







ನಿಡ್ಪಳ್ಳಿ; ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ತು ಮತ್ತು ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಸ್ಪಂದನ ಕಾರ್ಯಕ್ರಮ ಸೆ.24 ರಂದು ನಡೆಯಿತು.


ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನಿವೃತ್ತ ಶಿಕ್ಷಕ ಮಂಜುಳಗಿರಿ ವೆಂಕಟ್ರಮಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪರಸ್ಪರ ಸಹಕಾರ ಮನೋಭಾವದಿಂದ ತಾವು ಬೆಳೆಯುವುದರ ಜೊತೆಗೆ ತಮ್ಮ ಸಹವರ್ತಿಗಳನ್ನೂ ಬೆಳೆಸಬೇಕು. ಇತರರ ಜ್ಞಾನ ಮತ್ತು ತಿಳುವಳಿಕೆಯನ್ನು ನಮ್ಮ ತಿಳುವಳಿಕೆಯೊಂದಿಗೆ ಸಂಯೋಜಿಸಿಕೊಂಡು ಮುನ್ನಡೆಯುವ ಮೂಲಕ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.



ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪದ್ಮನಾಭ ಕೆ. ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ರೂಪಿಸಿಕೊಳ್ಳಲು ಹಾಗೂ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ ಈ ಕಾಲೇಜಿನ ಬಗ್ಗೆ ವಿದ್ಯಾರ್ಥಿಗಳು ಹೆಮ್ಮೆ ಪಡಬೇಕು ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿಯನ್ನು ಹೊಂದಿ, ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮನಸ್ಸನ್ನು ಸ್ಪರ್ಧಾತ್ಮಕವಾಗಿ ತೆರೆದುಕೊಳ್ಳುವ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಂಗಾಧರ ಸಿ. ಎಚ್. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದಾಮೋದರ ಕಣಜಾಲು ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆಯಬೇಕು. ವಿದ್ಯಾರ್ಥಿ ಜೀವನವು ನಾಯಕತ್ವ, ಜವಾಬ್ದಾರಿ ಮತ್ತು ಸಾಮಾಜಿಕ ಬದ್ಧತೆಯನ್ನು ರೂಢಿಸಿಕೊಳ್ಳುವ ಮಹತ್ವದ ಹಂತವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಕೆ., ಐಕ್ಯೂಎಸಿ ಸಂಚಾಲಕರಾದ ಪ್ರೊ. ರಾಮಚಂದ್ರ ಕೆ., ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ ಡಿ, ಎನ್ಎಸ್ಎಸ್ ಯೋಜನಾಧಿಕಾರಿ ಪ್ರೊ. ಉದಯಶಂಕರ ಎಚ್. ಹಾಗೂ ಯುವ ರೆಡ್ಕ್ರಾಸ್ ಸಂಚಾಲಕರಾದ ಪ್ರೊ. ರಾಮ ಕೆ. ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ತನುಷ್ ಡಿ, ಕಾರ್ಯದರ್ಶಿ ಅಕ್ಷಯ್ ರೈ ಕೆ, ಜತೆ ಕಾರ್ಯದರ್ಶಿ ಮರೀನಾ ಮೊಂತೇರೋ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ದೀಕ್ಷಾ, ಜತೆ ಕಾರ್ಯದರ್ಶಿ ಸಂದೇಶ್, ಕ್ರೀಡಾ ಸಂಘದ ಕಾರ್ಯದರ್ಶಿ ವಿಲಾಸ್ ಜತೆ ಕಾರ್ಯದರ್ಶಿ ಲತೀಕ ವೇದಿಕೆಯಲ್ಲಿ ಉಪಸ್ಥಿತಿದ್ದರು.
ಕುಮಾರಿ ಅನಿತಾ, ಅಕ್ಷತಾ ಹಾಗೂ ತನ್ಮಶ್ರೀ ಪ್ರಾರ್ಥಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಪ್ರೊ. ಅಶ್ವಿನಿ ಕೆ. ಸ್ವಾಗತಿಸಿದರು. ಎನ್ಎಸ್ಎಸ್ ಯೋಜನಾಧಿಕಾರಿ ಪ್ರೊ. ಉದಯಶಂಕರ ಎಚ್. ವಂದಿಸಿದರು. ಕಾಲೇಜಿನ ಗ್ರಂಥಪಾಲಕರಾದ ಶ್ರೀರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಾ ಸ್ಪಂದನ ಕಾರ್ಯಕ್ರಮ;-
ಸಭಾ ಕಾರ್ಯಕ್ರಮದ ಬಳಿಕ ನಡೆದ ಪ್ರತಿಭಾ ಸ್ಪಂದನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಹಪಠ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ಸೃಜನಶೀಲತೆ, ಅಭಿವ್ಯಕ್ತಿ ಸಾಮರ್ಥ್ಯ, ಸ್ಪರ್ಧಾ ಮನೋಭಾವ ಮತ್ತು ಕಲಾತ್ಮಕ ಪ್ರತಿಭೆಗಳಿಗೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಯಿತು.ಬೆಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಂಜಿತ್, ಕನ್ನಡ ವಿಭಾಗದ ಉಪನ್ಯಾಸಕಿ ಮೈತ್ರಿ ಭಟ್ ಹಾಗೂ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ರಕ್ಷಿತಾ ತೀರ್ಪುಗಾರರಾಗಿ ಸಹಕರಿಸಿದರು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಿ.ಎಸ್ಸಿ. ವಿಭಾಗದ ವಿದ್ಯಾರ್ಥಿಗಳು ಪ್ರಥಮ ಬಹುಮಾನ, ಬಿ.ಕಾಂ. ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಹಾಗೂ ಬಿ.ಎ. ಮತ್ತು ಬಿ.ಬಿ.ಎ. ವಿಭಾಗದ ವಿದ್ಯಾರ್ಥಿಗಳು ತೃತೀಯ ಬಹುಮಾನವನ್ನು ಗಳಿಸಿದರು.ಪ್ರೊ. ಅನಂತ ಭಟ್ ಕಾರ್ಯಕ್ರಮ ನಿರ್ವಹಿಸಿದರು.










