ಆಲಂಕಾರು: ಥಾರ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು, ಚಾಲಕ ಪರಾರಿ- ಪ್ರಕರಣ ದಾಖಲು

0

ಆಲಂಕಾರು: ಥಾರ್ ಜೀಪೊಂದು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆಯಲ್ಲಿ ಸೆ.25ರಂದು ರಾತ್ರಿ ನಡೆದಿದೆ. ಈ ಮಧ್ಯೆ ಡಿಕ್ಕಿಯಾದ ಥಾರ್ ಜೀಪು ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದು, ಸ್ಥಳೀಯರು ತಡರಾತ್ರಿ ತನಕವೂ ಹುಡುಕಾಟ ನಡೆಸಿ ನಡುಗುಡ್ಡೆ ಎಂಬಲ್ಲಿ ವಾಹನವನ್ನು ಪತ್ತೆ ಹಚ್ಚಿ ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಚಾಲಕ ನಾಪತ್ತೆಯಾಗಿದ್ದಾನೆ.


ಬೈಕ್ ಸವಾರ ಆಲಂಕಾರು ಗ್ರಾಮದ ನಾಡ್ತಿಲ ನಿವಾಸಿ ಧರ್ಣಪ್ಪ ಗೌಡರವರ ಪುತ್ರ ಲೋಕೇಶ್ (42ವ.) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸ್ವಂತ ಪಿಕಪ್ ಹೊಂದಿದ್ದ ಲೋಕೇಶ್ ಅವರು ಆಲಂಕಾರಿನಲ್ಲಿ ಬಾಡಿಗೆ ನಡೆಸುತ್ತಿದ್ದರು. ಸೆ.25ರಂದು ಸಂಜೆ ಮನೆಗೆ ಹೋಗಿದ್ದ ಅವರು ರಾತ್ರಿ ತನ್ನ ಟಿವಿಎಸ್ ವಿಕ್ಟರ್ ಬೈಕ್ (ಕೆಎ 21, ವೈ 5006)ನಲ್ಲಿ ಮತ್ತೆ ಆಲಂಕಾರು ಪೇಟೆಗೆ ಬಂದವರು ಆಲಂಕಾರು ಪೇಟೆಯಿಂದ ಆಚಾರಿಕೊಟ್ಯ ಕಡೆಗೆ ಹೋಗುತ್ತಿದ್ದ ವೇಳೆ ಕುಂತೂರು ಕಡೆಯಿಂದ ವೇಗವಾಗಿ ಬಂದ ಕಪ್ಪು ಬಣ್ಣದ ಮಹೀಂದ್ರ ಥಾರ್ ಜೀಪು (ಕೆಎ 21, ಎಂಬಿ 0233) ಹಿಂದಿನಿಂದ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಲೋಕೇಶ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಆರೋಪಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದ. ಗಾಯಾಳುವನ್ನು ಸ್ಥಳೀಯರು ಉಪಚರಿಸಿ ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯದರಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 11 ಗಂಟೆ ವೇಳೆಗೆ ಲೋಕೇಶ್ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಆಲಂಕಾರು ನಿವಾಸಿ ರಂಜಿತ್ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ.; 112/2026, ಕಲಂ: 281, 106 ಬಿಎನ್‌ಎಸ್ ಮತ್ತು ಕಲಂ 134(a & b) ಐಎಂವಿ ಆಕ್ಟ್ ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತ ಲೋಕೇಶ್ ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕಾರು ಪರಾರಿ, ಹುಡುಕಾಟ;
ಅಪಘಾತವೆಸಗಿ ಪರಾರಿಯಾದ ಥಾರ್ ಜೀಪು ಸ್ಥಳೀಯ ಹೊಟೇಲ್ ಉದ್ಯಮಿಗೆ ಸೇರಿದ್ದು, ಅಪಘಾತದ ವೇಳೆ ಆತನ ಸಹೋದರ ವಾಹನ ಚಲಾಯಿಸುತ್ತಿದ್ದ ಎಂಬ ಸುದ್ದಿ ಹರಡಿತ್ತು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಯುವಕರ ಗುಂಪು ಆಲಂಕಾರು ಪೇಟೆಯಲ್ಲಿ ಜಮಾಯಿಸತೊಡಗಿ ಪರಾರಿಯಾಗಿದ್ದ ವಾಹನದ ಹುಡುಕಾಟ ಆರಂಭಿಸಿದರು. ಜನ ಗುಂಪು ಸೇರುತ್ತಿದ್ದಂತೆ ತುಸು ಉದ್ವಿಘ್ನ ಪರಿಸ್ಥಿತಿಯೂ ನಿರ್ಮಾಣಗೊಂಡಿತು. ಕಾರು ಉಪ್ಪಿನಂಗಡಿ ಕಡೆಗೆ ಪರಾರಿಯಾಗಿದೆ ಎಂಬ ಮಾಹಿತಿ ಪಡೆದುಕೊಂಡ ಯುವಕರು ಆತೂರು, ರಾಮಕುಂಜ, ಕೊಯಿಲ, ಉಪ್ಪಿನಂಗಡಿ, ನೆಲ್ಯಾಡಿ ಮುಂತಾದ ಕಡೆಗಳಿಗೆ ಮಾಹಿತಿ ರವಾನಿಸಿ ಕಾರಿನ ಬಗ್ಗೆ ನಿಗಾ ನೀಡುವಂತೆ ತಿಳಿಸಿದ್ದರು. ಆದರೆ ಕಾರು ಆಲಂಕಾರು ಪೇಟೆಯಿಂದ 2 ಕಿ.ಮೀ ದೂರದಲ್ಲಿರುವ ನೆಕ್ಕರೆ ದಾಟಿಲ್ಲ ಎಂಬ ಮಾಹಿತಿ ಖಚಿತವಾಗುತ್ತಿದ್ದಂತೆ ಕಾರು ಆಲಂಕಾರು ವ್ಯಾಪ್ತಿಯಲ್ಲೇ ಇರಬಹುದೆಂದು ಅರಿತ ಯುವಕರ ತಂಡ ಕಾರು ಪತ್ತೆಗೆ ಶೋಧ ಮುಂದುವರಿಸಿತು. ಈ ಮಧ್ಯೆ ನಡುಗುಡ್ಡೆ ಸಂಪರ್ಕಿಸುವ ರಸ್ತೆಯ ಮೂಲಕ ಯಾವುದೋ ವಾಹನ ಸಂಚರಿಸಿದ ಚಕ್ರದ ಗುರುತಿನ ಆಧಾರದಲ್ಲಿ ಯುವಕರ ತಂಡವೊಂದು ಹುಡುಕುತ್ತಾ ಸಾಗಿತು. ಇಲ್ಲಿನ ನಿವಾಸಿಯೋರ್ವರ ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಅಪಘಾತವೆಸಗಿದ ಕಾರು ನಡುಗುಡ್ಡೆ ಕಡೆಗೆ ಸಾಗಿರುವುದು ಖಚಿತವಾಗಿ ಹುಡುಕಾಟ ನಡೆಸಿದಾಗ ಮನೆಯೊಂದರ ಅಂಗಳದಲ್ಲಿ ಕಾರು ಪತ್ತೆಯಾಯಿತು.


ಉದ್ರಿಕ್ತ ವಾತಾವರಣ:
ವಾಹನ ಪತ್ತೆಯಾದರೂ ಚಾಲಕ ನಾಪತ್ತೆಯಾಗಿದ್ದ. ನಡುಗುಡ್ಡೆಯಲ್ಲಿ ವಾಹನ ಪತ್ತೆಯಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಜನರ ಗುಂಪು ಅಲ್ಲಿಗೆ ಬರಲಾರಂಭಿಸಿತ್ತು. ಇದರಿಂದಾಗಿ ಅಲ್ಲಿ ತುಸು ಉದ್ರಿಕ್ತ ವಾತಾವರಣವೂ ನಿರ್ಮಾಣವಾಗಿತ್ತು ಎಂದು ಹೇಳಲಾಗಿದೆ. ತಕ್ಷಣ ಘಟನಾ ಸ್ಥಳಕ್ಕೆ ಬಂದ ಕಡಬ ಠಾಣೆ ಪಿಎಸ್‌ಐ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು ಪರಿಸ್ಥಿತಿ ಹತೋಟಿಗೆ ತಂದು ಅಪಘಾತವೆಸಗಿದ ವಾಹನ ವಶಪಡಿಸಿಕೊಂಡು ಠಾಣೆಗೆ ಸಾಗಿಸಿದರು. ಸೆ.26ರಂದು ಘಟನಾ ಸ್ಥಳಕೆ ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಡಿವೈಎಸ್‌ಪಿ ರೋಹಿಣಿ, ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಪರಾರಿಯಾದ ಚಾಲಕನ ಬಂಧನಕ್ಕೆ ಆಗ್ರಹ
ಸೆ.26ರಂದು ಮಧ್ಯಾಹ್ನದ ವೇಳೆ ಲೋಕೇಶ್‌ರವರ ಮೃತದೇಹ ಆಲಂಕಾರಿಗೆ ತಲುತ್ತಿದ್ದಂತೆ ಪೇಟೆಯಲ್ಲಿ ಜಮಾವಣೆಗೊಂಡ ಸಾರ್ವಜನಿಕರು ಅಪಘಾತವೆಸಗಿದ ಚಾಲಕನ ಬಂಧಿಸುವಂತೆ ಒತ್ತಾಯಿಸಿ ಸಾಂಕೇತಿಕವಾಗಿ ಪ್ರತಿಭಟನೆಯೂ ನಡೆಸಿದರು. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ತುಸು ಹೊತ್ತು ವಾಹನ ಸಂಚಾರಕ್ಕೂ ಅಡ್ಡಿಯಾಗಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಪರಾರಿಯಾಗಿರುವ ಆರೋಪಿ ಎಲ್ಲೇ ಅಡಗಿದ್ದರು ಆತನನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮಕೈಗೊಳ್ಳುತ್ತೇವೆ. ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ರಾಜ್ಯ ಹೆದ್ದಾರಿಗೆ ಆಲಂಕಾರು ಪೇಟೆಯಲ್ಲಿ ಹಂಪ್ಸ್ ಅಳವಡಿಸಲು ಸೂಚಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಗಾಂಜಕ್ಕೆ ಕಡಿವಾಣ ಹಾಕಿ;
ಆಲಂಕಾರು, ಕುಂತೂರು ಭಾಗದಲ್ಲಿ ರಾತ್ರಿ ವೇಳೆ ಗಾಂಜ ಹಾಗೂ ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಇದರಿಂದಾಗಿಯೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಅಮಾಯಕರ ಜೀವಗಳು ಬಲಿಯಾಗುತ್ತಿವೆ. ಗಾಂಜ ಸರಬರಾಜು ಹಾಗೂ ಮಾರಾಟದಂತಹ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿ ಕಠಿಣ ಕ್ರಮ ಜರಗಿಸಬೇಕೆಂದು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here