಲಾಯಿತು.



ಕ್ರೀಡಾಕೂಟವನ್ನು ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಅಧ್ಯಕ್ಷ ಕೆ.ಎಂ. ಮುಸ್ತಫ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತಂತ್ರಜ್ಞಾನ ಯುಗದಲ್ಲಿ ಸಾಂಪ್ರದಾಯಿಕ ಆಚರಣೆಗಳು ಮರೆಯಾಗುತ್ತಿವೆ. ಮುಂದಿನ ಪೀಳಿಗೆಗೆ ಸಂಪ್ರದಾಯಗಳನ್ನು ಹಸ್ತಾಂತರಿಸಲು ಇಂತಹ ಕ್ರೀಡೆಗಳು ಸಹಕಾರಿ ಎಂದು ಹೇಳಿದರು.

ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ಮನಮೋಹನ ಪುತ್ತಿಲ ತೆಂಗಿನಕಾಯಿ ಒಡೆದು ಕ್ರೀಡಾಂಗಣವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಮಂಜುಳಾ ವಹಿಸಿದ್ದರು. ವೇದಿಕೆಯಲ್ಲಿ ಕ್ರೀಡಾಕೂಟಕ್ಕೆ ಜೆರ್ಸಿ ಮತ್ತು ಸ್ಪೋರ್ಟ್ಸ್ ಕ್ಯಾಪ್ ಪ್ರಾಯೋಜಿಸಿದ ಆದಿ ವೆಜಿಟೇಬಲ್ ಮಾಲೀಕ ಮಣಿಕಂಠ ಉಪಸ್ಥಿತರಿದ್ದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಗೀತಾ ಸ್ವಾಗತಿಸಿದರು, ನಿಲಯ ಮೇಲ್ವಿಚಾರಕಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ತಾಲೂಕಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ 11 ವಿದ್ಯಾರ್ಥಿ ನಿಲಯಗಳ ಸುಮಾರು 700 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.










