







ನೆಲ್ಯಾಡಿ: ಕೇಂದ್ರ ಸರಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಗೆ ಕೌಕ್ರಾಡಿ ಗ್ರಾ.ಪಂ.ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಒಕ್ಕೊರಳ ವಿರೋಧ ವ್ಯಕ್ತವಾಗಿದೆ.


ಸಭೆ ಸೆ.24ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ.ಆಡಳಿತಾಧಿಕಾರಿಯಾಗಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಬೇಕಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನವಸತಿ ಪ್ರದೇಶವೂ ಪರಿಸರ ಸೂಕ್ಷ್ಮ ವಲಯದಲ್ಲಿ ಸೇರಿಕೊಂಡಿದೆ. ಆದ್ದರಿಂದ ಈ ವರದಿ ಜಾರಿಗೊಳಿಸುವ ಮೊದಲು ಜನವಸತಿ ಹಾಗೂ ಅರಣ್ಯ ಪ್ರದೇಶದ ಮರು ಸರ್ವೆ ನಡೆಸಬೇಕೆಂದು ಆಗ್ರಹಿಸಿದ ಗ್ರಾಮಸ್ಥರು 7ನೇ ಕರಡು ಅಧಿಸೂಚನೆಗೆ ಒಕ್ಕೊರಳ ವಿರೋಧ ವ್ಯಕ್ತಪಡಿಸಿದರು. ಬಳಿಕ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ಮಾತನಾಡಿದ ಪಿಡಿಒ ಮೋಹನ್ಕುಮಾರ್ ಅವರು, ಸಭೆಯಲ್ಲಿ ಬಂದಿರುವ ಅಭಿಪ್ರಾಯವನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಸಾರ್ವಜನಿಕರಿಗೆ ಈ ಮೈಲ್ ಮೂಲಕವೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಉದಯಕುಮಾರ್ ದೋಂತಿಲ, ಮಾಜಿ ಸದಸ್ಯ ಕೆ.ಎಂ.ಹನೀಫ್, ಜಾನ್ಸನ್ ಇಚ್ಲಂಪಾಡಿ, ವರ್ಗೀಸ್ ಅಬ್ರಹಾಂ, ಜಾನ್ಸನ್ ಕಾಪಿನಬಾಗಿಲು, ಜಿ.ತೋಮಸ್, ಇಸ್ಮಾಯಿಲ್, ಆಂಟನಿ ಪಿ.ಎಸ್.ಮತ್ತಿತರರು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.




ಮಂಗಗಳ ಹಾವಳಿಗೂ ಪರಿಹಾರ ಕೊಡಿ;
ಕಾಡಾನೆ ದಾಳಿಯಿಂದ ಆದ ಕೃಷಿ ಹಾನಿಗೆ ಅರಣ್ಯ ಇಲಾಖೆ ಪರಿಹಾರ ನೀಡುತ್ತಿದೆ. ಮಂಗಗಳೂ ಕೃಷಿ ಹಾನಿಗೊಳಿಸುತ್ತಿವೆ. ಇದಕ್ಕೂ ಪರಿಹಾರ ನೀಡಬೇಕೆಂದು ಜಾನ್ಸನ್ ಇಚ್ಲಂಪಾಡಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ್ಪಿನಂಗಡಿ ವಲಯ ಉಪವಲಯ ಅರಣ್ಯಾಧಿಕಾರಿ ವಿನಯಕುಮಾರ್ ಅವರು, ಮಂಗಗಳಿಂದ ಕೃಷಿ ಹಾನಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡುತ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಕೋವಿ ನವೀಕರಣಕ್ಕೂ ಅರಣ್ಯ ಇಲಾಖೆ ಎನ್ಒಸಿ ಕೊಡುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ವಿನಯಕುಮಾರ್ ಅವರು, ಕೋವಿ ಪರವಾನಿಗೆ ಪೊಲೀಸ್ ಇಲಾಖೆ ಕೊಡುವಂತದ್ದು, ಅರಣ್ಯ ಇಲಾಖೆಯಿಂದ ರೈತರು ಕೃಷಿ ಹಾನಿಗೆ ಪರಿಹಾರ ಪಡೆದುಕೊಂಡಿರುವ ಬಗ್ಗೆ ದೃಢಪತ್ರ ನೀಡಲಾಗುತ್ತಿತ್ತು. ಈಗ ದೃಢಪತ್ರ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪೆರಿಯಶಾಂತಿಯಲ್ಲಿರುವ ಅಪಾಯಕಾರಿ ಮರಗಳ ತೆರವು ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು.
ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಸುರೇಶ್ ಅವರು ಮಾತನಾಡಿ, ಸಭೆಯಲ್ಲಿ ಗ್ರಾಮಸ್ಥರಿಂದ ಬಂದಿರುವ ಅಭಿಪ್ರಾಯಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು, ಗ್ರಾಮಸ್ಥರು ಈ ಮೈಲ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು ಎಂದು ಹೇಳಿದರು. ಉಪ್ಪಿನಂಗಡಿ ವಲಯ ಉಪವಲಯ ಅರಣ್ಯಾಧಿಕಾರಿ ವಿನಯಕುಮಾರ್, ಪಂಜ ವಲಯ ಉಪವಲಯ ಅರಣ್ಯಾಧಿಕಾರಿ ಕೆ.ಸುಬ್ರಹ್ಮಣ್ಯ, ಗಸ್ತು ಅರಣ್ಯ ಪಾಲಕ ಸುಶಾಂತ್, ಗ್ರಾಮ ಆಡಳಿತಾಧಿಕಾರಿ ಸಂತೋಷ್ ವಿ.ಎಂ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮೋಹನ್ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ದೇವಿಕಾ ವಂದಿಸಿದರು. ಸಿಬ್ಬಂದಿ ಪುರಂದರ ಅವರು ಕರಡು ಅಧಿಸೂಚನೆ ವಾಚಿಸಿದರು.










