







ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ತಾಲೂಕು ಇದರ ಉಪ್ಪಿನಂಗಡಿ ವಲಯದ ಬಜತ್ತೂರು, ವಳಾಲು ಹಾಗೂ ಕಾಂಚನ ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಸೆ.27ರಂದು ಮುದ್ಯ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.



ಬೆಳಗ್ಗೆ 7 ಗಂಟೆಗೆ ಗಣಹೋಮ, ದೇವಸ್ಥಾನದಲ್ಲಿ ನಿತ್ಯ ಪೂಜೆ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟಿ ಶ್ರೀಧರ್ ಅವರು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ದ.ಕ.ಜಿಲ್ಲೆ 2 ಇದರ ರಿಕವರಿ ಯೋಜನಾಧಿಕಾರಿ ಆನಂದ್ ಕೆ. ಅವರು ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿ ಮೂರು ಒಕ್ಕೂಟಗಳ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿದರು. ಇನ್ನೋರ್ವ ಅತಿಥಿ ಪುತ್ತೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಮಾತನಾಡಿ, ನಾವು ಸಂಘದಲ್ಲಿ ಮಾಡುವ ಸಾಲದ ಬಗ್ಗೆ ಮನೆಯಲ್ಲಿ ಮಕ್ಕಳಿಗೆ ತಿಳಿಸಿ ಕೊಡಿ. ಇದರಿಂದ ಯೋಜನೆಯ ಬಗ್ಗೆ ಅಪಪ್ರಚಾರ ಬರಲು ಸಾಧ್ಯವೇ ಇಲ್ಲ. ಯೋಜನೆಯ ಮೂಲಕ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಲಿ ಎಂದರು.




ಉಪ್ಪಿನಂಗಡಿ ಸಿ.ಎ.ಬ್ಯಾಂಕ್ ನಿವೃತ್ತ ಮೇನೇಜರ್ ವಿಶ್ವನಾಥ ಪಿಜಕ್ಕಳ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಮಟ್ಟದಲ್ಲಿ ಆರಂಭವಾದ ಬಗ್ಗೆ ಹಾಗೂ ಆರಂಭಿಕ ಸಂಘದ ಸದಸ್ಯರಾದ ಬಗ್ಗೆ ತಿಳಿಸಿದರು. ಬಜತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗಾಧರ ಗೌಡ ನೆಕ್ಕರಾಜೆ ಅಧ್ಯಕ್ಷತೆ ವಹಿಸಿದ್ದರು. ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಒರುಂಬೋಡಿ, ಗ್ರಾಮಾಭಿವೃದ್ಧಿ ಯೋಜನೆ ಉಪ್ಪಿನಂಗಡಿ ವಲಯಾಧ್ಯಕ್ಷ ನಾರಾಯಣ ಕೆಳಗಿನಮನೆ, ವಳಾಲು ಒಕ್ಕೂಟದ ಅಧ್ಯಕ್ಷ ಮಹೇಂದ್ರ ವರ್ಮ ಹಾಗೂ ಕಾಂಚನ, ವಳಾಲು, ಬಜತ್ತೂರು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ಧರು. ಮೇಲ್ವಿಚಾರಕ ಶಿವಪ್ಪ ಎಂ.ಕೆ. ಸ್ವಾಗತಿಸಿದರು. ಧನ್ಯ ವಂದಿಸಿದರು. ಸೇವಾ ಪ್ರತಿನಿಧಿಯವರಾದ ಬೇಬಿ, ರಾಜೇಶ್ವರಿ, ಮಮತಾ ಪ್ರಾರ್ಥಿಸಿದರು.










