ಉಪ್ಪಿನಂಗಡಿ: ಹೆದ್ದಾರಿ ಅಗಲೀಕರಣದ ವೇಳೆ ರಸ್ತೆ ಸಂಪರ್ಕ ಕಡಿತ-ವೃದ್ಧ ದಂಪತಿ ಪರದಾಟ

0

ಉಪ್ಪಿನಂಗಡಿ : ಹೆದ್ದಾರಿ ಅಗಲೀಕರಣದ ಕಾಮಗಾರಿ ವೃದ್ದರಿಬ್ಬರನ್ನು ವರ್ಷಗಳ ಕಾಲ ಅಘೋಷಿತ ದಿಗ್ಭಂಧನಕ್ಕೀಡು ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಹಲವಾರು ಹೊಸ ಬಗೆಯ ಸಮಸ್ಯೆಗಳು ಪ್ರತ್ಯಕ್ಷವಾಗಿ ಗೋಚರಿಸಿದ್ದು, ಮನವಿಯೋ ಪ್ರತಿಭಟನೆಯೋ ಮೊದಲಾದ ಮಾರ್ಗೋಪಾಯಗಳಿಂದ ಅವುಗಳನ್ನು ಬಗೆಹರಿಸಲಾಗಿದೆ. ಆದರೆ ಇಲ್ಲಿ ಮೋಲ್ನೋಟಕ್ಕೆ ಹೆದ್ದಾರಿ ಇಲಾಖೆಯ ಕರ್ತವ್ಯ ಲೋಪ ಕಾಣಿಸದು. ಅವರು ಭೂ ಸ್ವಾದೀನಕ್ಕೊಳಪಡಿಸಿದ ಭೂಮಿಯಲ್ಲಿ ಪೂರ್ವಯೋಜಿತ ಕಾಮಗಾರಿಯನ್ನು ನಡೆಸಿಕೊಂಡು ಹೋಗಿದ್ದಾರೆ. ಆದರೆ ಭೂಸ್ವಾದೀನಕ್ಕೊಳಗಾದ ಸ್ಥಳದ ಸನಿಹದಲ್ಲೇ ಎತ್ತರದ ಭೂಮಿಯಲ್ಲಿರುವ ಮನೆಯೊಂದಕ್ಕೆ ಇದ್ದ ಸಂಪರ್ಕ ರಸ್ತೆ ಕಡಿಯಲ್ಪಟ್ಟು , ಅತ್ತ ರಸ್ತೆಯೂ ಇಲ್ಲ, ಇತ್ತ ಸುವ್ಯವಸ್ಥಿತ ಕಾಲು ದಾರಿಯೂ ಇಲ್ಲದೆ ಈ ಮನೆಯಲ್ಲಿನ ವೃದ್ದರಿಬ್ಬರು ಪಡಬಾರದ ಸಮಸ್ಯೆಗೆ ತುತ್ತಾಗಿದ್ದಾರೆ.

ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ವೃದ್ದರೊಬ್ಬರು ಅರ್ಜಿ ಸಲ್ಲಿಕೆಗೆ ಅಂಗಲಾಚುತ್ತಿದ್ದಾಗ ಗಮನ ಸೆಳೆಯಲ್ಪಟ್ಟು ಮಾಧ್ಯಮದ ಮಂದಿಯಿಂದ ವಿಚಾರಿಸಲ್ಪಟ್ಟಾಗಲೇ ಈ ವೃದ್ದ ದಂಪತಿಗಳ ಸಂಕಷ್ಠ ಅನಾವರಣಗೊಂಡಿರುವುದು.

ಅವರು 78ರ ಹರೆಯದ ಗಿಲ್ಬರ್ಟ್ ಆಂಟನಿ ಮಿನೇಜಸ್, ಉಪ್ಪಿನಂಗಡಿಯ ಹೃದಯಭಾಗ ಎಂಬಂತಿರುವ ಗಾಂಧೀಪಾರ್ಕ್ ನಿವಾಸಿ . ಅವರ ಪತ್ನಿ 73 ರ ಹರೆಯದ ವೃದ್ದೆ. ಅನಾರೋಗ್ಯ ಪೀಡಿತೆ. ಪದೇ ಪದೇ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇರುವುದರಿಂದ ಅನುಕೂಲತೆಗೆಂದು ಕಾರೊಂದನ್ನು ಹೊಂದಿದ್ದರು. ಯಾವಾಗ ಹೆದ್ದಾರಿ ರಸ್ತೆ ಅಗಲೀಕರಣಕ್ಕೆಂದು ಇವರ ಮನೆಯ ಎದುರಿನ ಭೂ ಭಾಗವನ್ನು ಕಡಿಯಲಾಯಿತೋ ಅಲ್ಲಿಂದ ಇವರ ಕಾರು ಸಂಚರಿಸುವ ರಸ್ತೆಯೂ ನಾಶವಾಯಿತು. ಸಮಸ್ಯೆಯನ್ನು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದು , ಅವರ ಒತ್ತಡದಿಂದ ಅಲ್ಲಿ ತಡೆಗೋಡೆಯೊಂದನ್ನು ನಿರ್ಮಿಸಲಾಯಿತ್ತಾದರೂ ಅದು ಪೂರ್ಣಗೊಳ್ಳದೆ ಅರ್ಧಕ್ಕೆ ಕೊನೆಗೊಳಿಸಲಾಯಿತು. ಇದರಿಂದಾಗಿ ರಸ್ತೆಯೇ ಇಲ್ಲದೆ ಕಾರನ್ನು ಹೊರತೆಗೆಯಲೂ ಆಗದೆ ಅನಾರೋಗ್ಯ ಪೀಡಿತ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಮನೆಯಲ್ಲಿಯೇ ಇರಿಸುವ ದುಃಸ್ಥಿತಿ ಇವರದ್ದಾಗಿದೆ. ಪ್ರಸಕ್ತ ಮನೆಗೆ ಸಂಪರ್ಕ ರಸ್ತೆಯೇ ಇಲ್ಲದೆ ಯಾವುದೇ ವಾಹನವೂ ಬರಲಾಗದ ಸ್ಥಿತಿಯಲ್ಲಿರುವ ಈ ದಂಪತಿಗಳಿಗೆ ಅಘೋಷಿತ ದಿಗ್ಭಂಧನ ವಿಧಿಸಿದಂತಾಗಿದೆ.

ಹೆದ್ದಾರಿ ಇಲಾಖೆಯ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯ ಅಧಿಕಾರಿಗಳು ಕಾಮಗಾರಿಯಿಂದ ಯಾವೊಬ್ಬ ವ್ಯಕ್ತಿಯ ಸಹಜ ಬದುಕಿಗೆ ತೊಂದರೆಯುಂಟಾಗದಂತೆ ಎಚ್ಚರಿಕೆ ವಹಿಸಬೇಕಾದ ಕರ್ತವ್ಯ ಬದ್ದತೆಯನ್ನು ಇಲ್ಲಿ ಮರೆತಂತಿದೆ. ಈ ವೃದ್ದ ದಂಪತಿಗಳ ನೋವು , ಅಳಲು ಅರಣ್ಯರೋಧನವಾಗಿರುವುದು ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ಒಂದು ವರ್ಷದಿಂದ ಭರವಸೆ ಮಾತ್ರ ಲಭಿಸುತ್ತಿದೆ:

ಹೆದ್ದಾರಿಯ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ನಮ್ಮ ಮನೆ ಎದುರಿನ ಭೂ ಭಾಗವನ್ನು ಕಡಿಯಲಾಯಿತು. ತತ್ ಪರಿಣಾಮ ಅಲ್ಲಿದ್ದ ರಸ್ತೆಯು ಮಳೆಗಾಲದಲ್ಲಿ ಕುಸಿತಕ್ಕೆ ಒಳಗಾಗಿ ನಾಶವಾಯಿತು. ಅಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆಯನ್ನು ಪುನರ್ ನಿರ್ಮಿಸಿಕೊಡಿ ಎಂದು ಕಂಡ ಕಂಡವರಲ್ಲಿ ವಿನಂತಿಸಿದೆ. ಇತ್ತೀಚೆಗೆ ತಡೆಗೋಡೆ ನಿರ್ಮಾಣ ನಡೆಯಿತ್ತಾದರೂ ಅದು ಅರ್ಧದಲ್ಲಿಯೇ ನಿಂತಿದೆ. ಮನೆಯಲ್ಲಿನ ಅನಾರೋಗ್ಯ ಪೀಡಿತ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲೂ ಕೂಡಾ ಆಗದ ಸ್ಥಿತಿ ಎದುರಾಗಿದೆ. ಮನೆಯಲ್ಲಿ ಕಾರಿದೆ. ಚಿಕಿತ್ಸೆ ಕೊಡಿಸಲು ಆಸ್ಪತ್ರೆ ಇದೆ. ಆದರೆ ಕರೆದೊಯ್ಯಲು ರಸ್ತೆಯೇ ಇಲ್ಲದೆ ಮನೆಯಲ್ಲಿಯೇ ಬಂಧಿಸಲ್ಪಟ್ಟ ಸ್ಥಿತಿ ನಮ್ಮದಾಗಿದೆ. ಶಾಸಕರಾದಿಯಾಗಿ ಎಲ್ಲರಲ್ಲೂ ಮನವಿ ಕೊಟ್ಟಿದ್ದೇನೆ. ನಮಗೆ ನ್ಯಾಯ ಸಿಗಬೇಕಾಗಿದೆ ಎಂದು ಗಿಲ್ಬರ್ಟ್ ಆಂಟನಿ ಮಿನೇಜಸ್ ಹೇಳಿದ್ದಾರೆ.

ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿದೆ:

ಮಿನೇಜಸ್ ವೃದ್ದ ದಂಪತಿಗಳ ಸಂಕಷ್ಠ ತಿಳಿದಿದೆ. ಹೆದ್ದಾರಿ ಕಾಮಗಾರಿ ಸಂಸ್ಥೆಯ ಅಧಿಕಾರಿಗಳಲ್ಲಿ ವಿನಂತಿಸಿ ಅವರ ವ್ಯಾಪ್ತಿಯ ಹೊರತಾಗಿಯೂ ಅಲ್ಲಿ ತಡೆಗೋಡೆ ನಿರ್ಮಿಸಲು ಪ್ರಯತ್ನಿಸಲಾಗಿದೆ. ಆದರೆ ತಡೆಗೋಡೆಯನ್ನು ನಮ್ಮ ಅಪೇಕ್ಷಿತ ಎತ್ತರಕ್ಕೆ ನಿರ್ಮಿಸಿಲ್ಲ. ಅಪೇಕ್ಷಿತ ಎತ್ತರಕ್ಕೆ ತಡೆಗೋಡೆ ನಿರ್ಮಿಸಿದ್ದಲ್ಲಿ ಆ ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಪಂಚಾಯತ್ ನಿಂದಲಾದರೂ ನಡೆಸಬಹುದಾಗಿದೆ. ಹಲವಾರು ಅಡೆತಡೆಗಳಿವೆ. ಅಧಿಕಾರಿಗಳು ಒಂದಷ್ಟು ಗಮನಹರಿಸಿದರೆ ಈ ವೃದ್ದ ದಂಪತಿಗಳ ಸಮಸ್ಯೆಯನ್ನು ನಿವಾರಿಸಬಹುದಾಗಿದೆ ಎಂದು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ , ಗ್ರಾ.ಪಂ. ಮಾಜಿ ಸದಸ್ಯ ಯು ಟಿ ಮಹಮ್ಮದ್ ತೌಷೀಪ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here