







ಉಪ್ಪಿನಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೆ ಒಳಪಟ್ಟ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಎ.ಲಕ್ಷ್ಮಣ ಗೌಡ ಅವರು 31 ವರ್ಷಗಳ ಸುದೀರ್ಘ ಸೇವೆಯ ನಂತರ ಸೆ.30ರಂದು ಸೇವಾ ನಿವೃತ್ತಿಯಾಗಲಿದ್ದಾರೆ.


ಇವರು 25-7-1995ರಂದು ಮಲವಂತಿಗೆ ಸರ್ಕಾರಿ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನ ಆರಂಭಿಸಿದ್ದರು. ಇಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ 2008 ರಿಂದ 2013ರ ತನಕ ಪುದುವೆಟ್ಟು ಎಸ್‌ಡಿಎಂ ಅನುದಾನಿತ ಶಾಲೆಯಲ್ಲಿ, 2013ರಿಂದ 2020ರ ತನಕ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. 2020ರಲ್ಲಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕರಾಗಿ ಅಧಿಕಾರ ವಹಿಸಿಕೊಂಡ ಇವರು ಮುಚ್ಚುವ ಹಂತದ್ದಲ್ಲಿದ್ದ ಕಾಂಚನ ಶಾಲೆಗೆ ಹೊಸ ಚೈತನ್ಯ ತುಂಬಿದರು. ತಮ್ಮ ದೂರದೃಷ್ಟಿ, ಆಡಳಿತಾತ್ಮಕ ಸಾಮರ್ಥ್ಯ ಮತ್ತು ನಾಯಕತ್ವದಿಂದಾಗಿ ಶಾಲೆಯ ದಾಖಲಾತಿಯನ್ನು 67 ರಿಂದ 234ಕ್ಕೆ ಏರಿಸಿದ ಸಾಧನೆ ಮಾಡಿದರು. ಶಾಲೆಗೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಹಾಗೂ ನೂತನ ಕಟ್ಟಡ ನಿರ್ಮಾಣಗೊಳಿಸುವಲ್ಲಿ ಶ್ರಮಿಸಿದ್ದರು. ವಿಜ್ಞಾನ ಶಿಕ್ಷಕರಾಗಿ ಪಠ್ಯಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದರು. ಸ್ಕೌಟ್, ಗೈಡ್ ಮತ್ತು ಕಬ್ ಮಾಸ್ಟರ್ ಆಗಿ ಮಕ್ಕಳಲ್ಲಿ ಶಿಸ್ತು, ನಾಯಕತ್ವ, ಸಮಯಪ್ರಜ್ಞೆ ಬೆಳೆಸಿದರು. ಇವರ ಮಾರ್ಗದರ್ಶನದಲ್ಲಿ ಕಾಂಚನ ಶಾಲೆಯ ಮಕ್ಕಳು ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ್ದು ಪ್ರತಿಭಾ ಕಾರಂಜಿಯಲ್ಲಿ ಪ್ರತಿವರ್ಷ ಸಮಗ್ರ ಪ್ರಶಸ್ತಿ ಪಡೆಯುತ್ತಿದ್ದಾರೆ. ಇವರ ಸಾರ್ಥಕ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು 2026-27ನೇ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಪುದುವೆಟ್ಟು ಅರಸೊಳಿಗೆ ಮನೆತನದ ದಿ| ರಾಮಗೌಡ ಮತ್ತು ಸೀತಮ್ಮ ದಂಪತಿ ಪುತ್ರರಾದ ಲಕ್ಷ್ಮಣ ಗೌಡ ಅವರು ಪುದುವೆಟ್ಟು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪ.ಪೂ.ಶಿಕ್ಷಣ ಪೂರೈಸಿದರು. ಕೊಕ್ಕರ್ಣೆ ಕುಮುದ ಉಮಾಶಂಕರ ಶಿಕ್ಷಕರ ತರಬೇತಿ ಶಾಲೆಯಲ್ಲಿ ಶಿಕ್ಷಕರ ತರಬೇತಿ ಪಡೆದುಕೊಂಡಿದ್ದರು. ಇವರ ಪತ್ನಿ ಚಂದ್ರಾವತಿ ಎಂ.ಅವರು ಬೆಳ್ತಂಗಡಿ ಕೊಡಿಯಾಲಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಆದರ್ಶ ಎ.ಎಲ್.ಅವರು ಎಂಬಿಬಿಎಸ್ ಪೂರ್ಣಗೊಳಿಸಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಪುತ್ರಿ ವೈಷ್ಣವಿ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ.













